ಹೊಸದಿಲ್ಲಿ, ಮೇ 14 : ಬ್ರಿಕ್ಸ್ ವಿದೇಶಾಂಗ ಸಚಿವರ ಸಭೆಯಲ್ಲಿ ಪಶ್ಚಿಮ ಏಷ್ಯಾದಲ್ಲಿ ಮುಂದುವರಿದಿರುವ ಸಂಘರ್ಷದ ಬಗ್ಗೆ ವಿದೇಶಾಂಗ ಸಚಿವ ಎಸ್. ಜೈಶಂಕರ್ ತೀವ್ರ ಕಳವಳ ವ್ಯಕ್ತಪಡಿಸಿದ್ದು, ಫೆಲೆಸ್ತೀನ್ ಸಮಸ್ಯೆಗೆ ಸಂಬಂಧಿಸಿದಂತೆ ಭಾರತವು ಎರಡು ರಾಷ್ಟ್ರಗಳ ಪರಿಹಾರಕ್ಕೆ ಬೆಂಬಲ ನೀಡುತ್ತದೆ ಎಂದು ಹೇಳಿದ್ದಾರೆ.
ಫೆಬ್ರವರಿ 28ರಿಂದ ಗಲ್ಫ್ ಪ್ರದೇಶದಲ್ಲಿ ಉಂಟಾಗಿರುವ ಉದ್ವಿಗ್ನ ಪರಿಸ್ಥಿತಿಯನ್ನು ಉಲ್ಲೇಖಿಸಿದ ಜೈಶಂಕರ್, ಹಾರ್ಮುಝ್ ಜಲಸಂಧಿ ಮುಚ್ಚುವಿಕೆಯ ಭೀತಿಯಿಂದ ಸಮುದ್ರ ಸಂಚಾರ ಹಾಗೂ ಇಂಧನ ಮೂಲಸೌಕರ್ಯಗಳಿಗೆ ಅಪಾಯ ಎದುರಾಗಿದೆ ಎಂದು ಹೇಳಿದ್ದಾರೆ.
ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷವು ವಿಶೇಷ ಗಮನಕ್ಕೆ ಅರ್ಹವಾಗಿದ್ದು, ನಿರಂತರ ಉದ್ವಿಗ್ನತೆ, ಸಮುದ್ರ ಮಾರ್ಗಗಳ ಮೇಲಿನ ಅಪಾಯ ಹಾಗೂ ಇಂಧನ ಮೂಲಸೌಕರ್ಯಗಳಿಗೆ ಎದುರಾಗಿರುವ ಅಡ್ಡಿಗಳು ಜಾಗತಿಕ ಭದ್ರತಾ ಪರಿಸ್ಥಿತಿಯ ದುರ್ಬಲತೆಯನ್ನು ತೋರಿಸುತ್ತಿವೆ ಎಂದು ಅವರು ತಿಳಿಸಿದ್ದಾರೆ.
ಇದೇ ವೇಳೆ ಲೆಬನಾನ್, ಸಿರಿಯಾ, ಸುಡಾನ್, ಯೆಮೆನ್ ಮತ್ತು ಲಿಬಿಯಾ ಸೇರಿದಂತೆ ಪಶ್ಚಿಮ ಏಷ್ಯಾದ ಇತರ ಭಾಗಗಳಲ್ಲಿಯೂ ಅಸ್ಥಿರತೆ ಹೆಚ್ಚುತ್ತಿರುವ ಬಗ್ಗೆ ಸಭೆಯಲ್ಲಿ ಜೈಶಂಕರ್ ಗಮನ ಸೆಳೆದಿದ್ದಾರೆ.