ಹೊಸದಿಲ್ಲಿ, ಜುಲೈ 20: ಪ್ರತಿಭಟನೆಯ ನಡುವೆಯೇ ಸಿಜೆಪಿ ವಕ್ತಾರ ಸೌರವ ದಾಸ್ ಹಾಗೂ ಪಕ್ಷದ ನಾಯಕ ಅಶುತೋಷ ರಾಂಕಾ ಅವರು ಕೇಂದ್ರ ಸಚಿವ ಹಾಗೂ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿದರು. ಸುಮಾರು ಎರಡು ಗಂಟೆಗಳ ಕಾಲ ಕಾಯುವಿಕೆಯ ಬಳಿಕ ನಡೆದ ಸುಮಾರು ಹತ್ತು ನಿಮಿಷಗಳ ಭೇಟಿಯಲ್ಲಿ ಸಂಘಟನೆಯ ಪ್ರಮುಖ ಬೇಡಿಕೆಗಳನ್ನು ಒಳಗೊಂಡ ಲಿಖಿತ ಮನವಿಯನ್ನು ನಡ್ಡಾ ಅವರಿಗೆ ಸಲ್ಲಿಸಲಾಯಿತು.
ಬಳಿಕ ಪ್ರತಿಕ್ರಿಯಿಸಿದ ಸೌರವ್ ದಾಸ್, "ನಮ್ಮ ಬೇಡಿಕೆಗಳನ್ನು ವಿವರಿಸುವ ಲಿಖಿತ ಪತ್ರವನ್ನು ಸಲ್ಲಿಸಿದ್ದೇವೆ. ಈ ವಿಷಯವನ್ನು ಆಂತರಿಕವಾಗಿ ಚರ್ಚಿಸುವುದಾಗಿ ಜೆ.ಪಿ. ನಡ್ಡಾ ಭರವಸೆ ನೀಡಿದ್ದಾರೆ. ಸರ್ಕಾರ ನಮ್ಮ ಮಾತುಗಳನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂಬ ನಿರೀಕ್ಷೆಯಿದೆ" ಎಂದು ಹೇಳಿದರು.