ದಾಂಡೇಲಿ, ಮೇ 2 : ಪತ್ನಿಯ ಅನೈತಿಕ ಸಂಬಂಧ ಹಾಗೂ ನಿರಂತರ ಮಾನಸಿಕ ಕಿರುಕುಳದಿಂದಾಗಿ ತೀವ್ರ ಖಿನ್ನತೆಗೆ ಒಳಗಾದ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯಲ್ಲಿ ಗುರುವಾರ ಬೆಳಕಿಗೆ ಬಂದಿದೆ.
ಆತ್ಮಹತ್ಯೆಗೆ ಶರಣಾದವರು ರಾಘವೇಂದ್ರ ವಾಡಕರ ಎಂದು ಗುರುತಿಸಲಾಗಿದೆ. ಅವರು ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಸ್ಥಳದಲ್ಲೇ ಡೆತ್ ನೋಟ್ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತ ರಾಘವೇಂದ್ರ ಕಳೆದ ಮೂರು ವರ್ಷಗಳಿಂದ ಮಲೇಷಿಯಾದಲ್ಲಿ ಉದ್ಯೋಗದಲ್ಲಿದ್ದರು. ಒಂದು ವಾರದ ಹಿಂದೆ ದಾಂಡೇಲಿಗೆ ಮರಳಿದ್ದ ಅವರು, ಕುಟುಂಬ ಜೀವನವನ್ನು ಪುನರಾರಂಭಿಸುವ ನಿರೀಕ್ಷೆಯಲ್ಲಿ ಇದ್ದರು ಎನ್ನಲಾಗಿದೆ. ಆದರೆ ಮನೆಗೆ ಮರಳುತ್ತಿದ್ದಂತೆಯೇ ಪತ್ನಿ ಮೇಘಾ ಇಬ್ಬರು ಮಕ್ಕಳೊಂದಿಗೆ ಧಾರವಾಡದಲ್ಲಿರುವ ತನ್ನ ತವರು ಮನೆಗೆ ತೆರಳಿದ್ದಳು.
ಪತ್ನಿಯನ್ನು ಮನೆಗೆ ಕರೆಸಿಕೊಳ್ಳಲು ರಾಘವೇಂದ್ರ ಹಲವಾರು ಬಾರಿ ಮನವಿ ಮಾಡಿದರೂ, ಮೇಘಾ ಬರಲು ನಿರಾಕರಿಸಿದ್ದಳು. ತನ್ನೊಂದಿಗೆ ಸಂಸಾರ ನಡೆಸಲು ಆಸಕ್ತಿ ಇಲ್ಲ ಎಂದು ಹೇಳಿದ್ದಲ್ಲದೆ, ಅವಮಾನಕಾರಿ ಮಾತುಗಳನ್ನೂ ಆಡಿದ್ದಳು ಎಂದು ತಿಳಿದುಬಂದಿದೆ.
ಇದೇ ವೇಳೆ ಮೇಘಾ ತನ್ನ ಅನೈತಿಕ ಸಂಬಂಧವನ್ನು ಗಂಡನ ಎದುರೇ ಬಹಿರಂಗಪಡಿಸಿದ್ದಲ್ಲದೆ, ಬೇರೊಬ್ಬ ವ್ಯಕ್ತಿಯೊಂದಿಗೆ ಇರುವ ತನ್ನ ಫೋಟೋಗಳನ್ನು ಮೊಬೈಲನಲ್ಲಿ ಹಂಚಿಕೊಂಡಿದ್ದಳು. ಇದರಿಂದ ತೀವ್ರ ಆಘಾತಗೊಂಡ ರಾಘವೇಂದ್ರ ಮಾನಸಿಕವಾಗಿ ಕುಗ್ಗಿದ್ದರು.
ಮಾನಸಿಕವಾಗಿ ನೊಂದ ರಾಘವೇಂದ್ರ ಒಂದು ಹಂತದಲ್ಲಿ ತಮ್ಮ ಕೈಯನ್ನು ತಾವೇ ಕೊಯ್ದುಕೊಂಡು ಅದರ ಚಿತ್ರವನ್ನು ಪತ್ನಿಗೆ ಕಳುಹಿಸಿದ್ದರೂ, ಅದಕ್ಕೂ ಸ್ಪಂದನೆ ದೊರಕಲಿಲ್ಲ. ಬದಲಿಗೆ ನೀನು ಸತ್ತರೂ ನನಗೆ ಯಾವುದೇ ತೊಂದರೆಯಿಲ್ಲ ಎಂದು ಮೇಘಾ ಪ್ರತಿಕ್ರಿಯಿಸಿದ್ದಳು ಎಂದು ಮೂಲಗಳು ತಿಳಿಸಿವೆ.
ಈ ಎಲ್ಲ ಬೆಳವಣಿಗೆಗಳಿಂದ ಸಂಪೂರ್ಣವಾಗಿ ನೊಂದ ರಾಘವೇಂದ್ರ ಕೊನೆಗೆ ಆತ್ಮಹತ್ಯೆಗೆ ಶರಣಾಗಿದ್ದು, ಈ ಘಟನೆ ಕುಟುಂಬ ಸದಸ್ಯರು ಹಾಗೂ ಸ್ಥಳೀಯರಲ್ಲಿ ಆಘಾತ ಉಂಟುಮಾಡಿದೆ. ಪ್ರಕರಣ ಸಂಬಂಧ ದಾಂಡೇಲಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.