ಬೆಂಗಳೂರು, ಮೇ 19 : ರಾಜ್ಯ ಸರ್ಕಾರ ಮೂರು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ತುಮಕೂರಿನಲ್ಲಿ ಆಯೋಜಿಸಿರುವುದು ಸಾಧನಾ ಸಮಾವೇಶವಲ್ಲ, ಸತ್ತ ಸರ್ಕಾರದ ಸಮಾರಾಧನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಟೀಕಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಡಳಿತ ಯಂತ್ರ ದುರುಪಯೋಗಪಡಿಸಿಕೊಂಡು ಸಮಾವೇಶ ನಡೆಸಲಾಗುತ್ತಿದೆ. ಅಭಿವೃದ್ಧಿ ಕೆಲಸಗಳಿಲ್ಲ, ಭ್ರಷ್ಟಾಚಾರ ಮಾತ್ರ ಸರ್ಕಾರದ ಸಾಧನೆ ಎಂದು ಆರೋಪಿಸಿದರು.
ಯಾವ ಸಾಧನೆಗಾಗಿ ಸಮಾವೇಶ ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದ ಅವರು, ಜನರನ್ನು ಬಲವಂತವಾಗಿ ಬಸ್‌ಗಳಲ್ಲಿ ಕರೆತರಲಾಗಿದೆ ಎಂದು ದೂರಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಕಳೆದ ಮೂರು ವರ್ಷಗಳಲ್ಲಿ ಯಾವ ಅಭಿವೃದ್ಧಿ ಕೆಲಸ ಮಾಡಿದ್ದಾರೆ, ರೈತರಿಗೆ ಏನು ನೆರವು ನೀಡಿದ್ದಾರೆ ಎಂದು ಪ್ರಶ್ನಿಸಿದರು.
ಗ್ಯಾರಂಟಿಗಳ ಹೆಸರಿನಲ್ಲಿ ಸರ್ಕಾರ ಬದುಕಿದೆ ಎನ್ನುವುದನ್ನು ತೋರಿಸಲು ಮಾತ್ರ ಸಮಾವೇಶ ನಡೆಸಲಾಗುತ್ತಿದೆ.ರಾಜ್ಯವನ್ನು ಸಾಲದ ಹೊರೆಗೆ ತಳ್ಳಿದ್ದು, ಅಲ್ಪಸಂಖ್ಯಾತರ ಓಲೈಕೆ ರಾಜಕಾರಣ ಮುಂದುವರಿಸಿದ್ದಾರೆ ಎಂದು ಟೀಕಿಸಿದರು.
ನಿರುದ್ಯೋಗಿಗಳಿಗೆ ಉದ್ಯೋಗ ನೀಡುವಲ್ಲಿ ಸರ್ಕಾರ ವಿಫಲವಾಗಿದೆ. ಮೀಸಲಾತಿ ಹಾಗೂ ಒಳಮೀಸಲಾತಿ ವಿಚಾರದಲ್ಲೂ ಗೊಂದಲ ಸೃಷ್ಟಿಸಿದೆ. ವಾಲ್ಮೀಕಿ ನಿಗಮ ಹಗರಣ ಬೆಳಕಿಗೆ ಬಂದಾಗಲೇ ಮುಖ್ಯಮಂತ್ರಿ ರಾಜೀನಾಮೆ ನೀಡಬೇಕಿತ್ತು ಎಂದು ಒತ್ತಾಯಿಸಿದರು.
ಈ ವೇಳೆ ಕಾಂಗ್ರೆಸ್ ಸರ್ಕಾರದ ವಿರುದ್ಧದ ಪೋಸ್ಟರ್ ಅನ್ನು ವಿಜಯೇಂದ್ರ ಹಾಗೂ ಇತರ ನಾಯಕರು ಬಿಡುಗಡೆ ಮಾಡಿದರು.