LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureEditorialBeautyRecipes

ಕಚೇರಿ ಆವರಣದಲ್ಲೇ ಜಾನುವಾರುಗಳೊಂದಿಗೆ ಅಡುಗೆ ಮಾಡಿ ಧರಣಿ

ಬೆಳಗಾವಿ, ಜುಲೈ 16: ಹಿಡ್ಕಲ್ ಜಲಾಶಯ ನಿರ್ಮಾಣಕ್ಕಾಗಿ ಭೂಸ್ವಾಧೀನಪಡಿಸಿಕೊಂಡ ಜಮೀನುಗಳಿಗೆ ಬಾಕಿ ಉಳಿದಿರುವ ಪರಿಹಾರ ನೀಡುವಂತೆ ಆಗ್ರಹಿಸಿ ಹಿಡ್ಕಲ್ ಜಲಾಶಯ ಸಂತ್ರಸ್ತರು ನಡೆಸುತ್ತಿರುವ ಅಹೋರಾತ್ರಿ ಧರಣಿ ಗುರುವಾರ ಮೂರನೇ ದಿನಕ್ಕೆ ಪ್ರವೇಶಿಸಿತು. ಬೆಳಗಾವಿಯ ಕರ್ನಾಟಕ ನೀರಾವರಿ ನಿಗಮದ ಉತ್ತರ ವಲಯ ಕಚೇರಿ ಆವರಣದಲ್ಲಿ ಸಂತ್ರಸ್ತರು ಹೋರಾಟ ಮುಂದುವರಿಸಿದ್ದು, ಕಚೇರಿ ಆವರಣದಲ್ಲೇ ಅಡುಗೆ ಮಾಡಿಕೊಂಡು ಊಟ ಸಿದ್ಧಪಡಿಸಿ ಅಲ್ಲಿಯೇ ವಾಸ್ತವ್ಯ ಹೂಡಿದ್ದಾರೆ. ಕಚೇರಿ ಮುಂಭಾಗದಲ್ಲೇ ರೈತರು ತಮ್ಮ ಜಾನುವಾರುಗಳನ್ನು ಕಟ್ಟಿ ಮೇಯಿಸುತ್ತಿರುವ ದೃಶ್ಯ ಗಮನ ಸೆಳೆಯಿತು.

ಹುಕ್ಕೇರಿ ತಾಲೂಕಿನ ಮಾಸ್ತಿಹೊಳಿ, ಜಾರಕಿಹೊಳಿ, ಬೀರನಹಳ್ಳಿ, ಸುತಗಟ್ಟಿ, ಗುಡಗನಟ್ಟಿ ಸೇರಿದಂತೆ ಒಟ್ಟು 9 ಗ್ರಾಮಗಳು ಹಾಗೂ ಬೆಳಗಾವಿ ತಾಲೂಕಿನ ಒಂದು ಗ್ರಾಮದ ಸಂತ್ರಸ್ತರು ಧರಣಿಯಲ್ಲಿ ಭಾಗವಹಿಸಿದ್ದಾರೆ. ನೂರಾರು ರೈತರು ಹಾಗೂ ಕುಟುಂಬ ಸದಸ್ಯರು ಕಚೇರಿ ಆವರಣದಲ್ಲಿ ಸೇರಿ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಹಲವು ದಶಕಗಳ ಹಿಂದೆ ಜಲಾಶಯಕ್ಕಾಗಿ ಭೂಮಿ ಕಳೆದುಕೊಂಡಿದ್ದರೂ ಇನ್ನೂ ನ್ಯಾಯಯುತ ಪರಿಹಾರ ದೊರೆತಿಲ್ಲ ಎಂದು ಸಂತ್ರಸ್ತರು ಆರೋಪಿಸಿದರು.

394 ಎಕರೆ ಭೂಸ್ವಾಧೀನಕ್ಕೆ ಸಂಬಂಧಿಸಿದ ಪರಿಹಾರವನ್ನು ಸರ್ಕಾರ ಇದುವರೆಗೂ ಬಿಡುಗಡೆ ಮಾಡಿಲ್ಲ. ನ್ಯಾಯಾಲಯದ ಆದೇಶಗಳು, ಜನಪ್ರತಿನಿಧಿಗಳ ಭರವಸೆಗಳು ಹಾಗೂ ಅಧಿಕಾರಿಗಳೊಂದಿಗೆ ಹಲವು ಸುತ್ತಿನ ಸಭೆಗಳು ನಡೆದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಸರ್ಕಾರದ ಗಮನಕ್ಕೆ ಸಮಸ್ಯೆಯನ್ನು ತಂದಿದ್ದರೂ ಅಧಿಕಾರಿಗಳು ಉದ್ದೇಶಪೂರ್ವಕವಾಗಿ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಕಡತಗಳನ್ನು ಒಂದರಿಂದ ಮತ್ತೊಂದು ಕಚೇರಿಗೆ ವರ್ಗಾಯಿಸುತ್ತಾ ಕಾಲಹರಣ ಮಾಡಲಾಗುತ್ತಿದೆ ಎಂದು ಪ್ರತಿಭಟನಾಕಾರರು ದೂರಿದರು.

ಹೋರಾಟಕ್ಕೆ ಬಂದಿರುವ ರೈತರು ಕಚೇರಿ ಆವರಣವನ್ನೇ ತಾತ್ಕಾಲಿಕ ಶಿಬಿರವನ್ನಾಗಿ ಮಾಡಿಕೊಂಡಿದ್ದಾರೆ. ಅಲ್ಲಿಯೇ ಅಡುಗೆ ಮಾಡಿಕೊಂಡು ಊಟ ಸಿದ್ಧಪಡಿಸುತ್ತಿದ್ದು, ರಾತ್ರಿ ವೇಳೆ ಕಚೇರಿ ಆವರಣದಲ್ಲೇ ಮಲಗಿ ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ಮಹಿಳೆಯರು, ವೃದ್ಧರು ಹಾಗೂ ಯುವಕರೂ ಪ್ರತಿಭಟನೆಯಲ್ಲಿ ಭಾಗವಹಿಸಿದ್ದು, ತಮ್ಮ ಬೇಡಿಕೆ ಈಡೇರುವವರೆಗೆ ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಸಂಪೂರ್ಣ ಪರಿಹಾರ ಬಿಡುಗಡೆಯಾಗುವವರೆಗೆ ಕರ್ನಾಟಕ ನೀರಾವರಿ ನಿಗಮದ ಕಚೇರಿ ಆವರಣ ಬಿಟ್ಟು ಕದಲುವುದಿಲ್ಲ ಎಂದು ಪಟ್ಟು ಹಿಡಿದಿರುವ ಸಂತ್ರಸ್ತರು, ಸರ್ಕಾರದ ನಿರ್ಲಕ್ಷ್ಯ ಇದೇ ರೀತಿ ಮುಂದುವರಿದರೆ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವ ಎಚ್ಚರಿಕೆ ನೀಡಿದರು. ಅಗತ್ಯವಿದ್ದರೆ ಹತ್ತು ಗ್ರಾಮಗಳ ಜನರು ರಸ್ತೆಗಿಳಿದು ಉಗ್ರ ಹೋರಾಟ ನಡೆಸಲಿದ್ದು, ಯಾರೇ ಮೃತಪಟ್ಟರೂ ಶವವಿಟ್ಟು ಪ್ರತಿಭಟನೆ ನಡೆಸುವ ಅನಿವಾರ್ಯತೆ ಎದುರಾಗಲಿದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

Author
A B Dharwadkar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST