ಹೊಸದಿಲ್ಲಿ, ಜೂನ್ 13 : ನೀಟ್ ಪ್ರಶ್ನೆಪತ್ರಿಕೆ ಸೋರಿಕೆ, ಪರೀಕ್ಷಾ ಅಕ್ರಮಗಳು ಹಾಗೂ ನಿರುದ್ಯೋಗದ ವಿರುದ್ಧ ಕಾಂಗ್ರೆಸ್ ರಾಷ್ಟ್ರವ್ಯಾಪಿ ಅಭಿಯಾನ ಆರಂಭಿಸಲು ತೀರ್ಮಾನಿಸಿದ್ದು, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಮುಂದಿನ ಒಂದು ತಿಂಗಳ ಅವಧಿಯಲ್ಲಿ ನಾಲ್ಕು ವಿದ್ಯಾರ್ಥಿ ಸಮಾವೇಶಗಳನ್ನು ಆಯೋಜಿಸಲಿದೆ.
ಮೊದಲ ವಿದ್ಯಾರ್ಥಿ ಸಮಾವೇಶವು ಜೂನ್ 17ರಂದು ದೇಶದ ಪ್ರವೇಶ ಪರೀಕ್ಷಾ ತರಬೇತಿ ಕೇಂದ್ರಗಳ ಪ್ರಮುಖ ತಾಣವಾದ ರಾಜಸ್ಥಾನದ ಕೋಟಾದಲ್ಲಿ ನಡೆಯಲಿದೆ. ಜೂನ್ 11ರಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಅಭಿಯಾನದ ಮೂಲಕ ನೀಟ್ ಪರೀಕ್ಷೆಯ ವಿಕೇಂದ್ರೀಕರಣ, ಪರೀಕ್ಷಾ ಶುಲ್ಕ ರದ್ದು, ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳಲ್ಲಿ ಭಾಗಿಯಾಗಿರುವವರ ವಿರುದ್ಧ ಕಠಿಣ ಕ್ರಮ ಹಾಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ ರಾಜೀನಾಮೆ ಸೇರಿದಂತೆ ಹಲವು ಬೇಡಿಕೆಗಳನ್ನು ಸರ್ಕಾರದ ಮುಂದಿಡಲು ಕಾಂಗ್ರೆಸ್ ಮುಂದಾಗಿದೆ.
ಈ ಕುರಿತು ಮಾಹಿತಿ ನೀಡಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ, ಪ್ರಶ್ನೆಪತ್ರಿಕೆ ಸೋರಿಕೆ, ಪರೀಕ್ಷಾ ಅಕ್ರಮಗಳು, ನಿರುದ್ಯೋಗ ಹಾಗೂ ಮೋದಿ ಸರ್ಕಾರದಿಂದ ಯುವಕರಿಗೆ ಆಗುತ್ತಿರುವ ವ್ಯವಸ್ಥಿತ ದ್ರೋಹದ ವಿರುದ್ಧ ಈ ಅಭಿಯಾನ ಕೇಂದ್ರೀಕೃತವಾಗಲಿದೆ ಎಂದು ಹೇಳಿದರು.
ಪ್ರಶ್ನೆಪತ್ರಿಕೆ ಸೋರಿಕೆ, ಹೆಚ್ಚುತ್ತಿರುವ ಪರೀಕ್ಷಾ ವೆಚ್ಚ ಹಾಗೂ ಪಾರದರ್ಶಕ ನೇಮಕಾತಿ ಮತ್ತು ಶಿಕ್ಷಣ ವ್ಯವಸ್ಥೆ ಕಲ್ಪಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂಬುದರ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಅಭಿಯಾನ ಮಾಡಲಿದೆ ಎಂದು ಅವರು ತಿಳಿಸಿದರು. ಅಭಿಯಾನದ ಭಾಗವಾಗಿ ಎನ್‌ಎಸ್‌ಯುಐ, ಯುವ ಕಾಂಗ್ರೆಸ್ ಹಾಗೂ ರಾಜ್ಯ, ಜಿಲ್ಲಾ ಮತ್ತು ಸ್ಥಳೀಯ ಘಟಕಗಳ ಮೂಲಕ ವಿದ್ಯಾರ್ಥಿಗಳನ್ನು ಸಂಘಟಿಸಲು ರಾಹುಲ್ ಗಾಂಧಿ ಕರೆ ನೀಡಿದ್ದಾರೆ ಎಂದು ಹೇಳಿದರು.
ಜುಲೈ 10ರಂದು ಅಲಹಾಬಾದ, ಜುಲೈ 11ರಂದು ಪಾಟ್ನಾ ಹಾಗೂ ಜುಲೈ 14ರಂದು ಹೊಸದಿಲ್ಲಿಯಲ್ಲಿ ವಿದ್ಯಾರ್ಥಿ ಸಮಾವೇಶಗಳು ನಡೆಯಲಿವೆ.