ಹೊಸದಿಲ್ಲಿ, ಜೂ. 9 : ಇಬ್ಬರು ಅವಿವಾಹಿತ ವಯಸ್ಕರ ನಡುವಿನ ಪರಸ್ಪರ ಸಮ್ಮತಿಯ ದೈಹಿಕ ಸಂಬಂಧವನ್ನು ವ್ಯಕ್ತಿಯ ನೈತಿಕತೆ ಅಥವಾ ವ್ಯಕ್ತಿತ್ವ ಅಳೆಯುವ ಮಾನದಂಡವಾಗಿ ಬಳಸಲು ಸಾಧ್ಯವಿಲ್ಲ ಎಂದು ಸುಪ್ರೀಮ ಕೋರ್ಟ ಮಹತ್ವದ ತೀರ್ಪು ನೀಡಿದೆ. ಕೇವಲ ಮದುವೆಯಲ್ಲಿ ಅಂತ್ಯಗೊಂಡಿಲ್ಲ ಎಂಬ ಕಾರಣಕ್ಕೆ ಪ್ರೇಮ ಸಂಬಂಧವನ್ನು ವಂಚನೆ ಅಥವಾ ಮೋಸದ ಸಂಬಂಧ ಎಂದು ಪರಿಗಣಿಸುವುದು ಸರಿಯಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ತೆಲಂಗಾಣ ಪೊಲೀಸ್ ಕಾನ್‌ಸ್ಟೆಬಲ್ ನೇಮಕಾತಿಗೆ ಸಂಬಂಧಿಸಿದ ಪ್ರಕರಣವೊಂದರ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಮನಮೋಹನ್ ಹಾಗೂ ಮನೋಜ್ ಮಿಶ್ರಾ ಅವರಿದ್ದ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಇಬ್ಬರು ವಯಸ್ಕರು ತಮ್ಮ ಸ್ವಇಚ್ಛೆಯಿಂದ ಸಂಬಂಧ ಹೊಂದುವುದನ್ನು ಯಾವುದೇ ಕಾನೂನು ನಿಷೇಧಿಸಿಲ್ಲ. ಪರಸ್ಪರ ಒಪ್ಪಿಗೆಯೊಂದಿಗೆ ಬೆಳೆದ ಸಂಬಂಧವನ್ನು ಆಧರಿಸಿ ಅವರ ವ್ಯಕ್ತಿತ್ವ ಅಥವಾ ನೈತಿಕತೆಯನ್ನು ಪ್ರಶ್ನಿಸುವುದು ನ್ಯಾಯಸಮ್ಮತವಲ್ಲ ಎಂದು ಪೀಠ ಹೇಳಿದೆ.
ಸಮಾಜದಲ್ಲಿ ಮಹತ್ತರ ಬದಲಾವಣೆಗಳಾಗಿವೆ. ವಿವಾಹಪೂರ್ವ ಸಂಬಂಧಗಳನ್ನು ಇಂದಿನ ಸಾಮಾಜಿಕ ವಾಸ್ತವದ ಭಾಗವಾಗಿ ಪರಿಗಣಿಸಬೇಕಿದ್ದು, ಹಳೆಯ ಮಾನದಂಡಗಳ ಆಧಾರದ ಮೇಲೆ ವ್ಯಕ್ತಿಗಳ ಬಗ್ಗೆ ಪ್ರತಿಕೂಲ ಅಭಿಪ್ರಾಯ ರೂಪಿಸಬಾರದು ಎಂದು ನ್ಯಾಯಾಲಯ ತಿಳಿಸಿದೆ.
ಕಾನ್‌ಸ್ಟೆಬಲ್ ನೇಮಕಾತಿ ವಿವಾದ
ಈ ಪ್ರಕರಣವು ತೆಲಂಗಾಣದ ಗಜುಲ ತಿರುಪತಿ ಎಂಬ ಪೊಲೀಸ್ ಕಾನ್‌ಸ್ಟೆಬಲ್ ಅಭ್ಯರ್ಥಿಯ ನೇಮಕಾತಿಗೆ ಸಂಬಂಧಿಸಿದೆ. ತಿರುಪತಿ ಅವರು ಹುದ್ದೆಗೆ ಆಯ್ಕೆಯಾಗಿದ್ದರೂ, 2014ರಲ್ಲಿ ತಮ್ಮ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣದ ಹಿನ್ನೆಲೆಯಲ್ಲಿ ಅವರ ಆಯ್ಕೆಯನ್ನು ತೆಲಂಗಾಣ ರಾಜ್ಯ ಮಟ್ಟದ ಪೊಲೀಸ್ ನೇಮಕಾತಿ ಮಂಡಳಿ ರದ್ದುಗೊಳಿಸಿತ್ತು.
ತಿರುಪತಿ ಅವರ ವಿರುದ್ಧ ನೆರೆಹೊರೆಯ ಮಹಿಳೆಯೊಬ್ಬರು ದೂರು ದಾಖಲಿಸಿದ್ದರು. ಬಳಿಕ ಎರಡೂ ಕಡೆಯವರು ರಾಜಿ ಮಾಡಿಕೊಂಡು 2015ರಲ್ಲಿ ಲೋಕ ಅದಾಲತ್ ಮೂಲಕ ಪ್ರಕರಣ ಇತ್ಯರ್ಥಗೊಳಿಸಿದ್ದರು. ಗಂಭೀರ ಆರೋಪಗಳು ಅಂತಿಮವಾಗಿ ಮುಂದುವರಿಯಲಿಲ್ಲ.
ಆಯ್ಕೆ ರದ್ದುಗೊಳಿಸಿದ್ದ ಕ್ರಮವನ್ನು ಪ್ರಶ್ನಿಸಿ ತಿರುಪತಿ ನ್ಯಾಯಾಲಯದ ಮೊರೆ ಹೋಗಿದ್ದರು. ಹೈಕೋರ್ಟಿನಲ್ಲಿ ನಡೆದ ಕಾನೂನು ಹೋರಾಟದ ಬಳಿಕ ಅವರು ಸುಪ್ರೀಮ ಕೋರ್ಟಿಗೆ ಮೇಲ್ಮನವಿ ಸಲ್ಲಿಸಿದ್ದರು.
ರಾಜಿ ಮಾಡಿಕೊಂಡರೆ ತಪ್ಪಿತಸ್ಥರೆಂದಲ್ಲ
ಲೋಕ ಅದಾಲತ್‌ನಲ್ಲಿ ರಾಜಿ ಮೂಲಕ ಪ್ರಕರಣ ಇತ್ಯರ್ಥಗೊಂಡಿದೆ ಎಂಬ ಕಾರಣಕ್ಕೆ ಸಂಬಂಧಪಟ್ಟ ವ್ಯಕ್ತಿ ತಪ್ಪಿತಸ್ಥ ಎಂದು ನಿರ್ಧರಿಸಲು ಸಾಧ್ಯವಿಲ್ಲ ಎಂದು ಸುಪ್ರೀಮ ಕೋರ್ಟ ಹೇಳಿದೆ.
ದೂರುದಾರರ ಮೇಲೆ ಒತ್ತಡ ಅಥವಾ ಬೆದರಿಕೆ ಹೇರಲಾಗಿದೆ ಎಂಬುದಕ್ಕೆ ಯಾವುದೇ ಸಾಕ್ಷ್ಯಗಳಿಲ್ಲ. ಪ್ರಕರಣವನ್ನು ಮುಂದುವರಿಸದೆ ದೂರುದಾರರೇ ರಾಜಿಗೆ ಒಪ್ಪಿಕೊಂಡಿರುವ ಸಂದರ್ಭದಲ್ಲಿ ಅಧಿಕಾರಿಗಳು ತಮ್ಮದೇ ಆದ ಊಹಾಪೋಹಗಳ ಆಧಾರದ ಮೇಲೆ ಪ್ರತಿಕೂಲ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ ಎಂದು ಪೀಠ ತಿಳಿಸಿದೆ.
ತಿರುಪತಿ ಅವರ ಆಯ್ಕೆ ರದ್ದುಗೊಳಿಸಿದ್ದ ಕ್ರಮವನ್ನು ರದ್ದುಪಡಿಸಿದ ಸುಪ್ರೀಮ ಕೋರ್ಟ, ಕೇವಲ ಅನುಮಾನ ಅಥವಾ ಸಾಮಾಜಿಕ ಪೂರ್ವಾಗ್ರಹಗಳ ಆಧಾರದ ಮೇಲೆ ಅಭ್ಯರ್ಥಿಯ ವಿರುದ್ಧ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ. ಅಪರಾಧ ನಡೆದಿದೆ ಹಾಗೂ ಅದರಲ್ಲಿ ವ್ಯಕ್ತಿಯ ಪಾತ್ರವಿದೆ ಎಂಬುದಕ್ಕೆ ಸ್ಪಷ್ಟ ಸಾಕ್ಷ್ಯಗಳು ಇರಬೇಕು ಎಂದು ನ್ಯಾಯಾಲಯ ತನ್ನ ತೀರ್ಪಿನಲ್ಲಿ ತಿಳಿಸಿದೆ.