ಹೊಸದಿಲ್ಲಿ, ಮೇ 11 : ಪಶ್ಚಿಮ ಏಶ್ಯ ಬಿಕ್ಕಟ್ಟಿನಿಂದ ಉಂಟಾಗಿರುವ ಸವಾಲುಗಳನ್ನು ಎದುರಿಸಲು ಜನರು ಕೆಲವು ನಿಯಂತ್ರಣ ಕ್ರಮಗಳನ್ನು ಅನುಸರಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ನೀಡಿದ ಕರೆಯನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತೀವ್ರವಾಗಿ ಟೀಕಿಸಿದ್ದಾರೆ.
ರಾಜಿ ಮಾಡಿಕೊಂಡಿರುವ ಪ್ರಧಾನಿಗೆ ದೇಶವನ್ನು ಮುನ್ನಡೆಸುವ ಸಾಮರ್ಥ್ಯ ಉಳಿದಿಲ್ಲ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ರಾಹುಲ್ ಗಾಂಧಿ, ಪ್ರಧಾನಿ ಮೋದಿ ಜನರಿಗೆ ಚಿನ್ನ ಖರೀದಿಸಬೇಡಿ, ವಿದೇಶ ಪ್ರವಾಸ ತಪ್ಪಿಸಿ, ಪೆಟ್ರೋಲ್ ಬಳಕೆಯನ್ನು ಕಡಿಮೆ ಮಾಡಿ, ರಸಗೊಬ್ಬರ ಹಾಗೂ ಖಾದ್ಯ ತೈಲ ಬಳಕೆಯನ್ನು ತಗ್ಗಿಸಿ, ಮೆಟ್ರೊ ಬಳಸಿ ಮತ್ತು ಮನೆಯಿಂದಲೇ ಕೆಲಸ ಮಾಡಿ ಎಂದು ಕರೆ ನೀಡಿದ್ದಾರೆ ಎಂದು ಹೇಳಿದ್ದಾರೆ.
ಇವು ಕೇವಲ ಸಲಹೆಗಳಲ್ಲ, ಸರ್ಕಾರದ ವೈಫಲ್ಯದ ಸ್ಪಷ್ಟ ಸಂಕೇತಗಳಾಗಿವೆ ಎಂದು ಅವರು ಟೀಕಿಸಿದ್ದಾರೆ.
ಕಳೆದ 12 ವರ್ಷಗಳಲ್ಲಿ ದೇಶವನ್ನು ಜನರ ಖಾಸಗಿ ಬದುಕಿನ ನಿರ್ಧಾರಗಳಿಗೂ ಸರ್ಕಾರ ಸೂಚನೆ ನೀಡುವ ಸ್ಥಿತಿಗೆ ತಂದು ನಿಲ್ಲಿಸಲಾಗಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಸರ್ಕಾರ ತನ್ನ ಹೊಣೆಗಾರಿಕೆಯನ್ನು ಜನರ ಮೇಲೆ ಹಾಕುವ ಪ್ರಯತ್ನ ಮಾಡುತ್ತಿದ್ದು, ಅದರಿಂದ ತಾವು ಉತ್ತರದಾಯಿತ್ವದಿಂದ ತಪ್ಪಿಸಿಕೊಳ್ಳಬಹುದು ಎಂದು ಭಾವಿಸಿದೆ ಎಂದು ಅವರು ಕಿಡಿಕಾರಿದ್ದಾರೆ.
ರಾಜಿ ಮಾಡಿಕೊಂಡಿರುವ ಪ್ರಧಾನಿಗೆ ದೇಶವನ್ನು ಸಮರ್ಥವಾಗಿ ಮುನ್ನಡೆಸುವ ಶಕ್ತಿ ಉಳಿದಿಲ್ಲ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿಯವರ ಏಳು ಮನವಿಗಳು ಅತ್ಯಂತ ಗಂಭೀರ ಸ್ವರೂಪದವುಗಳಾಗಿದ್ದು, ದೇಶದ ನೈಜ ಪರಿಸ್ಥಿತಿಯ ಕುರಿತು ಮಾಹಿತಿ ನೀಡಲು ತಕ್ಷಣವೇ ಲೋಕಸಭೆ ಅಧಿವೇಶನ ಕರೆಯಬೇಕು ಎಂದು ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ ಆಗ್ರಹಿಸಿದ್ದಾರೆ.