ಬೆಳಗಾವಿ, ನ. 17: ಉಪವಿಭಾಗಾಧಿಕಾರಿ ಕೋರ್ಟಿಗೆ ಪ್ರಕರಣಗಳನ್ನು ವರ್ಗಾಯಿಸಿಕೊಡಲು ಸಾರ್ವಜನಿಕರೊಬ್ಬರಿಂದ ₹30 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆರೋಪದಡಿ ಬೆಳಗಾವಿ ಉಪವಿಭಾಗಾಧಿಕಾರಿ ಕಚೇರಿಯ ದ್ವಿತೀಯ ದರ್ಜೆ ಸಹಾಯಕ ಪದ್ಮಾಕರ ಪಾಟೀಲ ಅವರನ್ನು ₹2 ಸಾವಿರ ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ಎಸಿ ಕೋರ್ಟಿಗೆ ಸಂಬಂಧಿಸಿದ ಪ್ರಕರಣಗಳನ್ನು ವರ್ಗಾಯಿಸುವ ಕೆಲಸ ಮಾಡಿಕೊಡಲು ಪದ್ಮಾಕರ ಪಾಟೀಲ ₹30 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಈ ಕುರಿತು ಶುಭಂ ಅಪ್ಪಾರಾವ್ ಎಂಬುವವರು ಲೋಕಾಯುಕ್ತ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದರು.
ದೂರುದಾರರ ಕೆಲಸ ಮಾಡಿಕೊಡಲು ಮೊದಲ ಕಂತಾಗಿ ₹2 ಸಾವಿರ ನೀಡುವಂತೆ ಪದ್ಮಾಕರ ಪಾಟೀಲ ಸೂಚಿಸಿದ್ದರು. ಸರಕಾರಿ ಕಚೇರಿಯಲ್ಲಿ ಕೆಲಸ ಮಾಡಿಕೊಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದರಿಂದ ಬೇಸತ್ತ ದೂರುದಾರರು ಲೋಕಾಯುಕ್ತ ಪೊಲೀಸರ ಮೊರೆ ಹೋಗಿದ್ದರು.
ದೂರು ಸ್ವೀಕರಿಸಿದ ಲೋಕಾಯುಕ್ತ ಅಧಿಕಾರಿಗಳು ಆರೋಪಿಯನ್ನು ಬಲೆಗೆ ಬೀಳಿಸಲು ಕಾರ್ಯಾಚರಣೆ ರೂಪಿಸಿದ್ದರು. ಅದರಂತೆ ಬೆಳಗಾವಿಯ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಬಲೆ ಬೀಸಿದ ಅಧಿಕಾರಿಗಳು, ದೂರುದಾರರಿಂದ ₹2 ಸಾವಿರ ಲಂಚದ ಹಣ ಸ್ವೀಕರಿಸುತ್ತಿದ್ದಾಗ ಪದ್ಮಾಕರ ಪಾಟೀಲ ಅವರನ್ನು ಹಿಡಿದಿದ್ದಾರೆ. ಲಂಚದ ಹಣದೊಂದಿಗೆ ಸಿಕ್ಕಿಬಿದ್ದ ಸಿಬ್ಬಂದಿಯನ್ನು ವಶಕ್ಕೆ ಪಡೆದ ಲೋಕಾಯುಕ್ತ ಪೊಲೀಸರು ಮುಂದಿನ ಕಾನೂನು ಪ್ರಕ್ರಿಯೆ ಕೈಗೊಂಡಿದ್ದಾರೆ.