ತೆಹರಾನ್, ಜೂ. 8 : ಇರಾನ್‌ನ ಪೆಟ್ರೋಕೆಮಿಕಲ್ ಘಟಕದ ಮೇಲೆ ನಡೆದ ದಾಳಿಗೆ ಪ್ರತೀಕಾರವಾಗಿ ಇಸ್ರೇಲ್‌ನ ಹೈಫಾ ನಗರದಲ್ಲಿರುವ ರಾಸಾಯನಿಕ ಘಟಕವನ್ನು ಗುರಿಯಾಗಿಸಿ ಕ್ಷಿಪಣಿ ದಾಳಿ ನಡೆಸಿರುವುದಾಗಿ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ತಿಳಿಸಿದೆ.
ಅಮೆರಿಕ ಮತ್ತು ಇಸ್ರೇಲ್ ಸೇರಿ ಇರಾನ್‌ನ ಪೆಟ್ರೋಕೆಮಿಕಲ್ ತಾಣದ ಮೇಲೆ ದಾಳಿ ನಡೆಸಿವೆ ಎಂದು ಆರೋಪಿಸಿರುವ ಐಆರ್‌ಜಿಸಿ, ಅದಕ್ಕೆ ಪ್ರತಿಯಾಗಿ ಹೈಫಾದಲ್ಲಿರುವ ಇದೇ ಮಾದರಿಯ ಕೈಗಾರಿಕಾ ಘಟಕದ ಮೇಲೆ ದಾಳಿ ನಡೆಸಲಾಗಿದೆ ಎಂದು ಹೇಳಿದೆ.
ಇರಾನ್‌ನ ನಾಗರಿಕ ಹಾಗೂ ಇಂಧನ ಮೂಲಸೌಕರ್ಯಗಳ ಮೇಲೆ ಮತ್ತಷ್ಟು ದಾಳಿಗಳು ನಡೆದರೆ ಅದರ ಪರಿಣಾಮಗಳು ಜಾಗತಿಕ ಮಟ್ಟದಲ್ಲಿ ಕಾಣಿಸಿಕೊಳ್ಳಲಿವೆ ಎಂದು ಐಆರ್‌ಜಿಸಿ ಎಚ್ಚರಿಕೆ ನೀಡಿದೆ. ವಸತಿ ಪ್ರದೇಶಗಳು ಮತ್ತು ತೈಲ ಕೈಗಾರಿಕೆಗಳನ್ನು ಗುರಿಯಾಗಿಸಿ ದಾಳಿ ನಡೆಸುವ ಮೂಲಕ ಇಸ್ರೇಲ್ ಅಪಾಯಕಾರಿ ಬೆಳವಣಿಗೆಗೆ ನಾಂದಿ ಹಾಡಿದೆ. ಇದರ ಪರಿಣಾಮಗಳು ಮಧ್ಯಪ್ರಾಚ್ಯದ ಇಂಧನ ಮೂಲಸೌಕರ್ಯಗಳಿಗೂ ವಿಸ್ತರಿಸಬಹುದು. ಜಾಗತಿಕ ಆರ್ಥಿಕತೆಯ ಮೇಲೆ ಉಂಟಾಗುವ ಪರಿಣಾಮಗಳಿಗೆ ಅಮೆರಿಕ ಹೊಣೆಗಾರನಾಗಿರಲಿದೆ ಎಂದು ಐಆರ್‌ಜಿಸಿ ಹೇಳಿಕೆಯಲ್ಲಿ ತಿಳಿಸಿದೆ.
ಇದರ ನಡುವೆಯೇ ಖುಝೆಸ್ತಾನ್ ಪ್ರಾಂತ್ಯದ ಮಹಶಹರ್‌ನಲ್ಲಿರುವ ಕರುಣ್ ಪೆಟ್ರೋಕೆಮಿಕಲ್ ಘಟಕದ ಮೇಲೆ ಇಸ್ರೇಲ್ ಎರಡು ಬಾರಿ ದಾಳಿ ನಡೆಸಿದೆ ಎಂದು ಇರಾನ್‌ನ ಅರೆ ಸರ್ಕಾರಿ ಸುದ್ದಿ ಸಂಸ್ಥೆ ವರದಿ ಮಾಡಿದೆ. ಈ ದಾಳಿಗಳಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಘಟಕಕ್ಕೆ ಉಂಟಾಗಿರುವ ಹಾನಿಯ ಪ್ರಮಾಣದ ಕುರಿತು ಪರಿಶೀಲನೆ ಮುಂದುವರಿದಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಭದ್ರತಾ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಮಹಶಹರ್ ಬಂದರು ಆಡಳಿತವು ನಗರ ಮಟ್ಟದ ಸರ್ಕಾರಿ ಕಚೇರಿಗಳಲ್ಲಿ ಸಿಬ್ಬಂದಿ ಹಾಜರಾತಿಯನ್ನು ಶೇಕಡಾ 30ಕ್ಕೆ ಇಳಿಸಿದೆ.
ಇಂದಿನಿಂದ ನಗರ ಮಟ್ಟದ ಎಲ್ಲ ಕಚೇರಿಗಳು ಶೇಕಡಾ 30ರಷ್ಟು ಸಿಬ್ಬಂದಿಯೊಂದಿಗೆ ಕಾರ್ಯನಿರ್ವಹಿಸಲಿವೆ. ಸಾರ್ವಜನಿಕರು ತಮ್ಮ ಕೆಲಸಗಳಿಗಾಗಿ ಕಚೇರಿಗಳಿಗೆ ಭೇಟಿ ನೀಡುವಾಗ ಇದನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂದು ಆಡಳಿತ ಸೂಚಿಸಿದೆ. ಆದರೆ ತುರ್ತು ಸೇವೆಗಳು ಹಾಗೂ ವಿದ್ಯುತ್, ನೀರು ಮತ್ತು ಅನಿಲ ಪೂರೈಕೆಗೆ ಸಂಬಂಧಿಸಿದ ಸೇವೆಗಳಿಗೆ ಈ ನಿರ್ಬಂಧ ಅನ್ವಯಿಸುವುದಿಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ.