LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureEditorialBeautyRecipes

ಶಿವಂ ಅಸೋಸಿಯೇಟ್ಸ್ ಬಹುಕೋಟಿ ವಂಚನೆ : ಶಿವಾನಂದ ನೀಲಣ್ಣನವರ್‌ ಆಸ್ತಿ ಜಪ್ತಿ ಶುರು

ಬೆಳಗಾವಿ, ಮೇ 16 : ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಶಿವಂ ಅಸೋಸಿಯೇಟ್ಸ್ ವ್ಯವಸ್ಥಾಪಕ ನಿರ್ದೇಶಕ ಶಿವಾನಂದ ನೀಲಣ್ಣನವರ್‌ ಅವರನ್ನು ಪೊಲೀಸರು ಬಂಧಿಸಿ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಪ್ರಕರಣದ ತನಿಖೆ ಚುರುಕುಗೊಂಡಿದ್ದು, ಇಂದಿನಿಂದ ಆಸ್ತಿ, ಬ್ಯಾಂಕ್‌ ಖಾತೆಗಳು ಹಾಗೂ ದಾಖಲೆಗಳ ಜಪ್ತಿ ಕಾರ್ಯಾಚರಣೆ ಆರಂಭಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಆದೇಶದ ಮೇರೆಗೆ ಕಳೆದ ಎರಡು ದಿನಗಳಿಂದ ಉಪ ವಿಭಾಗಾಧಿಕಾರಿ ಶ್ರವಣ್‌ ನಾಯಕ್‌ ನೇತೃತ್ವದಲ್ಲಿ ಸಹಕಾರ ಇಲಾಖೆ, ಪೊಲೀಸ್‌ ಇಲಾಖೆ ಹಾಗೂ ಇತರೆ ಅಧಿಕಾರಿಗಳ ಜಂಟಿ ತಂಡವು ಕಾರ್ಯಾಚರಣೆ ನಡೆಸಿತ್ತು. ಈ ವೇಳೆ ಶಿವಂ ಅಸೋಸಿಯೇಟ್ಸ್ ಸಂಸ್ಥೆಯ ಹಣಕಾಸು ವ್ಯವಹಾರಗಳ ಕುರಿತು ಮಹತ್ವದ ಮಾಹಿತಿ ಲಭ್ಯವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಾಥಮಿಕ ತನಿಖೆಯಲ್ಲಿ ಶಿವಾನಂದ ನೀಲಣ್ಣನವರ್‌ ಸುಮಾರು 35 ಸಾವಿರ ಜನರಿಗೆ ವಾರ್ಷಿಕ ಶೇ.36 ಬಡ್ಡಿ ನೀಡುವುದಾಗಿ ಭರವಸೆ ನೀಡಿ ಸಾರ್ವಜನಿಕರಿಂದ ಸುಮಾರು ₹4,500 ಕೋಟಿ ಸಂಗ್ರಹಿಸಿರುವ ಶಂಕೆ ವ್ಯಕ್ತವಾಗಿದೆ. 2020ರಲ್ಲಿ ಶಿವಂ ಅಸೋಸಿಯೇಟ್ಸ್ ಸಂಸ್ಥೆ ನೋಂದಣಿಯಾಗಿದ್ದು, ಆಕ್ಯೂಮೆನ್‌ ಆ್ಯಪ್‌ ಮೂಲಕ ಹಣ ಸಂಗ್ರಹ ಮಾಡಲಾಗುತ್ತಿತ್ತು ಎಂದು ತಿಳಿದು ಬಂದಿದೆ.

ಸಂಸ್ಥೆ ಕೈಸಾಲ ಕರಾರುಗಳ ಮೂಲಕ ಸಾರ್ವಜನಿಕರಿಂದ ಹಣ ಪಡೆದುಕೊಂಡಿದ್ದು, ಹೂಡಿಕೆದಾರರಿಗೆ ಹೆಚ್ಚಿನ ಲಾಭದ ಆಮಿಷವೊಡ್ಡಲಾಗುತ್ತಿತ್ತು. ಸಂಗ್ರಹಿಸಿದ ಹಣವನ್ನು ಯಾವ ಉದ್ದೇಶಕ್ಕೆ ಬಳಸಲಾಗಿದೆ, ಬ್ಯಾಂಕ್‌ ವಹಿವಾಟುಗಳ ಪ್ರಮಾಣ ಎಷ್ಟು, ನಗದು ರೂಪದಲ್ಲಿ ಎಷ್ಟು ಹಣ ಸಂಗ್ರಹಿಸಲಾಗಿದೆ ಎಂಬ ಎಲ್ಲಾ ಅಂಶಗಳನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.

ಆರ್‌ಬಿಐ, ಸೆಬಿ ನಿಯಮ ಉಲ್ಲಂಘನೆ ಶಂಕೆ

ಶಿವಂ ಅಸೋಸಿಯೇಟ್ಸ್ ಸಂಸ್ಥೆ ಯಾವುದೇ ಕಾನೂನುಬದ್ಧ ಅನುಮತಿ ಇಲ್ಲದೆ ಸಾರ್ವಜನಿಕರಿಂದ ಹಣ ಸಂಗ್ರಹಿಸಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಇದು ಆರ್‌ಬಿಐ ಹಾಗೂ ಸೆಬಿ ನಿಯಮಾವಳಿಗಳ ಸ್ಪಷ್ಟ ಉಲ್ಲಂಘನೆಯಾಗಿರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಹಕಾರ ಇಲಾಖೆಯ ಉಪ ನಿಬಂಧಕರು ನೀಡಿದ ದೂರಿನ ಮೇರೆಗೆ ಬೆಳಗಾವಿಯ ಮಾಳಮಾರುತಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಾಥಮಿಕ ವಿಚಾರಣೆ ನಡೆಸಿದ ಬಳಿಕ ಪೊಲೀಸರು ಶಿವಾನಂದ ನೀಲಣ್ಣನವರ್‌ ಅವರನ್ನು ಬಂಧಿಸಿದ್ದಾರೆ.

ಜಪ್ತಿ ಕಾರ್ಯಾಚರಣೆ ಆರಂಭ

ಬೆಳಗಾವಿ ಪೊಲೀಸ್‌ ಆಯುಕ್ತ ಭೂಷಣ್‌ ಬೋರಸೆ ಮಾತನಾಡಿ, ಆರೋಪಿ ಶಿವಾನಂದ ನೀಲಣ್ಣನವರ್‌ ನೀಡುತ್ತಿರುವ ಮಾಹಿತಿ ಆಧರಿಸಿ ತನಿಖೆ ಮುಂದುವರಿಸಲಾಗಿದೆ. ಆತನಿಗೆ ಸೇರಿದ ಆಸ್ತಿ, ದಾಖಲೆಗಳು ಹಾಗೂ ಬ್ಯಾಂಕ್‌ ಖಾತೆಗಳ ಪರಿಶೀಲನೆ ನಡೆಯುತ್ತಿದೆ. ಅಗತ್ಯವಿದ್ದಲ್ಲಿ ಜಪ್ತಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಪ್ರಾಥಮಿಕ ಮಾಹಿತಿ ಪ್ರಕಾರ ಸುಮಾರು 35 ಸಾವಿರ ಮಂದಿ ಶಿವಂ ಅಸೋಸಿಯೇಟ್ಸ್‌ನಲ್ಲಿ ಹಣ ಹೂಡಿಕೆ ಮಾಡಿರುವುದು ತಿಳಿದು ಬಂದಿದೆ. ಹೂಡಿಕೆದಾರರಿಂದಲೂ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ತಿಳಿಸಿದರು.

ವೈರಲ್‌ ಭಾಷಣದಿಂದ ಹೆಚ್ಚಿದ ಅನುಮಾನ

ಇತ್ತೀಚೆಗೆ ಕಡೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಶಿವಾನಂದ ನೀಲಣ್ಣನವರ್‌ ಮಾಡಿದ ಭಾಷಣ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್‌ ಆಗಿತ್ತು. ಚಿಟಿಕೆ ಹೊಡೆಯುವಷ್ಟರಲ್ಲಿ ಮುಖ್ಯಮಂತ್ರಿಯಾಗುತ್ತೇನೆ, 224 ಕ್ಷೇತ್ರಗಳಲ್ಲೂ ನನ್ನ ಬೆಂಬಲಿಗರನ್ನು ಗೆಲ್ಲಿಸುವ ಶಕ್ತಿ ನನಗಿದೆ, 15 ಸಾವಿರ ಬಂದೂಕುಗಳನ್ನು ಹೊಂದಿದ್ದೇನೆ, ದೊಡ್ಡ ಸಾಮ್ರಾಜ್ಯ ಕಟ್ಟಿದ್ದೇನೆ ಎಂದು ಅವರು ಬಹಿರಂಗ ವೇದಿಕೆಯಲ್ಲಿ ಹೇಳಿಕೊಂಡಿದ್ದರು.

ಈ ಭಾಷಣದ ಬಳಿಕ ಸಂಸ್ಥೆಯ ಚಟುವಟಿಕೆಗಳ ಬಗ್ಗೆ ವ್ಯಾಪಕ ಚರ್ಚೆ ಆರಂಭವಾಗಿತ್ತು. ಮಾರುಕಟ್ಟೆ ಗುಪ್ತಚರ ಮಾಹಿತಿ ಆಧರಿಸಿ ಶಂಕಾಸ್ಪದ ಹಣಕಾಸು ವ್ಯವಹಾರಗಳ ಕುರಿತು ಜಿಲ್ಲಾಧಿಕಾರಿ ತನಿಖೆಗೆ ಸೂಚನೆ ನೀಡಿದ್ದರು. ಅದರಂತೆ ಅಧಿಕಾರಿಗಳ ತಂಡ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ಕೈಗೊಂಡಿತ್ತು.

ಹೂಡಿಕೆದಾರರಲ್ಲಿ ಆತಂಕ

2020ರಿಂದಲೇ ಶಿವಂ ಅಸೋಸಿಯೇಟ್ಸ್ ಸಾರ್ವಜನಿಕರಿಂದ ನಿಯಮ ಉಲ್ಲಂಘಿಸಿ ಹಣ ಸಂಗ್ರಹಿಸುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಏಕೆ ಕ್ರಮ ಕೈಗೊಂಡಿಲ್ಲ ಎಂಬ ಪ್ರಶ್ನೆ ಇದೀಗ ಉದ್ಭವಿಸಿದೆ. ಹಲವು ವರ್ಷಗಳಿಂದ ನಡೆಯುತ್ತಿದ್ದ ವ್ಯವಹಾರಗಳ ವಿರುದ್ಧ ಏಕಾಏಕಿ ಕಾರ್ಯಾಚರಣೆ ಆರಂಭವಾದ ಹಿನ್ನೆಲೆ ಸಾವಿರಾರು ಹೂಡಿಕೆದಾರರಲ್ಲಿ ಆತಂಕ ಮನೆಮಾಡಿದೆ.

ತಮ್ಮ ಹೂಡಿಕೆ ಹಣ ವಾಪಸ್‌ ಸಿಗುತ್ತದೆಯೇ ಎಂಬ ಭಯದಲ್ಲಿ ಅನೇಕರು ಸಂಸ್ಥೆಯ ಕಚೇರಿಗಳತ್ತ ಆಗಮಿಸುತ್ತಿದ್ದಾರೆ. ಪ್ರಕರಣದ ಸಂಪೂರ್ಣ ತನಿಖೆಯ ಬಳಿಕ ಇನ್ನಷ್ಟು ಮಾಹಿತಿ ಹೊರಬರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Author
A B Dharwadkar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮುಸ್ಲಿಮರ 10 ಪ್ರಮುಖ ಬೇಡಿಕೆಗಳಿಗೆ ಸರಕಾರ ಸ್ಪಂದಿಸಲಿ: ಸಮಾವೇಶದಲ್ಲಿ ಒತ್ತಾಯಶಿವಂ ಅಸೋಸಿಯೇಟ್ಸ್ ಬಹುಕೋಟಿ ವಂಚನೆ : ಶಿವಾನಂದ ನೀಲಣ್ಣನವರ್‌ ಆಸ್ತಿ ಜಪ್ತಿ ಶುರುನೀಟ್‌ ಪ್ರಶ್ನೆಪತ್ರಿಕೆ ಸೋರಿಕೆ : ಎನ್‌ಟಿಎ ಪ್ರಶ್ನೆಪತ್ರಿಕೆ ಸಮಿತಿಯ ಜೀವಶಾಸ್ತ್ರ ಉಪನ್ಯಾಸಕಿ ಬಂಧನಮಾಲ್ಡೀವ್ಸ್‌ನಲ್ಲಿ ಕೇವ್‌ ಸ್ಕೂಬಾ ಡೈವಿಂಗ್ ದುರಂತ : ಇಟಲಿಯ 5 ಪ್ರಜೆಗಳ ಸಾವುಮುಂಜಾಗ್ರತಾ ಕ್ರಮವಾಗಿ ಪ್ರಧಾನಿ ಏನು ಮಾಡಿದ್ದಾರೆ : ಸಚಿವೆ ಹೆಬ್ಬಾಳ್ಕರ ಪ್ರಶ್ನೆಸುದೀರ್ಘ ವಿಚಾರಣೆ ನಂತರ ಶಿವಂ ಅಸೋಸಿಯೇಟ್ಸ ಶಿವಾನಂದ‌ ನೀಲಣ್ಣವರ ಬಂಧನ : ಸಾವಿರಾರು ಕೋಟಿ ಅಕ್ರಮ ಹಣ ಸಂಗ್ರಹ ಶಂಕೆಮೋದಿ ಸರಕಾರದ ‘ಅಚ್ಚೇ ದಿನ್’ ಜನ ನೋಡಲೇ ಇಲ್ಲKoppal | ಸೇತುವೆ ಮೇಲಿಂದ ಬಿದ್ದ ಟ್ರ್ಯಾಕ್ಟರ್ : 6 ಮಂದಿ ಸಾವುಡಿಸೇಲ್ ದರ ಏರಿಕೆ ಹೊಡೆತದ ಮೇಲೆ ಖಾಸಗಿ ಬಸ್ ಟಿಕೆಟ್ ದರ ಭಾರಿ ಹೆಚ್ಚಳದ ಪ್ರಹಾರಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ: ಇಂಧನ ಬೆಲೆ ಇಳಿದಾಗ ಲಕ್ಷಾಂತರ ಕೋಟಿ ಲಾಭ ಮಾಡಿಕೊಂಡ ಕಂಪನಿಗಳಿಂದ ಈಗ ಜನರ ಮೇಲೆ ಮತ್ತಷ್ಟು ಹೊರೆ