LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureEditorialBeautyRecipes

ತೃಣಮೂಲದಲ್ಲಿ ಬಿರುಕು: ಆಡಳಿತ ಮೈತ್ರಿಯತ್ತ 20 ಸಂಸದರ ಒಲವು

 

ಹೊಸದಿಲ್ಲಿ, ಜೂ. 8 : ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಪಕ್ಷದೊಳಗಿನ ಭಿನ್ನಮತದ ಚರ್ಚೆಗಳು ಹೊಸ ತಿರುವು ಪಡೆದಿದ್ದು, ಪಕ್ಷದ ಸುಮಾರು 20 ಸಂಸದರು ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟಕ್ಕೆ ಬೆಂಬಲ ನೀಡಲು ನಿರ್ಧರಿಸಿದ್ದಾರೆ ಎಂಬ ಹೇಳಿಕೆ ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಟಿಸಿದೆ.

ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯ ಸೋಲಿನ ಬಳಿಕ ಪಕ್ಷದೊಳಗಿನ ಅಸಮಾಧಾನ ತೀವ್ರಗೊಂಡಿರುವ ನಡುವೆಯೇ ಈ ಬೆಳವಣಿಗೆ ನಡೆದಿದೆ. ಇದೇ ವೇಳೆ, ಹೊಸದಿಲ್ಲಿಯಲ್ಲಿ ನಡೆಯುತ್ತಿರುವ ಇಂಡಿಯಾ ಮೈತ್ರಿಕೂಟದ ಸಭೆಯಲ್ಲಿ ಪಕ್ಷದ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಭಾಗವಹಿಸಿರುವುದು ರಾಜಕೀಯ ಬೆಳವಣಿಗೆಗಳಿಗೆ ಮತ್ತಷ್ಟು ಮಹತ್ವ ನೀಡಿದೆ.

ಟಿಎಂಸಿಯ ಹಿರಿಯ ಸಂಸದೆ ಕಾಕೋಲಿ ಘೋಷ್ ದಸ್ತಿದಾರ್ ಸೋಮವಾರ ಮಾತನಾಡಿ, ತಾವು ಸೇರಿದಂತೆ ಸುಮಾರು 20 ಸಂಸದರು ಎನ್‌ಡಿಎಗೆ ಬೆಂಬಲ ನೀಡುವ ನಿರ್ಧಾರ ಕೈಗೊಂಡಿದ್ದು, ಈ ಕುರಿತು ಲೋಕಸಭಾಧ್ಯಕ್ಷ ಓಂ ಬಿರ್ಲಾ ಅವರಿಗೆ ಪತ್ರ ಬರೆದಿರುವುದಾಗಿ ತಿಳಿಸಿದ್ದಾರೆ.

ಪ್ರಸ್ತುತ ಟಿಎಂಸಿಗೆ ಲೋಕಸಭೆಯಲ್ಲಿ 28 ಮತ್ತು ರಾಜ್ಯಸಭೆಯಲ್ಲಿ 12 ಸದಸ್ಯರಿದ್ದು, ದಸ್ತಿದಾರ್ ಅವರ ಹೇಳಿಕೆ ಪಕ್ಷದೊಳಗಿನ ಭಿನ್ನಮತದ ತೀವ್ರತೆಯನ್ನು ಬಯಲಿಗೆಳೆದಿದೆ.

ಸುದ್ದಿಸಂಸ್ಥೆಯೊಂದರೊಂದಿಗೆ ಮಾತನಾಡಿದ ಅವರು, ನಾವು ಜನರ ತೀರ್ಪನ್ನು ಗೌರವಿಸುತ್ತೇವೆ. ನಮ್ಮ ಮುಂದಿನ ರಾಜಕೀಯ ಪಯಣ ಎನ್‌ಡಿಎ ಜತೆ ಹೊಂದಿಕೆಯಾಗಬೇಕು ಎಂದು ಭಾವಿಸಿದ್ದೇವೆ. ಈ ಕುರಿತು ಲೋಕಸಭಾಧ್ಯಕ್ಷರಿಗೆ ಪತ್ರ ಸಲ್ಲಿಸಲಾಗಿದೆ ಎಂದು ಹೇಳಿದ್ದಾರೆ.

ಲೋಕಸಭೆಯಲ್ಲಿ ಪಕ್ಷದ ಮುಖ್ಯ ಸಚೇತಕರಾಗಿ ತಾವು ಇನ್ನೂ ಕಾರ್ಯನಿರ್ವಹಿಸುತ್ತಿದ್ದು, ಸಹ ಸಂಸದರೊಂದಿಗೆ ಸಮಾಲೋಚನೆ ನಡೆಸಿದ ಬಳಿಕವೇ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ದಸ್ತಿದಾರ್ ತಿಳಿಸಿದ್ದಾರೆ.

ಈ ಹೇಳಿಕೆ ಹೊರಬೀಳುವ ಮುನ್ನ ಹೊಸದಿಲ್ಲಿಯ ಅಜ್ಞಾತ ಸ್ಥಳವೊಂದರಲ್ಲಿ ಸುಮಾರು 20 ಟಿಎಂಸಿ ಸಂಸದರು ಸಭೆ ನಡೆಸಿದ್ದರು ಎಂಬ ವರದಿಗಳು ಪ್ರಕಟವಾಗಿದ್ದವು. ಸಭೆಯಲ್ಲಿ ಪಕ್ಷದ ರಾಜಕೀಯ ಭವಿಷ್ಯ ಹಾಗೂ ಸಂಸದೀಯ ನಾಯಕತ್ವದ ಕಾರ್ಯವೈಖರಿ ಕುರಿತು ಚರ್ಚೆ ನಡೆದಿರುವುದಾಗಿ ತಿಳಿದುಬಂದಿದೆ.

ಪಕ್ಷದ ಮೂಲಗಳ ಪ್ರಕಾರ, ಇತ್ತೀಚಿನ ಚುನಾವಣಾ ಹಿನ್ನಡೆಗೆ ಕಾರಣವಾದ ಅಂಶಗಳನ್ನು ನಾಯಕತ್ವ ಸಮರ್ಪಕವಾಗಿ ವಿಶ್ಲೇಷಿಸಲು ವಿಫಲವಾಗಿದೆ ಎಂಬ ಅಸಮಾಧಾನವನ್ನು ಹಲವರು ವ್ಯಕ್ತಪಡಿಸಿದ್ದಾರೆ. ಪಕ್ಷದ ಭವಿಷ್ಯದ ರಾಜಕೀಯ ದಿಕ್ಕಿನ ಕುರಿತು ಸಭೆಯಲ್ಲಿ ಗಂಭೀರ ಚರ್ಚೆ ನಡೆದಿದ್ದು, ಸೋಲಿನ ಕಾರಣಗಳನ್ನು ಒಪ್ಪಿಕೊಳ್ಳಲು ನಾಯಕತ್ವ ಸಿದ್ಧವಿಲ್ಲ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ ಎಂದು ಮೂಲಗಳು ತಿಳಿಸಿವೆ.

ಆರಂಭದಲ್ಲಿ ಸಭೆಯಲ್ಲಿ ಯಾವುದೇ ಅಂತಿಮ ನಿರ್ಧಾರ ಕೈಗೊಳ್ಳಲಾಗಿಲ್ಲ ಎಂದು ಹೇಳಲಾಗಿದ್ದರೂ, ದಸ್ತಿದಾರ್ ಅವರ ಹೇಳಿಕೆಯಿಂದ ಸಂಸದರ ಒಂದು ಗುಂಪು ಎನ್‌ಡಿಎಗೆ ಅಧಿಕೃತ ಬೆಂಬಲ ನೀಡುವ ನಿಟ್ಟಿನಲ್ಲಿ ಮುಂದುವರಿದಿರಬಹುದು ಎಂಬ ಊಹಾಪೋಹಗಳು ಬಲ ಪಡೆದಿವೆ.

ಸಭೆಯೊಂದರ ಛಾಯಾಚಿತ್ರ ಸೋಮವಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಹಲವು ಟಿಎಂಸಿ ಲೋಕಸಭಾ ಸದಸ್ಯರು ಒಂದೇ ಮೇಜಿನ ಸುತ್ತ ಕುಳಿತು ಚರ್ಚೆ ನಡೆಸುತ್ತಿರುವ ದೃಶ್ಯಗಳು ಕಂಡುಬಂದಿವೆ. ಇದರಿಂದ ಪಕ್ಷದೊಳಗಿನ ವಿಭಜನೆಯ ಚರ್ಚೆ ಮತ್ತಷ್ಟು ತೀವ್ರಗೊಂಡಿದೆ.

ಇದೇ ವೇಳೆ, ತಾವು ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿಯಿಂದ ಪ್ರತ್ಯೇಕವಾಗಿ ಕಾರ್ಯನಿರ್ವಹಿಸುತ್ತಿರುವುದರಿಂದ ಸಂಸತ್ತಿನಲ್ಲಿ ಪ್ರತ್ಯೇಕ ಆಸನ ವ್ಯವಸ್ಥೆ ಕಲ್ಪಿಸಬೇಕು ಹಾಗೂ ಪಕ್ಷದ ಸಂಸದೀಯ ನಾಯಕ ಅಭಿಷೇಕ್ ಬ್ಯಾನರ್ಜಿ ಅವರ ನಾಯಕತ್ವವನ್ನು ಒಪ್ಪುವುದಿಲ್ಲ ಎಂದು ಬಂಡಾಯ ಸಂಸದರು ಮನವಿ ಸಲ್ಲಿಸಿರುವುದಾಗಿ ವರದಿಯಾಗಿದೆ.

ಈ ಬಣದ ನಾಯಕಿಯಾಗಿ ಕಾಕೋಲಿ ಘೋಷ್ ದಸ್ತಿದಾರ್ ಅವರನ್ನು ಗುರುತಿಸುವಂತೆ ಲೋಕಸಭಾಧ್ಯಕ್ಷರಿಗೆ ಕೋರಲಾಗಿದೆ. ಪತ್ರಕ್ಕೆ ಅರೂಪ್ ಚಕ್ರವರ್ತಿ, ಪಾರ್ಥ ಭೌಮಿಕ್, ಶತಬ್ದಿ ರಾಯ್, ಜಗದೀಶ್ ವಸುನಿಯಾ ಹಾಗೂ ಜೂನ್ ಮಾಲಿಯಾ ಸೇರಿದಂತೆ ಹಲವು ಸಂಸದರು ಸಹಿ ಹಾಕಿರುವುದಾಗಿ ತಿಳಿಸಲಾಗಿದೆ.

ಇದಕ್ಕೆ ಪ್ರತಿಕ್ರಿಯಿಸಿರುವ ಹಿರಿಯ ಸಂಸದ ಸೌಗತ ರಾಯ್, ಪಕ್ಷದಿಂದ ದೊಡ್ಡ ಪ್ರಮಾಣದಲ್ಲಿ ಸಂಸದರು ಹೊರಹೋಗಲಿದ್ದಾರೆ ಎಂಬ ವರದಿಗಳನ್ನು ತಳ್ಳಿಹಾಕಿದ್ದಾರೆ.

ಕೆಲವು ಸಂಸದರು ಪ್ರತ್ಯೇಕ ಸಭೆ ನಡೆಸಿದ್ದಾರೆ ಎಂದು ಕೇಳಿದ್ದೇನೆ. ಆದರೆ ಸಭೆಯಲ್ಲಿ ಏನಾಯಿತು ಎಂಬುದನ್ನು ಅವರೇ ಹೇಳಬೇಕು. ಅವರು ನನ್ನನ್ನು ಸಂಪರ್ಕಿಸಿಲ್ಲ ಎಂದು ರಾಯ್ ಹೇಳಿದ್ದಾರೆ.

ಬಿಜೆಪಿ ನಾಯಕರು ಟಿಎಂಸಿ ಸಂಸದರನ್ನು ಸಂಪರ್ಕಿಸುತ್ತಿದ್ದಾರೆ ಎಂಬ ವರದಿಗಳ ಕುರಿತು ಪ್ರತಿಕ್ರಿಯಿಸಿದ ಅವರು, ತಮ್ಮನ್ನೂ ಸಂಪರ್ಕಿಸಲಾಗಿತ್ತು ಎಂದು ಒಪ್ಪಿಕೊಂಡಿದ್ದಾರೆ.

ನಾನು ಟಿಎಂಸಿಯಲ್ಲೇ ಮುಂದುವರಿಯುತ್ತೇನೆ ಎಂದು ಅವರಿಗೆ ಸ್ಪಷ್ಟಪಡಿಸಿದ್ದೇನೆ. ಈ ವಯಸ್ಸಿನಲ್ಲಿ ಪಕ್ಷ ಬದಲಾಯಿಸುವುದು ನನಗೆ ಸಾಧ್ಯವಿಲ್ಲ ಎಂದು ರಾಯ್ ತಿಳಿಸಿದ್ದಾರೆ.

Author
A B Dharwadkar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST