ಮುಂಬೈ, ಜೂ. 5 : ಜಾಗತಿಕ ಆರ್ಥಿಕ ಅನಿಶ್ಚಿತತೆ ಮತ್ತು ಏರುತ್ತಿರುವ ಕಚ್ಚಾ ತೈಲ ಬೆಲೆಗಳ ನಡುವೆಯೂ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ರೆಪೊ ದರದಲ್ಲಿ ಯಾವುದೇ ಬದಲಾವಣೆ ಮಾಡದೆ ಶೇ 5.25ರಲ್ಲೇ ಮುಂದುವರಿಸಲು ಶುಕ್ರವಾರ ತೀರ್ಮಾನಿಸಿದೆ.
ಆರ್‌ಬಿಐ ಹಣಕಾಸು ನೀತಿ ಸಮಿತಿಯ ಸಭೆಯ ಬಳಿಕ ಈ ನಿರ್ಧಾರವನ್ನು ಪ್ರಕಟಿಸಿದ ಗವರ್ನರ್ ಸಂಜಯ್ ಮಲ್ಹೋತ್ರಾ, ಜಾಗತಿಕ ಮಟ್ಟದಲ್ಲಿ ಹೆಚ್ಚುತ್ತಿರುವ ಭೌಗೋಳಿಕ ಉದ್ವಿಗ್ನತೆ, ಕಚ್ಚಾ ತೈಲ ಬೆಲೆಗಳ ಏರಿಕೆ ಹಾಗೂ ಪೂರೈಕೆ ಸರಪಳಿಯಲ್ಲಿನ ಅಡಚಣೆಗಳನ್ನು ಗಮನದಲ್ಲಿಟ್ಟುಕೊಂಡು ಯಥಾಸ್ಥಿತಿ ಕಾಯ್ದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಇದರ ಜೊತೆಗೆ, ಪ್ರಸಕ್ತ ಹಣಕಾಸು ವರ್ಷದ ದೇಶದ ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) ಬೆಳವಣಿಗೆ ದರದ ಅಂದಾಜನ್ನು ಆರ್‌ಬಿಐ ಪರಿಷ್ಕರಿಸಿದ್ದು, ಹಿಂದಿನ ಅಂದಾಜಿಗಿಂತ ಕಡಿಮೆ ಮಾಡಿ ಶೇ 6.6ಕ್ಕೆ ನಿಗದಿಪಡಿಸಿದೆ. ಜಾಗತಿಕ ಆರ್ಥಿಕ ಪರಿಸ್ಥಿತಿಯಲ್ಲಿನ ಅನಿಶ್ಚಿತತೆ, ವಾಣಿಜ್ಯ ಉದ್ವಿಗ್ನತೆ ಮತ್ತು ಇಂಧನ ಬೆಲೆಗಳ ಏರಿಳಿತದ ಪರಿಣಾಮ ದೇಶದ ಆರ್ಥಿಕ ಬೆಳವಣಿಗೆಯ ಮೇಲೂ ಬೀಳುವ ಸಾಧ್ಯತೆ ಇರುವುದರಿಂದ ಮುನ್ನೆಚ್ಚರಿಕೆಯ ನಿಲುವು ತಾಳಲಾಗಿದೆ ಎಂದು ಆರ್‌ಬಿಐ ಅಭಿಪ್ರಾಯಪಟ್ಟಿದೆ.
ರೆಪೊ ದರದಲ್ಲಿ ಬದಲಾವಣೆ ಇಲ್ಲದಿರುವುದರಿಂದ ಬ್ಯಾಂಕ್‌ಗಳ ಸಾಲ ಹಾಗೂ ಠೇವಣಿ ಬಡ್ಡಿದರಗಳಲ್ಲಿ ತಕ್ಷಣದ ಬದಲಾವಣೆ ಆಗುವ ಸಾಧ್ಯತೆ ಕಡಿಮೆ ಎನ್ನಲಾಗಿದೆ. ಆದರೆ ಮುಂದಿನ ದಿನಗಳಲ್ಲಿ ಹಣದುಬ್ಬರ, ಜಾಗತಿಕ ಆರ್ಥಿಕ ಬೆಳವಣಿಗೆ ಹಾಗೂ ಕಚ್ಚಾ ತೈಲ ಮಾರುಕಟ್ಟೆಯ ಸ್ಥಿತಿಗತಿಗಳನ್ನು ಆಧರಿಸಿ ಆರ್‌ಬಿಐ ತನ್ನ ಮುಂದಿನ ನೀತಿಯನ್ನು ರೂಪಿಸುವ ನಿರೀಕ್ಷೆಯಿದೆ.