ಬೈಲಹೊಂಗಲ, ಆ. 1: ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕಿನ ಜಾಲಿಕ್ಕೊಪ್ಪ ಗ್ರಾಮದ ಸಮೀಪ ಕಾರೊಂದು ಕುರಿಗಳ ಹಿಂಡಿನೊಳಗೆ ನುಗ್ಗಿದ ಪರಿಣಾಮ 48 ಕುರಿಗಳು ಮೃತಪಟ್ಟಿದ್ದು, 15ಕ್ಕೂ ಹೆಚ್ಚು ಕುರಿಗಳು ಗಂಭೀರವಾಗಿ ಗಾಯಗೊಂಡಿರುವ ದುರ್ಘಟನೆ ನಡೆದಿದೆ.
ಕೆಂಗಾನೂರ ಗ್ರಾಮದ ಚಂದ್ರಪ್ಪ ರಾಯಪ್ಪ ಹಿತ್ತಲಮನಿ ಹಾಗೂ ದೊಡವಾಡ ಗ್ರಾಮದ ಬೀರಪ್ಪ ಅವರಿಗೆ ಸೇರಿದ ಕುರಿಗಳ ಹಿಂಡನ್ನು ನಯಾನಗರ ಸಮೀಪದ ಮಲಪ್ರಭಾ ನದಿಯ ದಂಡೆಯ ಬಳಿ ಮೇಯಲು ಬಿಡಲಾಗಿತ್ತು. ರಾತ್ರಿ ಸುಮಾರು 12 ಗಂಟೆ ವೇಳೆಗೆ ಕುರಿಗಳನ್ನು ಕೆಂಗಾನೂರ ಗ್ರಾಮದತ್ತ ಕರೆದುಕೊಂಡು ಹೋಗುತ್ತಿದ್ದಾಗ ಬೈಲಹೊಂಗಲದಿಂದ ಬೆಳವಡಿ ಕಡೆಗೆ ವೇಗವಾಗಿ ಬರುತ್ತಿದ್ದ ಕೆಎ–48 ಎಂ–1789 ಸಂಖ್ಯೆಯ ಟಾಟಾ ಇಂಡಿಗೋ ಕಾರು ನೇರವಾಗಿ ಹಿಂಡಿನೊಳಗೆ ನುಗ್ಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಪಘಾತದ ತೀವ್ರತೆಗೆ 48 ಕುರಿಗಳು ಸ್ಥಳದಲ್ಲೇ ಸಾವನ್ನಪ್ಪಿದ್ದು, 15ಕ್ಕೂ ಹೆಚ್ಚು ಕುರಿಗಳು ಗಂಭೀರವಾಗಿ ಗಾಯಗೊಂಡಿವೆ. ಕೆಲವು ಗರ್ಭಿಣಿ ಕುರಿಗಳ ಹೊಟ್ಟೆ ಸೀಳಿ ಮರಿಗಳು ಹೊರಬಂದಿರುವ ದೃಶ್ಯ ಕಂಡುಬಂದಿದ್ದು, ಮೃತ ಹಾಗೂ ಗಾಯಗೊಂಡ ಕುರಿಗಳು ರಸ್ತೆಯುದ್ದಕ್ಕೂ ಚದುರಿಬಿದ್ದಿದ್ದವು.
ಈ ದುರ್ಘಟನೆಯಿಂದ ಕುರಿ ಸಾಕಾಣಿಕೆಯನ್ನು ನಂಬಿ ಜೀವನ ಸಾಗಿಸುತ್ತಿದ್ದ ಕುರಿಗಾಹಿಗಳ ಕುಟುಂಬಗಳಿಗೆ ಸುಮಾರು ₹20 ಲಕ್ಷದಷ್ಟು ಆರ್ಥಿಕ ನಷ್ಟ ಉಂಟಾಗಿದೆ. ಅಪಘಾತದ ಬಳಿಕ ಕಾರು ಚಾಲಕ ವಾಹನವನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
