ಹೊಸದಿಲ್ಲಿ, ಎ.30 : ನಟಿ ಕರಿಷ್ಮಾ ಕಪೂರ್ ಅವರ ಮಕ್ಕಳಾದ ಕಿಯಾನ್ ಮತ್ತು ಸಮೈರಾಗೆ ದಿಲ್ಲಿ ಹೈಕೋರ್ಟ ಮಹತ್ವದ ಮಧ್ಯಂತರ ಪರಿಹಾರ ನೀಡಿದ್ದು, ದಿವಂಗತ ಉದ್ಯಮಿ ಸಂಜಯ್ ಕಪೂರ್ ಅವರ ಬ್ಯಾಂಕ್ ಖಾತೆಗಳು ಹಾಗೂ ವಿದೇಶಗಳಲ್ಲಿ ಹೊಂದಿರುವ ಕ್ರಿಪ್ಟೋ ಸಂಪತ್ತನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಆದೇಶಿಸಿದೆ.
ಎಸ್ಟೇಟ್ ಸಂಬಂಧಿತ ವಿವಾದದಲ್ಲಿ ಮಧ್ಯಂತರ ಪರಿಹಾರ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಪರಿಗಣಿಸಿದ ನ್ಯಾಯಾಲಯ, ಆಸ್ತಿಗಳನ್ನು ಸಂರಕ್ಷಿಸಲು ಸೂಚಿಸಿದೆ. ಜೊತೆಗೆ ಆಸ್ತಿಗಳನ್ನು ಮಾರಾಟ ಮಾಡಬಾರದು, ಹಂಚಿಕೆ ಮಾಡಬಾರದು ಅಥವಾ ವರ್ಗಾವಣೆ ಮಾಡಬಾರದು ಎಂದು ತಡೆಯಾಜ್ಞೆ ನೀಡಿದೆ.
ಕಳೆದ ವರ್ಷ ಜೂನ್‌ನಲ್ಲಿ ಲಂಡನ್‌ನಲ್ಲಿ ನಿಧನರಾದ ಸಂಜಯ್ ಕಪೂರ್ ಸುಮಾರು 30,000 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಬಿಟ್ಟುಹೋಗಿದ್ದಾರೆ. ಅವರ ಮೂರನೇ ಪತ್ನಿ ಪ್ರಿಯಾ ಸಚ್‌ದೇವ ಕಪೂರ್ ಹಾಗೂ ಕರಿಷ್ಮಾ ಕಪೂರ್ ಅವರ ಮಕ್ಕಳ ನಡುವೆ ಆಸ್ತಿ ಹಕ್ಕಿನ ವಿಚಾರದಲ್ಲಿ ತೀವ್ರ ವಿವಾದ ಉಂಟಾಗಿದೆ.
ಕಿಯಾನ್ ಮತ್ತು ಸಮೈರಾ, ಪ್ರಿಯಾ ಕಪೂರ್ ಅವರು ವಿಲ್ ನಕಲಿ ಮಾಡಿದ್ದಾರೆ ಹಾಗೂ ಆಸ್ತಿಗಳ ಸಂಪೂರ್ಣ ವಿವರವನ್ನು ಬಹಿರಂಗಪಡಿಸಿಲ್ಲ ಎಂದು ಆರೋಪಿಸಿದ್ದಾರೆ. ದುಬಾರಿ ಪೋಲೋ ಕುದುರೆಗಳು ಹಾಗೂ ಐಷಾರಾಮಿ ಕೈಗಡಿಯಾರಗಳನ್ನು ಆಸ್ತಿ ಪಟ್ಟಿಯಿಂದ ಹೊರಗಿಡಲಾಗಿದೆ ಎಂಬ ಆರೋಪವನ್ನೂ ಮಾಡಿದ್ದಾರೆ.
ಪ್ರಾಥಮಿಕವಾಗಿ ಸಲ್ಲಿಸಿರುವ ದಾಖಲೆಗಳನ್ನು ಗಮನಿಸಿದ ನ್ಯಾಯಾಲಯ, ವಿಲ್‌ನ ಸತ್ಯಾಸತ್ಯತೆ ಬಗ್ಗೆ ಇರುವ ಅನುಮಾನಗಳನ್ನು ನಿವಾರಿಸುವ ಹೊಣೆಗಾರಿಕೆ ಪ್ರಿಯಾ ಕಪೂರ್ ಮೇಲಿದೆ ಎಂದು ಸ್ಪಷ್ಟಪಡಿಸಿದೆ.