ವಾಷಿಂಗ್ಟನ್, ಜೂ. 2 : ದಕ್ಷಿಣ ಲೆಬನಾನ್‌ನಲ್ಲಿ ಇಸ್ರೇಲ್ ತನ್ನ ಸೇನಾ ಕಾರ್ಯಾಚರಣೆಗಳನ್ನು ಮತ್ತಷ್ಟು ವಿಸ್ತರಿಸಿರುವ ಬೆನ್ನಲ್ಲೇ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ನಡುವಿನ ದೂರವಾಣಿ ಮಾತುಕತೆ ವೇಳೆ ತೀವ್ರ ವಾಗ್ವಾದ ನಡೆದಿರುವುದಾಗಿ ವರದಿಯಾಗಿದೆ. ಈ ಬೆಳವಣಿಗೆ ಪಶ್ಚಿಮ ಏಷ್ಯಾದಲ್ಲಿ ಈಗಾಗಲೇ ಉದ್ವಿಗ್ನಗೊಂಡಿರುವ ಪರಿಸ್ಥಿತಿಗೆ ಮತ್ತಷ್ಟು ತೀವ್ರತೆ ನೀಡಿದೆ.
ಅಮೆರಿಕದ ಮಾಧ್ಯಮ ವರದಿಗಳ ಪ್ರಕಾರ, ಲೆಬನಾನ್‌ನಲ್ಲಿ ನಡೆಯುತ್ತಿರುವ ಇಸ್ರೇಲಿ ದಾಳಿಗಳ ಕುರಿತು ಟ್ರಂಪ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇಸ್ರೇಲ್ ದಾಳಿ ಮುಂದುವರಿಸುತ್ತಿರುವುದು ಮಧ್ಯಪ್ರಾಚ್ಯದಲ್ಲಿ ಶಾಂತಿ ಸ್ಥಾಪನೆಗೆ ಅಮೆರಿಕ ನಡೆಸುತ್ತಿರುವ ರಾಜತಾಂತ್ರಿಕ ಪ್ರಯತ್ನಗಳಿಗೆ ಧಕ್ಕೆ ಉಂಟು ಮಾಡುತ್ತಿದೆ ಎಂದು ಅವರು ನೆತನ್ಯಾಹುಗೆ ತಿಳಿಸಿದ್ದಾರೆ ಎನ್ನಲಾಗಿದೆ.
ಆಕ್ಸಿಯೊಸ್ ವರದಿ ಪ್ರಕಾರ, ದೂರವಾಣಿ ಸಂಭಾಷಣೆಯ ವೇಳೆ ಟ್ರಂಪ್ ಅತ್ಯಂತ ಕಠಿಣ ಶಬ್ದಗಳಲ್ಲಿ ನೆತನ್ಯಾಹು ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಲೆಬನಾನ್‌ನಲ್ಲಿ ನಡೆಯುತ್ತಿರುವ ಸೇನಾ ಕಾರ್ಯಾಚರಣೆಗಳು ಇಸ್ರೇಲ್ ಅನ್ನು ಜಾಗತಿಕ ಮಟ್ಟದಲ್ಲಿ ಇನ್ನಷ್ಟು ಪ್ರತ್ಯೇಕಿಸುವ ಅಪಾಯವಿದೆ ಎಂದು ಅವರು ಎಚ್ಚರಿಕೆ ನೀಡಿರುವುದಾಗಿ ವರದಿಯಾಗಿದೆ.
ಕೆಲ ಮೂಲಗಳ ಪ್ರಕಾರ, ಟ್ರಂಪ್ ನೆತನ್ಯಾಹು ನಡೆ ಕುರಿತು ತೀವ್ರ ಕೋಪ ವ್ಯಕ್ತಪಡಿಸಿ, ಇಸ್ರೇಲ್ ವಿರುದ್ಧ ಜಾಗತಿಕ ಜನಾಭಿಪ್ರಾಯ ತಿರುಗುತ್ತಿರುವುದನ್ನು ಉಲ್ಲೇಖಿಸಿದ್ದಾರೆ. ಅಮೆರಿಕದ ಬೆಂಬಲದಿಂದಲೇ ಇಸ್ರೇಲ್ ಅಂತರರಾಷ್ಟ್ರೀಯ ವೇದಿಕೆಯಲ್ಲಿ ತನ್ನ ಸ್ಥಾನ ಉಳಿಸಿಕೊಂಡಿದೆ ಎಂಬ ಅರ್ಥದಲ್ಲಿ ಅವರು ಕಟುವಾಗಿ ಪ್ರತಿಕ್ರಿಯಿಸಿದ್ದಾರೆ ಎಂದು ಹೇಳಲಾಗಿದೆ.
ಅಮೆರಿಕದ ಅಧಿಕಾರಿಯೊಬ್ಬರ ಮಾಹಿತಿಯಂತೆ, ಸಂಭಾಷಣೆ ವೇಳೆ ಟ್ರಂಪ್ ನೆತನ್ಯಾಹುವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡು, ನಾನು ಇಲ್ಲದಿದ್ದರೆ ನೀನು ಜೈಲಿನಲ್ಲಿ ಇರುತ್ತಿದ್ದೆ. ನಿನ್ನನ್ನು ನಾನು ರಕ್ಷಿಸುತ್ತಿದ್ದೇನೆ. ಈಗ ಎಲ್ಲರೂ ನಿನ್ನನ್ನು ದ್ವೇಷಿಸುತ್ತಿದ್ದಾರೆ. ಎಲ್ಲರೂ ಇಸ್ರೇಲ್ ಅನ್ನು ದ್ವೇಷಿಸುತ್ತಾರೆ ಎಂದು ಹೇಳಿದ್ದಾರೆ ಎನ್ನಲಾಗಿದೆ.
ಇದೇ ವೇಳೆ, ನೀನು ಏನು ಮಾಡುತ್ತಿದ್ದೀಯಾ ಎಂದು ಪ್ರಶ್ನಿಸಿ, ಲೆಬನಾನ್‌ನಲ್ಲಿ ನಡೆಯುತ್ತಿರುವ ಕಾರ್ಯಾಚರಣೆಗಳ ಪರಿಣಾಮಗಳ ಬಗ್ಗೆ ಟ್ರಂಪ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಕೆಲ ಅಧಿಕಾರಿಗಳು ತಿಳಿಸಿದ್ದಾರೆ.
ಇದಕ್ಕೂ ಮುನ್ನ ಇರಾನ್ ಹಲವು ಬಾರಿ ಲೆಬನಾನ್‌ನಲ್ಲಿ ಕದನ ವಿರಾಮ ಜಾರಿಯಾಗುವುದು ಪ್ರಾದೇಶಿಕ ಶಾಂತಿ ಮಾತುಕತೆಗಳ ಪ್ರಮುಖ ಅಂಶವಾಗಿದೆ ಎಂದು ಹೇಳಿತ್ತು. ಲೆಬನಾನ್‌ನಲ್ಲಿ ಯುದ್ಧ ಪರಿಸ್ಥಿತಿ ಮುಂದುವರಿದರೆ ಅಮೆರಿಕ, ಇರಾನ್ ಹಾಗೂ ಇತರೆ ರಾಷ್ಟ್ರಗಳ ನಡುವೆ ನಡೆಯುತ್ತಿರುವ ರಾಜತಾಂತ್ರಿಕ ಮಾತುಕತೆಗಳಿಗೆ ಅಡ್ಡಿಯಾಗುವ ಸಾಧ್ಯತೆಯಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಗಾಜಾ ಯುದ್ಧ, ಲೆಬನಾನ್ ಗಡಿಭಾಗದ ಘರ್ಷಣೆಗಳು ಹಾಗೂ ಇರಾನ್-ಇಸ್ರೇಲ್ ನಡುವಿನ ಉದ್ವಿಗ್ನತೆಗಳ ನಡುವೆ ಟ್ರಂಪ್ ಮತ್ತು ನೆತನ್ಯಾಹು ನಡುವಿನ ಈ ವರದಿಗೊಂಡ ಮಾತಿನ ಚಕಮಕಿ ಜಾಗತಿಕ ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. ಆದರೆ ಈ ದೂರವಾಣಿ ಸಂಭಾಷಣೆಯ ಕುರಿತು ಅಮೆರಿಕ ಅಥವಾ ಇಸ್ರೇಲ್ ಸರ್ಕಾರಗಳು ಅಧಿಕೃತವಾಗಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.