ಹೊಸದಿಲ್ಲಿ, ಜುಲೈ 20: ಭಾರೀ ಪೊಲೀಸ್ ಭದ್ರತೆ ಮತ್ತು ನಿಷೇಧಾಜ್ಞೆಗಳ ನಡುವೆಯೇ ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ) ಕರೆ ನೀಡಿದ್ದ 'ಚಲೋ ಸಂಸದ್' ಪ್ರತಿಭಟನೆ ಸೋಮವಾರ ಜಂತರ್ ಮಂತರ್‌ನಲ್ಲಿ ಆರಂಭಗೊಂಡು ಉದ್ವಿಗ್ನ ಸ್ವರೂಪ ಪಡೆಯಿತು. ಸಾಗರೋಪಾದಿಯಲ್ಲಿ ಸಾವಿರಾರು ಪ್ರತಿಭಟನಾಕಾರರು ಸಂಸತ್ ಭವನದತ್ತ ಮೆರವಣಿಗೆ ನಡೆಸಲು ಮುಂದಾದ ವೇಳೆ ಪೊಲೀಸರು ಅವರನ್ನು ತಡೆಯಲು ಲಾಠಿ ಚಾರ್ಜ್ ನಡೆಸಿ, ಅಶ್ರುವಾಯು ಶೆಲ್‌ಗಳನ್ನು ಪ್ರಯೋಗಿಸಿದ್ದಾರೆ ಎಂದು ವರದಿಯಾಗಿದೆ.
ತಮಗಾಗುತ್ತಿರುವ ಅನ್ಯಾಯಕ್ಕೆ ಹೊಣೆಗಾರಿಕೆ ನಿಗದಿಪಡಿಸಬೇಕೆಂಬ ವಿದ್ಯಾರ್ಥಿಗಳ ಬೇಡಿಕೆ ದಿನೇ ದಿನೇ ಹೆಚ್ಚಿನ ಜನಬೆಂಬಲ ಪಡೆಯುತ್ತಿದ್ದು ಸಂಸತ್ ನತ್ತ ತೆರಳಲು ಯತ್ನಿಸಿದ ವಿದ್ಯಾರ್ಥಿಗಳು ಮತ್ತು ಯುವಕರನ್ನು ದೆಹಲಿ ಪೋಲೀಸರು ಮನಬಂದಂತೆ ಥಳಿಸುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಸಂಸತ್ತಿನ ಮಳೆಗಾಲದ ಅಧಿವೇಶನದ ಮೊದಲ ದಿನವೇ ಪ್ರತಿಭಟನೆ ನಡೆದಿರುವ ಹಿನ್ನೆಲೆಯಲ್ಲಿ ಹೊಸದಿಲ್ಲಿಯ ಕೇಂದ್ರ ಭಾಗದಲ್ಲಿ ಭದ್ರತೆಯನ್ನು ಬಹಳಷ್ಟು ಬಿಗಿಗೊಳಿಸಲಾಗಿತ್ತು. ಜಂತರ್ ಮಂತರ್‌ನಿಂದ ಸಂಸತ್ತಿನತ್ತ ಮೆರವಣಿಗೆ ನಡೆಸಲು ದೆಹಲಿ ಪೊಲೀಸರು ಅನುಮತಿ ನಿರಾಕರಿಸಿದ್ದರೂ ಪ್ರತಿಭಟನಾಕಾರರು ಮುಂದುವರಿದ ಹಿನ್ನೆಲೆಯಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿತು.
ಸಾಮಾಜಿಕ ಹೋರಾಟಗಾರ ಸೋನಮ್ ವಾಂಗ್ಚುಕ ಅವರು ಸಫ್ದರಜಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಡುವೆಯೇ ಆಜಾದ್ ಸಮಾಜ ಪಕ್ಷ (ಕಾನ್ಶಿರಾಮ್) ಮುಖ್ಯಸ್ಥ ಚಂದ್ರಶೇಖರ ಆಜಾದ್, ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ಹಾಗೂ ನಟರಾದ ಪ್ರಕಾಶ ರಾಜ್ ಮತ್ತು ಶಬಾನಾ ಅಜ್ಮಿ ಸೇರಿದಂತೆ ಹಲವು ಗಣ್ಯರು ಪ್ರತಿಭಟನೆಯಲ್ಲಿ ಪಾಲ್ಗೊಂಡು ಬೆಂಬಲ ಸೂಚಿಸಿದರು.
ಪ್ರತಿಭಟನಾಕಾರರು ಸಂಸತ್ತಿನತ್ತ ಸಾಗುತ್ತಿದ್ದ ವೇಳೆ ಕೆಲವು ಕಡೆಗಳಲ್ಲಿ ಬ್ಯಾರಿಕೇಡ್‌ಗಳನ್ನು ಮುರಿಯಲು ಯತ್ನಿಸಿದರು. ಕೆಲವರು ಕಲ್ಲು ತೂರಾಟ ನಡೆಸಿದ್ದಾರೆ ಎಂದು ಪೊಲೀಸರು ಆರೋಪಿಸಿದ್ದು, ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಬಲಪ್ರಯೋಗ ಮಾಡಬೇಕಾಯಿತು ಎಂದು ತಿಳಿಸಿದ್ದಾರೆ. ಮತ್ತೊಂದೆಡೆ, ಪ್ರತಿಭಟನಾಕಾರರು ಯಾವುದೇ ಪ್ರಚೋದನೆ ಇಲ್ಲದೆ ಪೊಲೀಸರು ಲಾಠಿ ಚಾರ್ಜ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.
ಪಾರ್ಲಿಮೆಂಟ್ ಸ್ಟ್ರೀಟ್, ಪ್ರೆಸ್ ಕ್ಲಬ್, ಶಾಸ್ತ್ರಿ ಭವನ ಹಾಗೂ ಕಾನ್ಸ್ಟಿಟ್ಯೂಷನ್ ಕ್ಲಬ್ ಸುತ್ತಮುತ್ತ ಭದ್ರತಾ ಪಡೆಗಳು ಪ್ರತಿಭಟನಾಕಾರರನ್ನು ಚದುರಿಸಲು ಅಶ್ರುವಾಯು ಶೆಲ್‌ಗಳನ್ನು ಸಿಡಿಸಿದವು. ಘಟನೆಯಲ್ಲಿ ಬಹಳಷ್ಟು ಪ್ರತಿಭಟನಾಕಾರರಿಗೆ ಗಾಯಗಳಾಗಿವೆ ಎಂದು ಮೂಲಗಳು ತಿಳಿಸಿವೆ.
ಸಂಸತ್ ಭವನದ ಸುತ್ತಲಿನ ಎಲ್ಲಾ ಪ್ರಮುಖ ಪ್ರವೇಶ ದ್ವಾರಗಳನ್ನು ಮುಚ್ಚಿ ಭದ್ರತೆಯನ್ನು ಇನ್ನಷ್ಟು ಬಿಗಿಗೊಳಿಸಲಾಗಿತ್ತು. ಭಾರತೀಯ ರಿಸರ್ವ್ ಬ್ಯಾಂಕ್ ಕಚೇರಿ ಸಮೀಪ ಕನಿಷ್ಠ ಏಳು ಮಂದಿ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ.
ಪ್ರತಿಭಟನೆಯ ಹಿನ್ನೆಲೆಯಲ್ಲಿ ಹೊಸದಿಲ್ಲಿಯ ಹಲವು ಪ್ರದೇಶಗಳಲ್ಲಿ ಸಂಚಾರ ನಿರ್ಬಂಧ ವಿಧಿಸಲಾಗಿದ್ದು, ಭದ್ರತಾ ಪಡೆಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸಲಾಗಿದೆ. ಪರಿಸ್ಥಿತಿಯ ಮೇಲೆ ಆಡಳಿತ ನಿರಂತರ ನಿಗಾ ವಹಿಸಿದ್ದು, ಸಂಸತ್ ಭವನ ಹಾಗೂ ಸುತ್ತಮುತ್ತಲಿನ ಪ್ರದೇಶವನ್ನು ಸಂಪೂರ್ಣ ಭದ್ರತಾ ವಲಯವಾಗಿ ಪರಿವರ್ತಿಸಲಾಗಿತ್ತು.
'ಅಹಿಂಸಾತ್ಮಕ ಪ್ರತಿಭಟನೆಗೆ ಲಾಠಿ ಚಾರ್ಜ ಏಕೆ?' – ಶಶಿ ತರೂರ್
ಪ್ರತಿಭಟನೆಯ ವೇಳೆ ನಡೆದ ಲಾಠಿ ಚಾರ್ಜ್ ಕುರಿತು ಕಾಂಗ್ರೆಸ್ ಸಂಸದ ಶಶಿ ತರೂರ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
"ಅಹಿಂಸಾತ್ಮಕ ಪ್ರತಿಭಟನೆ ನಡೆಯುತ್ತಿರುವಾಗ ಲಾಠಿ ಚಾರ್ಜ್ ನಡೆಸುವ ಅಗತ್ಯವೇನು? ಲಾಠಿ ಚಾರ್ಜ್ ಅಹಿಂಸೆಯ ಕ್ರಮವಲ್ಲ, ಅದು ಹಿಂಸೆಯ ಕೃತ್ಯ. ಇದರ ಹಿಂದಿನ ತರ್ಕ ನನಗೆ ಅರ್ಥವಾಗುತ್ತಿಲ್ಲ" ಎಂದು ಅವರು ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ ಪ್ರಶ್ನಿಸಿದ್ದಾರೆ.
ಅಶ್ರುವಾಯು ಪ್ರಯೋಗದ ವಿಡಿಯೊ ಹಂಚಿಕೊಂಡ ಸಿಜೆಪಿ
ಪೊಲೀಸರು ಅಶ್ರುವಾಯು ಶೆಲ್‌ಗಳನ್ನು ಪ್ರಯೋಗಿಸುತ್ತಿರುವ ದೃಶ್ಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಸಿಜೆಪಿ, "ಇದು ಯುದ್ಧ ವಲಯವೇ? ಶಾಂತಿಯುತ ಪ್ರತಿಭಟನಾಕಾರರ ವಿರುದ್ಧ ಅಶ್ರುವಾಯು ಪ್ರಯೋಗಿಸುವ ಅಗತ್ಯವೇನು? ಒಂದು ತಿಂಗಳ ಕಾಲ ನಮ್ಮ ಪ್ರತಿಭಟನೆಯನ್ನು ಕಡೆಗಣಿಸಿದ ಸರ್ಕಾರ ಈಗ ನಮ್ಮ ಮೇಲೆ ದಾಳಿ ನಡೆಸುತ್ತಿದೆ" ಎಂದು ಆರೋಪಿಸಿದೆ.


