ಹೊಸದಿಲ್ಲಿ, ಜೂ. 9 : ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಬಳಿಕ ತೃಣಮೂಲ ಕಾಂಗ್ರೆಸ್ ಪಕ್ಷದೊಳಗಿನ ಆಂತರಿಕ ಬಿಕ್ಕಟ್ಟು ಮತ್ತಷ್ಟು ತೀವ್ರಗೊಂಡಿದ್ದು, ಪಕ್ಷದ ನಾಯಕತ್ವ ಮತ್ತು ಭಿನ್ನಮತೀಯ ಬಣದ ನಡುವಿನ ವಾಕ್ಸಮರ ಬಹಿರಂಗವಾಗಿ ಸ್ಫೋಟಗೊಂಡಿದೆ. ಪಕ್ಷದ ಭಿನ್ನಮತೀಯ ಬಣವನ್ನು ಗುರಿಯಾಗಿಸಿಕೊಂಡು ತೃಣಮೂಲ ಕಾಂಗ್ರೆಸ್ ಸಂಸದ ಕಲ್ಯಾಣ್ ಬ್ಯಾನರ್ಜಿ ತೀವ್ರ ವಾಗ್ದಾಳಿ ನಡೆಸಿದ್ದು, ಅವರನ್ನು ದೇಶದ್ರೋಹಿಗಳು ಎಂದು ಬಣ್ಣಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಕೋಲಿ ಘೋಷ್ ದಸ್ತಿದಾರ್ ನೇತೃತ್ವದ ಭಿನ್ನಮತೀಯ ಬಣ ಅಧಿಕಾರದ ಆಸೆಯಿಂದ ಹತಾಶಗೊಂಡಿದ್ದು, ಪಕ್ಷದ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರಿಗೆ ವಿಶ್ವಾಸ ದ್ರೋಹ ಎಸಗುತ್ತಿದೆ ಎಂದು ಆರೋಪಿಸಿದರು.
ಪಕ್ಷಾಂತರ ನಿಷೇಧ ಕಾಯ್ದೆಯ ಪರಿಣಾಮದಿಂದ ತಪ್ಪಿಸಿಕೊಳ್ಳಲು ಭಿನ್ನಮತೀಯರಿಗೆ ಹೆಚ್ಚಿನ ಸಂಖ್ಯಾಬಲದ ಅಗತ್ಯವಿದೆ ಎಂದು ಹೇಳಿದ ಅವರು, ಪಕ್ಷದ ವಿರುದ್ಧ ನಡೆಯುತ್ತಿರುವ ಬೆಳವಣಿಗೆಗಳ ಹಿಂದೆ ರಾಜಕೀಯ ಲೆಕ್ಕಾಚಾರ ಅಡಗಿದೆ ಎಂದು ಟೀಕಿಸಿದರು.
ಈ ವೇಳೆ ಬಿಜೆಪಿ ವಿರುದ್ಧವೂ ವಾಗ್ದಾಳಿ ನಡೆಸಿದ ಕಲ್ಯಾಣ್ ಬ್ಯಾನರ್ಜಿ, ತೃಣಮೂಲ ಕಾಂಗ್ರೆಸ್ ಅನ್ನು ದುರ್ಬಲಗೊಳಿಸಲು ಬಿಜೆಪಿ ನಿರಂತರ ಪ್ರಯತ್ನ ನಡೆಸುತ್ತಿದೆ ಎಂದು ಆರೋಪಿಸಿದರು. ನಿಮ್ಮ ಬಳಿ ಮುಖ್ಯಮಂತ್ರಿ ಹುದ್ದೆ, ಜಾರಿ ನಿರ್ದೇಶನಾಲಯ, ಸಿಬಿಐ ಸೇರಿದಂತೆ ಅಧಿಕಾರದ ಯಂತ್ರಾಂಗಗಳಿರಬಹುದು. ಆದರೆ ನಮ್ಮ ಬಳಿ ಜನರ ಬೆಂಬಲ, ಪಕ್ಷದ ಕಾರ್ಯಕರ್ತರು ಮತ್ತು ಪಶ್ಚಿಮ ಬಂಗಾಳದ ಜನರ ವಿಶ್ವಾಸವಿದೆ ಎಂದು ಅವರು ಹೇಳಿದರು.
ಅದೇ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದ ತೃಣಮೂಲ ಕಾಂಗ್ರೆಸ್ ಸಂಸದ ಕೀರ್ತಿ ಆಝಾದ್ ಕೂಡ ಭಿನ್ನಮತೀಯರ ವಿರುದ್ಧ ಕಿಡಿಕಾರಿದರು. ರಾಜಕೀಯ ನೈತಿಕತೆ ಬಗ್ಗೆ ಪ್ರಶ್ನೆ ಎತ್ತಿದ ಅವರು, ಪಕ್ಷದ ಹೊರಗೆ ಹೋಗಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿಕೊಳ್ಳಲಿ. ಜನರ ಬಳಿಗೆ ಹೋಗಿ ಹೊಸ ಜನಾದೇಶ ಪಡೆಯಲಿ ಎಂದು ಸವಾಲು ಹಾಕಿದರು.
ಇದಕ್ಕೆ ತಿರುಗೇಟು ನೀಡಿದ ಕಾಕೋಲಿ ಘೋಷ್ ದಸ್ತಿದಾರ, ಪ್ರತ್ಯೇಕ ಪತ್ರಿಕಾಗೋಷ್ಠಿಯಲ್ಲಿ ತಮ್ಮ ನಿಲುವನ್ನು ಸಮರ್ಥಿಸಿಕೊಂಡರು. ನನ್ನ ಕುತ್ತಿಗೆ ಕತ್ತರಿಸಿದರೂ ನಾನು ತಲೆಬಾಗುವುದಿಲ್ಲ ಎಂದು ಅವರು ಖಡಕ್ ಸಂದೇಶ ನೀಡಿದರು.
ಕಳೆದ ಹಲವು ದಶಕಗಳಿಂದ ರಾಜಕೀಯ ಹೋರಾಟ ನಡೆಸುತ್ತಿದ್ದೇನೆ. 2011ರಲ್ಲಿ ಮಮತಾ ಬ್ಯಾನರ್ಜಿ ಮುಖ್ಯಮಂತ್ರಿಯಾದ ಬಳಿಕ ರಾಜಕೀಯಕ್ಕೆ ಬಂದವಳಲ್ಲ. ಕಳೆದ 40 ವರ್ಷಗಳಿಂದ ಸಾರ್ವಜನಿಕ ಬದುಕಿನಲ್ಲಿ ಹೋರಾಟ ನಡೆಸಿದ್ದೇನೆ ಎಂದು ಅವರು ಹೇಳಿದರು.
ತಮ್ಮ ವಿರುದ್ಧ ಕೇಳಿಬರುತ್ತಿರುವ ಟೀಕೆಗಳು ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಸ್ಪಷ್ಟಪಡಿಸಿದ ಕಾಕೋಲಿ, ತಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ತಿಳಿಸಿದ್ದಾರೆ.
ಮಮತಾ ಬ್ಯಾನರ್ಜಿ ಬಣ ಮತ್ತು ಕಾಕೋಲಿ ಘೋಷ್ ದಸ್ತಿದಾರ್ ನೇತೃತ್ವದ ಭಿನ್ನಮತೀಯ ಬಣದ ನಡುವಿನ ಈ ಬಹಿರಂಗ ವಾಕ್ಸಮರದಿಂದ ತೃಣಮೂಲ ಕಾಂಗ್ರೆಸ್ ಪಕ್ಷದೊಳಗಿನ ಬಿಕ್ಕಟ್ಟು ಮತ್ತಷ್ಟು ಉಲ್ಬಣಗೊಂಡಿದೆ. ಎರಡೂ ಬಣಗಳು ತಮ್ಮ ನಿಲುವುಗಳಲ್ಲಿ ರಾಜಿ ಮಾಡಿಕೊಳ್ಳುವ ಲಕ್ಷಣಗಳು ಕಾಣಿಸದಿರುವುದರಿಂದ, ಮುಂದಿನ ದಿನಗಳಲ್ಲಿ ಪಕ್ಷದೊಳಗಿನ ರಾಜಕೀಯ ಸಂಘರ್ಷ ಇನ್ನಷ್ಟು ತೀವ್ರಗೊಳ್ಳುವ ಸಾಧ್ಯತೆಗಳು ಕಂಡುಬರುತ್ತಿವೆ.