ಕಾಗವಾಡ, ಜುಲೈ 27: ಜೀವನದ ವಿವಿಧ ಹಾದಿಗಳಲ್ಲಿ ಸಾಗಿದ ಬಳಿಕ ಹಲವು ದಶಕಗಳ ನಂತರ ಮತ್ತೆ ಒಂದೇ ವೇದಿಕೆಯಲ್ಲಿ ಸೇರಿದ್ದ ಉಗಾರ ಬುದ್ರುಕ್ ಗ್ರಾಮದ ಸರ್ಕಾರಿ ಹಿರಿಯ ಕನ್ನಡ ಗಂಡು ಮಕ್ಕಳ ಶಾಲೆಯ ಹಳೆಯ ವಿದ್ಯಾರ್ಥಿಗಳ ‘ಸ್ನೇಹ ಸಮ್ಮಿಲನ–2026’ ಕಾರ್ಯಕ್ರಮ ಭಾನುವಾರ ಭಾವನಾತ್ಮಕ ಕ್ಷಣಗಳಿಗೆ ಸಾಕ್ಷಿಯಾಯಿತು.
1927ರಿಂದ 1966ರ ಅವಧಿಯಲ್ಲಿ ಇದೇ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ ಹಿರಿಯ ವಿದ್ಯಾರ್ಥಿಗಳು ತಮ್ಮ ಬಾಲ್ಯದ ನೆನಪುಗಳನ್ನು ಮೆಲುಕು ಹಾಕುತ್ತ ಪರಸ್ಪರ ಆತ್ಮೀಯವಾಗಿ ಭೇಟಿಯಾದರು. ‘‘ವಯಸ್ಸು ಬರೀ ಸಂಖ್ಯೆ, ಹುಮ್ಮಸ್ಸಿಗೆ ಯಾವ ಅಂಕೆ?’’ ಎಂಬ ಘೋಷವಾಕ್ಯ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿತ್ತು.
ಭಾಗವಹಿಸಿದ್ದ ಹಿರಿಯ ವಿದ್ಯಾರ್ಥಿಗಳಿಗೆ ಸಂಪ್ರದಾಯಬದ್ಧ ಟಾವೆಲ್ ಹಾಗೂ ಗಾಂಧಿ ಟೋಪಿ ತೊಡಿಸಿ, ಗ್ರಾಮದ ಪದ್ಮಾವತಿ ವೃತ್ತ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ವಾದ್ಯಗೋಷ್ಠಿಯೊಂದಿಗೆ ಅದ್ಧೂರಿ ಮೆರವಣಿಗೆ ನಡೆಸಲಾಯಿತು. ಈ ಮೆರವಣಿಗೆ ಗ್ರಾಮಸ್ಥರ ಗಮನ ಸೆಳೆಯಿತು.
ಬಹುಕಾಲದ ನಂತರ ಭೇಟಿಯಾದ ಸ್ನೇಹಿತರು ಪರಸ್ಪರ ಅಪ್ಪಿಕೊಂಡು ಹಳೆಯ ನೆನಪುಗಳನ್ನು ಹಂಚಿಕೊಂಡು ಭಾವುಕರಾದರು. ಬಾಲ್ಯದ ದಿನಗಳು, ಗುರುಗಳ ಮಾರ್ಗದರ್ಶನ ಹಾಗೂ ಶಾಲೆಯಲ್ಲಿನ ಅನುಭವಗಳನ್ನು ಸ್ಮರಿಸಿದ ಅವರು, ತಮ್ಮ ಜೀವನದ ಯಶಸ್ಸಿಗೆ ಈ ಶಾಲೆಯ ಶಿಕ್ಷಣವೇ ಭದ್ರ ಅಡಿಪಾಯ ಹಾಕಿಕೊಟ್ಟಿದೆ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಎಲ್ಲರನ್ನೂ ಸನ್ಮಾನಿಸಲಾಯಿತು. ಎರಡು ದಶಕಗಳ ಹಿಂದಿನ ಜೀವನಶೈಲಿಯನ್ನು ಬಿಂಬಿಸುವ ವಿಡಿಯೊ ಪ್ರದರ್ಶನ ಏರ್ಪಡಿಸಲಾಗಿದ್ದು, ಅದನ್ನು ವೀಕ್ಷಿಸಿದ ಹಿರಿಯರು ತಮ್ಮ ಬಾಲ್ಯದ ದಿನಗಳನ್ನು ಮತ್ತೊಮ್ಮೆ ನೆನಪಿಸಿಕೊಂಡರು. ಬಳಿಕ ಎಲ್ಲರಿಗೂ ಸ್ನೇಹಭೋಜನ ವ್ಯವಸ್ಥೆ ಮಾಡಲಾಗಿತ್ತು.
ಪರಿಸರ ಸಂರಕ್ಷಣೆಯ ಸಂದೇಶ ಸಾರುವ ಉದ್ದೇಶದಿಂದ ಕಾರ್ಯಕ್ರಮದ ಕೊನೆಯಲ್ಲಿ ಪ್ರತಿಯೊಬ್ಬರಿಗೂ ಸಸಿ ವಿತರಿಸಲಾಯಿತು. ಗ್ರಾಮಸ್ಥರು ಹಾಗೂ ಯುವಜನರು ಸಹ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಹಿರಿಯರ ಸ್ನೇಹಬಂಧಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಮಾಜಿ ಶಾಸಕ ಮೋಹನ್ ಶಹಾ, ನಿವೃತ್ತ ನೌಕರರು, ವ್ಯಾಪಾರಿಗಳು, ರೈತರು ಸೇರಿದಂತೆ ಅನೇಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಗೆಳೆಯರ ಬಳಗದ ಸದಸ್ಯರಾದ ಶೀತಲ್ ಕುಂಬಾರ, ಸಚಿನ್ ಕಾಂಬಳೆ, ಪುರಂದರ ತಳವಾರ, ಅಶೋಕ ಕೋರೆ, ಶೇಖರ ಕಾಟಗಾರ, ಭಗವಂತ ತಳವಾರ, ಬುಡ್ಡು ಜಮಖಾನೆ, ಬಂಡು ತಮದಡ್ಡಿ, ದಿಲೀಪ ಕುಸನಾಳೆ, ಪ್ರಕಾಶ ಹನಗಂಡಿ ಸೇರಿದಂತೆ ಹಲವರ ಸಹಕಾರದಿಂದ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಕಾರ್ಯಕ್ರಮವನ್ನು ಈಶ್ವರ ಪಟಗಾರ ನಿರೂಪಿಸಿ ವಂದಿಸಿದರು.
