ವಾಷಿಂಗ್ಟನ್, ಜೂ.15 : ಪಶ್ಚಿಮ ಏಷ್ಯಾವನ್ನು ಹಲವು ತಿಂಗಳುಗಳಿಂದ ಕಾಡುತ್ತಿದ್ದ ಯುದ್ಧದ ಕರಿನೆರಳಿಗೆ ಅಂತ್ಯ ಹಾಡುವ ಬೆಳವಣಿಗೆಯೊಂದರಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್‌ನೊಂದಿಗಿನ ಒಪ್ಪಂದ ಈಗ ಪೂರ್ಣಗೊಂಡಿದೆ ಎಂದು ಘೋಷಿಸಿದ್ದಾರೆ. ಹಾರ್ಮುಝ್ ಜಲಸಂಧಿಯನ್ನು ಜಾಗತಿಕ ಹಡಗು ಸಂಚಾರಕ್ಕೆ ಸಂಪೂರ್ಣವಾಗಿ ತೆರೆಯಲು ಅನುಮತಿ ನೀಡಿರುವುದಾಗಿ ತಿಳಿಸಿರುವ ಅವರು, ಅಮೆರಿಕದ ನೌಕಾ ದಿಗ್ಬಂಧನವನ್ನೂ ತಕ್ಷಣದಿಂದಲೇ ತೆರವುಗೊಳಿಸಲಾಗುವುದು ಎಂದು ಪ್ರಕಟಿಸಿದ್ದಾರೆ.
ವಿಶ್ವದ ಹಡಗುಗಳೇ, ನಿಮ್ಮ ಎಂಜಿನ್‌ಗಳನ್ನು ಪ್ರಾರಂಭಿಸಿ. ತೈಲ ಹರಿಯಲಿ ಎಂಬ ಟ್ರಂಪ್ ಅವರ ಘೋಷಣೆ ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ಹೊಸ ಆಶಾಭಾವನೆ ಮೂಡಿಸಿದೆ.
ಅಮೆರಿಕ ಮತ್ತು ಇರಾನ್ ನಡುವೆ ನಡೆದ ತೀವ್ರ ರಾಜತಾಂತ್ರಿಕ ಮಾತುಕತೆಗಳ ಫಲವಾಗಿ ತಿಳುವಳಿಕೆ ಪತ್ರಕ್ಕೆ ಒಪ್ಪಿಗೆ ದೊರೆತಿದ್ದು, ಮುಂದಿನ 60 ದಿನಗಳಲ್ಲಿ ಅಂತಿಮ ಶಾಂತಿ ಒಪ್ಪಂದದ ಕರಡು ರೂಪಿಸಲಾಗುವುದು ಎಂದು ತಿಳಿದುಬಂದಿದೆ. ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರು ಜೂನ್ 19ರಂದು ಸ್ವಿಟ್ಜರ್ಲೆಂಡ್‌ನಲ್ಲಿ ಒಪ್ಪಂದಕ್ಕೆ ಅಧಿಕೃತ ಸಹಿ ನಡೆಯಲಿದೆ ಎಂದು ಹೇಳಿದ್ದಾರೆ.
ಹಾರ್ಮುಝ್ ಮತ್ತೆ ತೆರೆದು ಜಗತ್ತಿಗೆ ನಿರಾಳತೆ
ಜಾಗತಿಕ ತೈಲ ಸಾಗಣೆಯ ಪ್ರಮುಖ ಕೇಂದ್ರವಾಗಿರುವ ಹಾರ್ಮುಝ್ ಜಲಸಂಧಿಯಲ್ಲಿ ಯುದ್ಧದ ಕಾರಣ ಕಳೆದ ಹಲವು ವಾರಗಳಿಂದ ಉದ್ವಿಗ್ನತೆ ಉಂಟಾಗಿತ್ತು. ಇರಾನ್ ಹಡಗು ಸಂಚಾರಕ್ಕೆ ಅಡ್ಡಿ ಉಂಟುಮಾಡಿದರೆ, ಪ್ರತಿಯಾಗಿ ಅಮೆರಿಕ ಇರಾನ್ ಬಂದರುಗಳಿಗೆ ತೆರಳುವ ಹಡಗುಗಳ ಮೇಲೆ ನಿರ್ಬಂಧ ಹೇರಿತ್ತು.
ಇದರಿಂದ ತೈಲ ಮತ್ತು ನೈಸರ್ಗಿಕ ಅನಿಲ ಪೂರೈಕೆ ಮೇಲೆ ಪರಿಣಾಮ ಬೀರಿದ್ದು, ಜಾಗತಿಕ ಮಾರುಕಟ್ಟೆಗಳಲ್ಲಿ ಬೆಲೆ ಏರಿಕೆಗೆ ಕಾರಣವಾಗಿತ್ತು. ಈಗ ಜಲಸಂಧಿಯನ್ನು ಪುನಃ ತೆರೆಯುವ ಹಾಗೂ ನೌಕಾ ದಿಗ್ಬಂಧನ ತೆರವುಗೊಳಿಸುವ ನಿರ್ಧಾರವು ಇಂಧನ ಮಾರುಕಟ್ಟೆಗೆ ಮಹತ್ವದ ನಿರಾಳತೆಯನ್ನು ನೀಡುವ ಸಾಧ್ಯತೆ ಇದೆ.
ಸ್ಥಗಿತ ಆಸ್ತಿಗಳ ಬಿಡುಗಡೆ ಕುರಿತು ಭಿನ್ನಾಭಿಪ್ರಾಯ
ಒಪ್ಪಂದದ ಪ್ರಮುಖ ಅಂಶಗಳಲ್ಲಿ ಒಂದಾಗಿ ಇರಾನ್‌ನ ಸ್ಥಗಿತಗೊಂಡ ಹಣಕಾಸು ಮತ್ತು ಆಸ್ತಿಗಳ ಬಿಡುಗಡೆ ವಿಚಾರವೂ ಚರ್ಚೆಗೆ ಬಂದಿದೆ. ಇರಾನಿನ ಮೂಲಗಳ ಪ್ರಕಾರ ಸುಮಾರು 25 ಶತಕೋಟಿ ಡಾಲರ್ ಮೌಲ್ಯದ ಆಸ್ತಿಗಳನ್ನು ಬಿಡುಗಡೆ ಮಾಡುವ ಪ್ರಸ್ತಾವ ಕರಡು ಒಪ್ಪಂದದಲ್ಲಿ ಸೇರಿಸಲಾಗಿದೆ.
ವಿದೇಶಾಂಗ ಸಚಿವ ಅಬ್ಬಾಸ್ ಅರಾಗ್ಚಿ ಅವರು 14 ಅಂಶಗಳ ತಿಳುವಳಿಕೆ ಪತ್ರಕ್ಕೆ ಸಹಿ ಹಾಕಿದ ಬಳಿಕ ಸ್ಥಗಿತಗೊಂಡ ಆಸ್ತಿಗಳ ಬಿಡುಗಡೆ ಪ್ರಕ್ರಿಯೆ ಆರಂಭವಾಗಲಿದೆ ಎಂದು ಹೇಳಿದ್ದಾರೆ.
ಆದರೆ ಅಮೆರಿಕದ ಅಧಿಕಾರಿಗಳು ಈ ವಾದವನ್ನು ತಳ್ಳಿಹಾಕಿದ್ದಾರೆ. ಇರಾನ್ ತನ್ನ ಬದ್ಧತೆಗಳನ್ನು ಜಾರಿಗೊಳಿಸುವ ಮೊದಲು ಯಾವುದೇ ಹಣ ಬಿಡುಗಡೆ ಆಗುವುದಿಲ್ಲ ಎಂದು ಶ್ವೇತಭವನದ ಮೂಲಗಳು ಸ್ಪಷ್ಟಪಡಿಸಿವೆ.
60 ದಿನಗಳ ಮಾತುಕತೆಗೆ ಒಪ್ಪಿಗೆ
ಈಗ ಘೋಷಣೆಯಾಗಿರುವುದು ಅಂತಿಮ ಶಾಂತಿ ಒಪ್ಪಂದವಲ್ಲ. ಇದು 60 ದಿನಗಳ ಮಾತುಕತೆಗೆ ದಾರಿ ಮಾಡಿಕೊಡುವ ತಿಳುವಳಿಕೆ ಪತ್ರವಾಗಿದೆ. ಈ ಅವಧಿಯಲ್ಲಿ ಪರಮಾಣು ಕಾರ್ಯಕ್ರಮ, ತೈಲ ನಿರ್ಬಂಧಗಳ ಸಡಿಲಿಕೆ, ಹಣಕಾಸು ನಿರ್ಬಂಧಗಳ ತೆರವು ಸೇರಿದಂತೆ ಹಲವು ವಿಷಯಗಳ ಕುರಿತು ಸಮಗ್ರ ಮಾತುಕತೆ ನಡೆಯಲಿದೆ.
ಇರಾನ್‌ನ ಉಪ ವಿದೇಶಾಂಗ ಸಚಿವ ಕಜೆಮ್ ಘರಿಬಬಾದಿ, ಈ ಒಪ್ಪಂದವು ಯುದ್ಧಕ್ಕೆ ತಕ್ಷಣದ ವಿರಾಮ ತರುತ್ತದೆ. ಅಂತಿಮ ಶಾಂತಿ ಒಪ್ಪಂದಕ್ಕಾಗಿ ಮುಂದಿನ ಎರಡು ತಿಂಗಳಲ್ಲಿ ಮಾತುಕತೆಗಳು ಆರಂಭವಾಗಲಿವೆ ಎಂದು ಹೇಳಿದ್ದಾರೆ.
ಲೆಬನಾನ್‌ಗೂ ವಿಸ್ತರಿಸಿದ ಶಾಂತಿ ಸೂತ್ರ
ಒಪ್ಪಂದ ಘೋಷಣೆಗೆ ಕೆಲವೇ ಗಂಟೆಗಳ ಮುನ್ನ ಲೆಬನಾನ್ ರಾಜಧಾನಿ ಬೈರುತ್‌ನ ಉಪನಗರಗಳಲ್ಲಿ ಇಸ್ರೇಲ್ ದಾಳಿ ನಡೆಸಿತ್ತು. ಇದಕ್ಕೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಇರಾನ್ ಎಚ್ಚರಿಕೆ ನೀಡಿದ್ದರಿಂದ ಶಾಂತಿ ಪ್ರಕ್ರಿಯೆಯ ಭವಿಷ್ಯದ ಬಗ್ಗೆ ಅನುಮಾನ ಮೂಡಿತ್ತು.
ಆದರೆ ಬಳಿಕ ನಡೆದ ಬೆಳವಣಿಗೆಯಲ್ಲಿ ಲೆಬನಾನ್ ಸೇರಿದಂತೆ ಎಲ್ಲ ರಂಗಗಳಲ್ಲಿನ ಮಿಲಿಟರಿ ಕಾರ್ಯಾಚರಣೆಗಳನ್ನು ಶಾಶ್ವತವಾಗಿ ಕೊನೆಗೊಳಿಸುವ ಅಂಶವನ್ನು ಒಪ್ಪಂದದಲ್ಲಿ ಸೇರಿಸಲಾಗಿದೆ ಎಂದು ತಿಳಿದುಬಂದಿದೆ.
ಸಂಘರ್ಷಕ್ಕೆ ರಾಜತಾಂತ್ರಿಕ ಪರಿಹಾರ ಕಂಡುಕೊಂಡಿರುವುದಕ್ಕಾಗಿ ಅಮೆರಿಕ ಮತ್ತು ಇರಾನ್‌ಗೆ ಅಭಿನಂದನೆ ಸಲ್ಲಿಸಿರುವ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್, ಮಧ್ಯಸ್ಥಿಕೆ ಪ್ರಕ್ರಿಯೆಗೆ ಬೆಂಬಲ ನೀಡಿದ ಖತರ್, ಸೌದಿ ಅರೇಬಿಯಾ ಮತ್ತು ತುರ್ಕಿಯೇ ನಾಯಕರಿಗೂ ಧನ್ಯವಾದ ಅರ್ಪಿಸಿದ್ದಾರೆ.
ಯುದ್ಧದ ಭೀತಿಯಿಂದ ತಲ್ಲಣಗೊಂಡಿದ್ದ ಜಾಗತಿಕ ಮಾರುಕಟ್ಟೆಗಳು ಇದೀಗ ಶಾಂತಿಯ ಸಂಕೇತಗಳನ್ನು ಎದುರುನೋಡುತ್ತಿವೆ. ಆದರೆ ಪರಮಾಣು ಕಾರ್ಯಕ್ರಮ, ನಿರ್ಬಂಧಗಳ ಸಡಿಲಿಕೆ ಹಾಗೂ ಸ್ಥಗಿತಗೊಂಡ ಆಸ್ತಿಗಳ ಬಿಡುಗಡೆ ಕುರಿತ ಅಂತಿಮ ನಿರ್ಧಾರಗಳು ಮುಂದಿನ 60 ದಿನಗಳ ಮಾತುಕತೆಯ ಮೇಲೆಯೇ ಅವಲಂಬಿತವಾಗಿವೆ.