LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureEditorialBeautyRecipes

ಪತ್ರಿಕಾ ಸ್ವಾತಂತ್ರ್ಯ, ಅಲ್ಪಸಂಖ್ಯಾತರ ಹಕ್ಕುಗಳಿಗೆ ಧಕ್ಕೆ: ಡಚ್ ಪ್ರಧಾನಿ ಹೇಳಿಕೆಗೆ ಭಾರತದ ಆಕ್ಷೇಪ

ಹೇಗ್‌, ಮೇ 19 : ಭಾರತದಲ್ಲಿ ಪತ್ರಿಕಾ ಸ್ವಾತಂತ್ರ್ಯ ಕುಸಿಯುತ್ತಿದೆ ಹಾಗೂ ಅಲ್ಪಸಂಖ್ಯಾತರ ಹಕ್ಕುಗಳು ದುರ್ಬಲಗೊಳ್ಳುತ್ತಿವೆ ಎಂಬ ಡಚ್ ಪ್ರಧಾನಿ ರಾಬ್ ಜೆಟ್ಟನ್ ಅವರ ಹೇಳಿಕೆಗೆ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಭಾರತವು ಎಲ್ಲರಿಗೂ ಮುಕ್ತ ಅಭಿವ್ಯಕ್ತಿಯ ಹಕ್ಕು ನೀಡುವ ಚೈತನ್ಯಶೀಲ ಮತ್ತು ಬಲಿಷ್ಠ ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ನೆದರ್‌ಲ್ಯಾಂಡ್ಸ್ ಭೇಟಿಯ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ವಿದೇಶಾಂಗ ಸಚಿವಾಲಯದ ಕಾರ್ಯದರ್ಶಿ (ಪಶ್ಚಿಮ) ಸಿಬಿ ಜಾರ್ಜ್‌, ಇಂತಹ ಪ್ರಶ್ನೆಗಳು ಭಾರತದ ಬಗ್ಗೆ ಸರಿಯಾದ ಅರಿವಿಲ್ಲದ ಕಾರಣದಿಂದಲೇ ಉದ್ಭವಿಸುತ್ತವೆ ಎಂದು ಹೇಳಿದರು.

ಭಾರತವು ಐದು ಸಾವಿರ ವರ್ಷಗಳ ಇತಿಹಾಸ ಹೊಂದಿರುವ ನಾಗರಿಕತೆಯ ರಾಷ್ಟ್ರ. 1.4 ಶತಕೋಟಿ ಜನಸಂಖ್ಯೆಯ ದೇಶವಾಗಿರುವ ಭಾರತದಲ್ಲಿ ಭಾಷೆ, ಸಂಸ್ಕೃತಿ, ಆಹಾರ ಪದ್ಧತಿ ಹಾಗೂ ಧರ್ಮಗಳಲ್ಲಿ ಅಪಾರ ವೈವಿಧ್ಯತೆ ಇದೆ ಎಂದು ವಿವರಿಸಿದರು.

ಹಿಂದೂ ಧರ್ಮ, ಬೌದ್ಧ ಧರ್ಮ, ಜೈನ ಧರ್ಮ ಹಾಗೂ ಸಿಖ್ ಧರ್ಮಗಳಂತಹ ಪ್ರಮುಖ ಧರ್ಮಗಳು ಭಾರತದಲ್ಲೇ ಹುಟ್ಟಿಕೊಂಡಿವೆ. ಯಹೂದಿ ಸಮುದಾಯವು 2,500 ವರ್ಷಗಳಿಗೂ ಹೆಚ್ಚು ಕಾಲ ಭಾರತದಲ್ಲಿ ಯಾವುದೇ ಕಿರುಕುಳವಿಲ್ಲದೆ ನೆಲೆಸಿತ್ತು ಎಂದು ಹೇಳಿದರು.

ಕ್ರೈಸ್ತ ಧರ್ಮ ಯೇಸುಕ್ರಿಸ್ತನ ಪುನರುತ್ಥಾನದ ಬಳಿಕ ಭಾರತಕ್ಕೆ ಬಂದಿದೆ. ಇಸ್ಲಾಂ ಧರ್ಮವೂ ಪ್ರವಾದಿ ಮುಹಮ್ಮದ್ ಅವರ ಕಾಲದಲ್ಲೇ ಭಾರತ ಪ್ರವೇಶಿಸಿದೆ. ಎರಡೂ ಧರ್ಮಗಳು ಭಾರತದಲ್ಲಿ ಬೆಳವಣಿಗೆ ಕಂಡಿವೆ ಎಂದು ಜಾರ್ಜ್ ತಿಳಿಸಿದರು.

ಪ್ರಧಾನಿ ಮೋದಿ ಅವರ ಎರಡು ದಿನಗಳ ನೆದರ್‌ಲ್ಯಾಂಡ್ಸ್ ಪ್ರವಾಸದ ವೇಳೆ ಜಂಟಿ ಪತ್ರಿಕಾಗೋಷ್ಠಿ ಏಕೆ ಆಯೋಜಿಸಲಾಗಿಲ್ಲ ಎಂದು ಡಚ್ ಪತ್ರಕರ್ತರೊಬ್ಬರು ಪ್ರಶ್ನಿಸಿದ್ದರು. ಇದೇ ವೇಳೆ ಭಾರತದಲ್ಲಿನ ಪತ್ರಿಕಾ ಸ್ವಾತಂತ್ರ್ಯ ಹಾಗೂ ಮುಸ್ಲಿಂ ಸೇರಿದಂತೆ ಅಲ್ಪಸಂಖ್ಯಾತ ಸಮುದಾಯಗಳ ಹಕ್ಕುಗಳ ಕುರಿತು ಕಳವಳ ವ್ಯಕ್ತಪಡಿಸಿದ್ದರು.

ಇತ್ತೀಚಿನ ವಿಧಾನಸಭಾ ಚುನಾವಣೆಗಳನ್ನು ಉಲ್ಲೇಖಿಸಿದ ಜಾರ್ಜ್‌, ಭಾರತವು ಬಲಿಷ್ಠ ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು, ಶಾಂತಿಯುತ ಅಧಿಕಾರ ವರ್ಗಾವಣೆ ಅದರ ಪ್ರಮುಖ ಲಕ್ಷಣವಾಗಿದೆ ಎಂದು ಹೇಳಿದರು.

ಇತ್ತೀಚಿನ ಚುನಾವಣೆಯಲ್ಲಿ 90 ಶೇಕಡಕ್ಕೂ ಹೆಚ್ಚು ಮತದಾರರು ಮತ ಚಲಾಯಿಸಿರುವುದು ಭಾರತದ ಪ್ರಜಾಪ್ರಭುತ್ವದ ಬಲವನ್ನು ತೋರಿಸುತ್ತದೆ ಎಂದರು.

ಭಾರತವು ಪ್ರಜಾಪ್ರಭುತ್ವದ ಮೌಲ್ಯಗಳಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ ಆರ್ಥಿಕ ಪ್ರಗತಿ ಸಾಧಿಸಿದೆ. ಬಡತನ ನಿವಾರಣೆಗೆ ಹಿಂಸಾಚಾರದ ಮಾರ್ಗ ಅನುಸರಿಸದೆ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲೇ ಅಭಿವೃದ್ಧಿ ಸಾಧಿಸಲಾಗಿದೆ ಎಂದು ಹೇಳಿದರು.

ವಿಶ್ವದ ಜನಸಂಖ್ಯೆಯ ಆರನೇ ಒಂದು ಭಾಗ ಭಾರತದಲ್ಲಿದ್ದರೂ, ಜಾಗತಿಕ ಸಮಸ್ಯೆಗಳ ಆರನೇ ಒಂದು ಭಾಗ ಭಾರತದಲ್ಲಿಲ್ಲ ಎಂಬುದೇ ದೇಶದ ವೈಶಿಷ್ಟ್ಯ ಎಂದು ಅವರು ಅಭಿಪ್ರಾಯಪಟ್ಟರು.

ಸ್ವಾತಂತ್ರ್ಯದ ಸಮಯದಲ್ಲಿ ಭಾರತದಲ್ಲಿದ್ದ ಅಲ್ಪಸಂಖ್ಯಾತರ ಜನಸಂಖ್ಯೆ ಶೇಕಡಾ 11ರಷ್ಟಿತ್ತು. ಈಗ ಅದು ಶೇಕಡಾ 20ಕ್ಕಿಂತ ಹೆಚ್ಚಾಗಿದೆ. ಅಲ್ಪಸಂಖ್ಯಾತ ಸಮುದಾಯಗಳು ಅಭಿವೃದ್ಧಿ ಹೊಂದಲು ಭಾರತ ಉತ್ತಮ ಉದಾಹರಣೆ ಎಂದು ಹೇಳಿದರು.

ಡಚ್ ಪತ್ರಿಕೆ ಡಿ ವೋಕ್ಸ್‌ಕ್ರಾಂಟ್ ವರದಿ ಪ್ರಕಾರ, ಪ್ರಧಾನಿ ಮೋದಿಯನ್ನು ಭೇಟಿಯಾಗುವ ಮುನ್ನ ಡಚ್ ಪ್ರಧಾನಿ ರಾಬ್ ಜೆಟ್ಟನ್, ಭಾರತದಲ್ಲಿನ ಬೆಳವಣಿಗೆಗಳ ಬಗ್ಗೆ ಡಚ್ ಸರ್ಕಾರಕ್ಕೆ ಕಳವಳವಿದೆ. ಅದು ಕೇವಲ ಪತ್ರಿಕಾ ಸ್ವಾತಂತ್ರ್ಯದ ವಿಷಯವಲ್ಲ, ಅಲ್ಪಸಂಖ್ಯಾತರ ಹಕ್ಕುಗಳ ಮೇಲಿನ ಒತ್ತಡದ ವಿಚಾರವೂ ಹೌದು ಎಂದು ಹೇಳಿದ್ದರು ಎನ್ನಲಾಗಿದೆ.

ಈ ವಿಷಯಗಳನ್ನು ಭಾರತ ಸರ್ಕಾರದೊಂದಿಗೆ ನಿಯಮಿತವಾಗಿ ಪ್ರಸ್ತಾಪಿಸಲಾಗುತ್ತಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಆದರೆ ಸಾಮಾಜಿಕ ಜಾಲತಾಣದ ಪೋಸ್ಟ್‌ನಲ್ಲಿ ಜೆಟ್ಟನ್, ಭಾರತ ಮತ್ತು ನೆದರ್‌ಲ್ಯಾಂಡ್ಸ್ ಎರಡೂ ಪ್ರಜಾಪ್ರಭುತ್ವ, ಸುಶಾಸನ ಹಾಗೂ ನಿಯಮ ಮತ್ತು ನ್ಯಾಯಾಧಾರಿತ ಜಾಗತಿಕ ವ್ಯವಸ್ಥೆಗೆ ಹೆಚ್ಚಿನ ಮಹತ್ವ ನೀಡುತ್ತವೆ ಎಂದು ಹೇಳಿದ್ದಾರೆ.

Author
A B Dharwadkar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST