LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureEditorialBeautyRecipes

ಪ್ರಶ್ನೆ ಪತ್ರಿಕೆ ಸೋರಿಕೆ : ನೀಟ್‌ ಪರೀಕ್ಷೆ ರದ್ದು

ಹೊಸದಿಲ್ಲಿ, ಮೇ 12 : ಪ್ರಶ್ನೆಪತ್ರಿಕೆ ಸೋರಿಕೆಯಾಗಿದ್ದ ಹಿನ್ನೆಲೆಯಲ್ಲಿ ಕಳೆದ ಮೇ 3ರಂದು ನಡೆದಿದ್ದ ಈ ಸಾಲಿನ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆದ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್‌-ಯುಜಿ)ಯನ್ನು ರದ್ದುಪಡಿಸಲಾಗಿದೆ.

ಪ್ರಕರಣದ ಸಂಪೂರ್ಣ ತನಿಖೆಯನ್ನು ಕೇಂದ್ರ ತನಿಖಾ ದಳಕ್ಕೆ (ಸಿಬಿಐ) ವಹಿಸಲಾಗಿದ್ದು, ಹಗರಣದ ಆಳ ಮತ್ತು ವ್ಯಾಪ್ತಿಯನ್ನು ಪತ್ತೆಹಚ್ಚಲು ಕ್ರಮ ಕೈಗೊಳ್ಳಲಾಗಿದೆ. ಈ ಬೆಳವಣಿಗೆಯಿಂದ ದೇಶದಾದ್ಯಂತ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಅನಿಶ್ಚಿತತೆ ಮೂಡಿದೆ. ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಶೀಘ್ರದಲ್ಲೇ ಮರುಪರೀಕ್ಷೆಯ ದಿನಾಂಕ ಪ್ರಕಟಿಸುವುದಾಗಿ ತಿಳಿಸಿದೆ.

ಮರುಪರೀಕ್ಷೆಗೆ ಅಭ್ಯರ್ಥಿಗಳು ಹೊಸದಾಗಿ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ. ಈಗಾಗಲೇ ಪರೀಕ್ಷೆ ಬರೆದಿರುವ ಎಲ್ಲ ವಿದ್ಯಾರ್ಥಿಗಳಿಗೆ ಮತ್ತೊಮ್ಮೆ ಅವಕಾಶ ನೀಡಲಾಗುವುದು ಎಂದು ಎನ್‌ಟಿಎ ಸ್ಪಷ್ಟಪಡಿಸಿದೆ.

ಪರೀಕ್ಷೆಗೆ ಮುನ್ನ ವಿತರಿಸಲಾದ ಮಾದರಿ ಪ್ರಶ್ನೆಪತ್ರಿಕೆಯಲ್ಲಿ ಇದ್ದ ಪ್ರಶ್ನೆಗಳು ಅಸಲಿ ಪ್ರಶ್ನೆಪತ್ರಿಕೆಗೆ ಹೋಲಿಕೆಯಾಗಿವೆ ಎಂಬ ಆರೋಪ ಕೇಳಿಬಂದಿತ್ತು. ಕೆಲವು ವಿದ್ಯಾರ್ಥಿಗಳು ದೂರು ನೀಡಿದ ಬಳಿಕ ಈ ಕುರಿತು ತನಿಖೆ ಆರಂಭಿಸಲಾಗಿತ್ತು.

ಮೇ 3ರಂದು ದೇಶದಾದ್ಯಂತ 22.79 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ನೀಟ್‌ ಪರೀಕ್ಷೆ ಬರೆದಿದ್ದರು. ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿಬಂದ ಹಿನ್ನೆಲೆ ರಾಜಸ್ಥಾನ ಪೊಲೀಸರ ವಿಶೇಷ ತನಿಖಾ ತಂಡ ಪರಿಶೀಲನೆ ಆರಂಭಿಸಿತ್ತು.

ನೀಟ್‌ ಪರೀಕ್ಷೆಗೆ ಮುನ್ನ ಹಂಚಿಕೆಯಾಗಿದ್ದ ಕೆಲವು ಪ್ರಶ್ನೆಪತ್ರಿಕೆ ಸೆಟ್‌ಗಳು ಅಸಲಿ ಪ್ರಶ್ನೆಪತ್ರಿಕೆಗೆ ಸಾಮ್ಯತೆ ಹೊಂದಿದ್ದವು ಎಂಬ ಆರೋಪದ ಬಗ್ಗೆ ತನಿಖೆ ನಡೆಸುವಂತೆ ಎನ್‌ಟಿಎ ಮನವಿ ಮಾಡಿತ್ತು.

ಪರೀಕ್ಷೆಗೆ ಕೆಲವು ದಿನಗಳ ಮೊದಲು ಸುಮಾರು 400 ಪ್ರಶ್ನೆಗಳಿರುವ ಪ್ರತಿಗಳನ್ನು ಹಂಚಲಾಗಿತ್ತು. ಇದರಲ್ಲಿ ಜೀವವಿಜ್ಞಾನ ಮತ್ತು ರಸಾಯನ ವಿಜ್ಞಾನದ 100ಕ್ಕೂ ಹೆಚ್ಚು ಪ್ರಶ್ನೆಗಳು ಅಸಲಿ ಪರೀಕ್ಷೆಯ ಪ್ರಶ್ನೆಗಳೊಂದಿಗೆ ಹೋಲಿಕೆ ಹೊಂದಿದ್ದವು ಎನ್ನಲಾಗಿದೆ. ಆರಂಭದಲ್ಲಿ ಅಧಿಕಾರಿಗಳು ಇವುಗಳನ್ನು ಗೆಸ್‌ ಪೇಪರ್‌ ಅಥವಾ ತರಬೇತಿ ಪರೀಕ್ಷೆಗಳ ಸರಣಿ ಎಂದು ಸಮರ್ಥಿಸಿಕೊಂಡಿದ್ದರೂ, ವಿದ್ಯಾರ್ಥಿಗಳು ಅಕ್ರಮದ ಶಂಕೆ ವ್ಯಕ್ತಪಡಿಸಿದ್ದರು.

ಪರೀಕ್ಷೆಯ ಪಾವಿತ್ರ್ಯ ಕಾಪಾಡುವ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ ಎಂದು ಎನ್‌ಟಿಎ ತಿಳಿಸಿದೆ. ಆರಂಭದಲ್ಲಿ ವದಂತಿ ಎಂದು ಪರಿಗಣಿಸಲಾದ ಆರೋಪಗಳಿಗೆ ಸಂಬಂಧಿಸಿದಂತೆ ಕಾನೂನು ಜಾರಿ ಸಂಸ್ಥೆಗಳು ಮತ್ತು ಗುಪ್ತಚರ ಇಲಾಖೆಗಳು ನೀಡಿದ ಪ್ರಾಥಮಿಕ ವರದಿಗಳಲ್ಲಿ ಪರೀಕ್ಷಾ ಪ್ರಕ್ರಿಯೆಯಲ್ಲಿ ಲೋಪದೋಷಗಳಿರುವುದು ದೃಢಪಟ್ಟಿದೆ ಎಂದು ಮೂಲಗಳು ತಿಳಿಸಿವೆ.

ಗೆಸ್‌ ಪೇಪರ್‌ ಹೆಸರಿನಲ್ಲಿ ಪ್ರಶ್ನೆಗಳು ಪರೀಕ್ಷೆಗೆ ಮುನ್ನವೇ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಎನ್‌ಟಿಎ ತನ್ನ ಬಳಿ ಇರುವ ಎಲ್ಲಾ ದತ್ತಾಂಶ, ಸಿಸಿಟಿವಿ ದೃಶ್ಯಾವಳಿ ಮತ್ತು ಅಭ್ಯರ್ಥಿಗಳ ಮಾಹಿತಿಯನ್ನು ತನಿಖಾ ಸಂಸ್ಥೆಗಳಿಗೆ ಹಸ್ತಾಂತರಿಸಲು ಒಪ್ಪಿಕೊಂಡಿದೆ.

ಪರೀಕ್ಷೆಗೆ ಮುನ್ನ ಪ್ರಶ್ನೆಗಳು ಹೇಗೆ ಸೋರಿಕೆಯಾಗಿದವು ಹಾಗೂ ಇದರ ಹಿಂದೆ ಸಂಘಟಿತ ಜಾಲವಿದೆಯೇ ಎಂಬುದನ್ನು ಪತ್ತೆಹಚ್ಚುವಂತೆ ಕೇಂದ್ರ ಸರ್ಕಾರ ಸಿಬಿಐಗೆ ಸೂಚಿಸಿದೆ. ತನಿಖೆಗೆ ಅಗತ್ಯವಿರುವ ದಾಖಲೆಗಳು ಮತ್ತು ಮಾಹಿತಿ ನೀಡುವ ಮೂಲಕ ಸಂಪೂರ್ಣ ಸಹಕಾರ ನೀಡುವುದಾಗಿ ಎನ್‌ಟಿಎ ಹೇಳಿದೆ.

ಹೆಚ್ಚುವರಿ ಶುಲ್ಕ ಬೇಡ

ಪರೀಕ್ಷೆ ರದ್ದಾದ ಹಿನ್ನೆಲೆ ಆತಂಕಕ್ಕೊಳಗಾದ ವಿದ್ಯಾರ್ಥಿಗಳಿಗೆ ಎನ್‌ಟಿಎ ಕೆಲ ಪ್ರಮುಖ ಸ್ಪಷ್ಟನೆಗಳನ್ನು ನೀಡಿದೆ. ಮರುಪರೀಕ್ಷೆಗೆ ಮತ್ತೆ ಹೊಸ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ ಎಂದು ತಿಳಿಸಲಾಗಿದೆ.

ಈಗಾಗಲೇ ನೋಂದಣಿ ಮಾಡಿಕೊಂಡಿರುವ ಅಭ್ಯರ್ಥಿಗಳ ಮಾಹಿತಿಯನ್ನೇ ಮರುಪರೀಕ್ಷೆಗೆ ಬಳಸಿಕೊಳ್ಳಲಾಗುತ್ತದೆ. ವಿದ್ಯಾರ್ಥಿಗಳು ಯಾವುದೇ ಹೆಚ್ಚುವರಿ ಶುಲ್ಕ ಪಾವತಿಸಬೇಕಾಗಿಲ್ಲ ಎಂದು ಎನ್‌ಟಿಎ ಹೇಳಿದೆ.

ಈಗಾಗಲೇ ಪಾವತಿಸಿರುವ ಶುಲ್ಕವನ್ನು ಹೊಂದಾಣಿಕೆ ಮಾಡುವ ಅಥವಾ ಮರುಪಾವತಿ ಮಾಡುವ ಪ್ರಕ್ರಿಯೆ ಕೈಗೊಳ್ಳಲಾಗುವುದು. ಹಳೆಯ ಪರೀಕ್ಷಾ ಕೇಂದ್ರಗಳನ್ನೇ ಬಹುತೇಕ ಮುಂದುವರಿಸಲಾಗುತ್ತದೆ. ಹೊಸ ಪ್ರವೇಶ ಪತ್ರಗಳನ್ನು ಪರೀಕ್ಷೆಗೆ ಕೆಲವು ದಿನಗಳ ಮೊದಲು ಅಧಿಕೃತ ಜಾಲತಾಣದಲ್ಲಿ ಪ್ರಕಟಿಸಲಾಗುವುದು ಎಂದು ಸಂಸ್ಥೆ ತಿಳಿಸಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ಈಗಾಗಲೇ 45 ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ. ಪ್ರತಿವರ್ಷ ಎನ್‌ಟಿಎ ದೇಶದಾದ್ಯಂತ ವೈದ್ಯಕೀಯ, ದಂತ ವೈದ್ಯಕೀಯ, ಹೋಮಿಯೋಪತಿ ಹಾಗೂ ಆಯುರ್ವೇದ ಕೋರ್ಸ್‌ಗಳ ಪ್ರವೇಶಕ್ಕಾಗಿ ನೀಟ್‌ ಪರೀಕ್ಷೆ ನಡೆಸುತ್ತದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಸ್ಥಾನದ ಎಂಬಿಬಿಎಸ್‌ ವಿದ್ಯಾರ್ಥಿಯೊಬ್ಬನನ್ನು ವಿಶೇಷ ತನಿಖಾ ತಂಡ ಬಂಧಿಸಿದೆ. ಪ್ರಶ್ನೆಪತ್ರಿಕೆ ಸೋರಿಕೆ ಜಾಲದ ಪ್ರಮುಖ ಸಂಚಾಲಕ ಈತನೇ ಎಂಬ ಶಂಕೆ ವ್ಯಕ್ತವಾಗಿದೆ.

Author
A B Dharwadkar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST