ಬೆಂಗಳೂರು, ಅ. 22 (ಸಮದರ್ಶಿ ಸುದ್ದಿ): ಕರ್ನಾಟಕದಲ್ಲಿ ತೀವ್ರ ಬರದಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ನೆರವಾಗಲು ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಡಿ 20,585.73 ಕೋಟಿ ರೂ. ತುರ್ತಾಗಿ ಬಿಡುಗಡೆ ಮಾಡುವಂತೆ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ ಶಾ ಹಾಗೂ ಕೃಷಿ ಸಚಿವ ಶಿವರಾಜಸಿಂಗ ಚೌಹಾಣ ಅವರಿಗೆ ಪ್ರತ್ಯೇಕ ಪತ್ರ ಬರೆದಿರುವ ಅವರು, ರಾಜ್ಯದಲ್ಲಿ ಮುಂಗಾರು ಮಳೆ ಕೊರತೆಯಿಂದ ಉಂಟಾಗಿರುವ ಬೆಳೆ ಹಾನಿ ಹಾಗೂ ರೈತರ ಆರ್ಥಿಕ ಸಂಕಷ್ಟವನ್ನು ವಿವರಿಸಿದ್ದಾರೆ.
2026ರ ಮುಂಗಾರು ಅವಧಿಯಲ್ಲಿ ವಾಡಿಕೆಯ 852 ಮಿ.ಮೀ. ಮಳೆಯ ಬದಲು ಕೇವಲ 551 ಮಿ.ಮೀ. ಮಳೆಯಾಗಿದ್ದು, ಶೇ 35ರಷ್ಟು ಕೊರತೆ ದಾಖಲಾಗಿದೆ. ಇದು 1956ರಿಂದೀಚೆಗೆ ಎರಡನೇ ಅತ್ಯಂತ ಕಡಿಮೆ ಮುಂಗಾರು ಮಳೆಯಾಗಿದೆ ಎಂದು ತಿಳಿಸಿದ್ದಾರೆ.
ರಾಜ್ಯದ 226 ತಾಲೂಕುಗಳನ್ನು ಬರಪೀಡಿತವೆಂದು ಘೋಷಿಸಲಾಗಿದ್ದು, 57.93 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಇದರಲ್ಲಿ 53.92 ಲಕ್ಷ ಹೆಕ್ಟೇರ್ ಕೃಷಿ ಹಾಗೂ 4.01 ಲಕ್ಷ ಹೆಕ್ಟೇರ್ ತೋಟಗಾರಿಕಾ ಬೆಳೆಗಳು ಸೇರಿವೆ. ಒಟ್ಟು 62,481.88 ಕೋಟಿ ರೂ. ಆರ್ಥಿಕ ನಷ್ಟ ಸಂಭವಿಸಿದೆ ಎಂದು ವಿವರಿಸಿದ್ದಾರೆ.
ಕೇಂದ್ರಕ್ಕೆ ಸಲ್ಲಿಸಿರುವ ಮನವಿಯಲ್ಲಿ ಬೆಳೆ ಹಾನಿ ಪರಿಹಾರಕ್ಕಾಗಿ 6,128.70 ಕೋಟಿ ರೂ., ಸಣ್ಣ ಮತ್ತು ಅತಿಸಣ್ಣ ರೈತರ ಜೀವನೋಪಾಯಕ್ಕೆ 12,146.99 ಕೋಟಿ ರೂ., ಕುಡಿಯುವ ನೀರಿಗೆ 1,727 ಕೋಟಿ ರೂ. ಹಾಗೂ ಜಾನುವಾರುಗಳ ಸಂರಕ್ಷಣೆಗೆ 583.04 ಕೋಟಿ ರೂ. ನೆರವು ಕೋರಲಾಗಿದೆ.
ಬರದಿಂದ ಆದಾಯ ಕಳೆದುಕೊಂಡಿರುವ 61.91 ಲಕ್ಷ ರೈತರಿಗೆ ದಿನಕ್ಕೆ 327 ರೂ.ನಂತೆ 60 ದಿನಗಳ ಜೀವನೋಪಾಯ ಪರಿಹಾರ ನೀಡಲು ಉದ್ದೇಶಿಸಲಾಗಿದೆ. ಜಾನುವಾರುಗಳಿಗಾಗಿ 476 ಗೋಶಾಲೆಗಳು ಹಾಗೂ 583 ಮೇವು ಬ್ಯಾಂಕ್‌ಗಳನ್ನು ಸ್ಥಾಪಿಸಲು ನೆರವು ಅಗತ್ಯವಿದೆ ಎಂದು ತಿಳಿಸಿದ್ದಾರೆ.
ಬೆಳೆ ಪರಿಹಾರ ನಿರ್ಧರಿಸಲು 2015–16ರ ಹಳೆಯ ಕೃಷಿ ಗಣತಿಯ ಅಂಕಿಅಂಶಗಳನ್ನು ಬಳಸುತ್ತಿರುವುದರಿಂದ ರಾಜ್ಯಕ್ಕೆ ಸುಮಾರು 1,669.50 ಕೋಟಿ ರೂ. ನೆರವು ಕಡಿಮೆಯಾಗುವ ಸಾಧ್ಯತೆಯಿದೆ. ಆದ್ದರಿಂದ ರಾಜ್ಯ ಸರ್ಕಾರದ ನವೀಕೃತ ‘ಫ್ರೂಟ್ಸ್’ ದತ್ತಾಂಶವನ್ನು ಪರಿಗಣಿಸುವಂತೆ ಮನವಿ ಮಾಡಿದ್ದಾರೆ.
ಬರಪೀಡಿತ ಪ್ರದೇಶಗಳ ಶಾಲಾ ಮಕ್ಕಳಿಗೆ ಬೇಸಿಗೆ ರಜೆಯಲ್ಲಿಯೂ ಪೌಷ್ಟಿಕ ಆಹಾರ ಒದಗಿಸಲು ಪಿಎಂ ಪೋಷಣ್ ಯೋಜನೆಯಡಿ 427.20 ಕೋಟಿ ರೂ. ಹಾಗೂ ದುರ್ಬಲ ವರ್ಗದವರಿಗೆ ಪೂರಕ ಪೌಷ್ಟಿಕಾಂಶಕ್ಕಾಗಿ 70.96 ಕೋಟಿ ರೂ. ಹೆಚ್ಚುವರಿ ನೆರವು ಕೋರಿದ್ದಾರೆ.
ಅಕ್ಟೋಬರ್ 3ರಿಂದ 6ರವರೆಗೆ ರಾಜ್ಯಕ್ಕೆ ಭೇಟಿ ನೀಡಿದ್ದ ಕೇಂದ್ರ ಅಧ್ಯಯನ ತಂಡದ ವರದಿಯನ್ನು ಉನ್ನತ ಮಟ್ಟದ ಸಮಿತಿಗೆ ತ್ವರಿತವಾಗಿ ಸಲ್ಲಿಸಿ, ಪರಿಹಾರ ಬಿಡುಗಡೆಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ರೈತರ ಬದುಕು ಮತ್ತು ಕೃಷಿ ಆಧಾರಿತ ಆರ್ಥಿಕತೆಯನ್ನು ರಕ್ಷಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ರಾಜಕೀಯ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ತಕ್ಷಣ ಆರ್ಥಿಕ ನೆರವು ನೀಡಬೇಕು ಎಂದು ಪರಮೇಶ್ವರ ಪತ್ರದಲ್ಲಿ ಒತ್ತಾಯಿಸಿದ್ದಾರೆ.