LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureEditorialBeautyRecipes

ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲು ತೂರಾಟ: ಫೆ.24ರವರೆಗೆ ನಿಷೇಧಾಜ್ಞೆ

ಬಾಗಲಕೋಟ, ಫೆ.20 : ಗುರುವಾರ ರಾತ್ರಿ  ಶಿವಾಜಿ ಜಯಂತಿ ಹಿನ್ನೆಲೆಯಲ್ಲಿ ನಡೆದ ಭಾವಚಿತ್ರ ಮೆರವಣಿಗೆ ವೇಳೆ ಕಲ್ಲು  ತೂರಾಟ ನಡೆದ ಘಟನೆ ಬಾಗಲಕೋಟ ಕಿಲ್ಲಾ ಓಣಿಯಲ್ಲಿ ಸಂಭವಿಸಿದ್ದು, ಪ್ರದೇಶದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಮುಂಜಾಗ್ರತಾ ಕ್ರಮವಾಗಿ ಫೆ.24ರ ಮಧ್ಯರಾತ್ರಿವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.



ಮೆರವಣಿಗೆ ವೇಳೆ ದುಷ್ಕರ್ಮಿಗಳು ಕಲ್ಲು ತೂರಿದ್ದಾರೆ ಎಂದು ಹಿಂದೂ ಸಂಘಟನೆಗಳ ನಾಯಕರು ಆರೋಪಿಸಿದ್ದು ಮೆರವಣಿಗೆ ಸಾಗುತ್ತಿದ್ದವರ ಮೇಲೆ ಮಸೀದಿ ಕಡೆಯಿಂದ ಕಲ್ಲು ಬಂದಿದೆ, ನಮ್ಮ ಕಾರ್ಯಕರ್ತರ ಜೊತೆಗೆ ಪೊಲೀಸ್ ಅಧಿಕಾರಿಗಳ ಮೇಲೂ ಕಲ್ಲು ಬಿದ್ದಿದೆ ಎಂದು ಮುಖಂಡರು ಪತ್ರಿಕೆಗಳಿಗೆ ತಿಳಿಸಿದ್ದಾರೆ.



ಘಟನೆಯಲ್ಲಿ ಪೊಲೀಸ್ ಸಿಬ್ಬಂದಿ ಸೇರಿ ಓರ್ವ ಸಾರ್ವಜನಿಕರಿಗೆ ಗಾಯವಾಗಿರುವ ಮಾಹಿತಿ ಲಭ್ಯವಾಗಿದೆ. ಕಲ್ಲು ತೂರಾಟದ ವೇಳೆ ಹಿಂದೂ ಕಾರ್ಯಕರ್ತ ಪ್ರಕಾಶ ಅರಕೇರಿ ಅವರ ತಲೆಗೆ ಗಾಯವಾಗಿದ್ದು, ಅವರನ್ನು ಬಾಗಲಕೋಟ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.



ಘಟನೆಯ ನಂತರ ತಕ್ಷಣವೇ ಪೊಲೀಸರು ಜನರನ್ನು ಚದುರಿಸಿ ಪರಿಸ್ಥಿತಿ ತಿಳಿಗೊಳಿಸುವ ಕಾರ್ಯ ನಡೆಸಿದರು.



ಘಟನೆ ಕುರಿತು ಪ್ರತಿಕ್ರಿಯಿಸಿರುವ ಬಾಗಲಕೋಟ ಜಿಲ್ಲಾ ಪೊಲೀಸ ವರಿಷ್ಠ ಸಿದ್ಧಾರ್ಥ ಅವರು, “ಶಿವಾಜಿ ಜಯಂತಿ ಮೆರವಣಿಗೆ ಮಸೀದಿ ಬಳಿ ಬಂದಾಗ ಎರಡು ಕಲ್ಲು ಬಂದು ಬಿದ್ದಿವೆ. ಪರಿಸ್ಥಿತಿ ಈಗ ತಿಳಿಯಾಗಿದ್ದು, ವಿಡಿಯೋಗಳನ್ನು ಪರಿಶೀಲನೆ ಮಾಡುತ್ತಿದ್ದೇವೆ. ಹೆಚ್ಚಿನ ಭದ್ರತೆ ಕಲ್ಪಿಸಲಾಗಿದೆ. ಆರೋಪಿಗಳನ್ನು ಬಂಧಿಸಲಾಗುತ್ತದೆ. ನಗರದಲ್ಲಿ ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ” ಎಂದು ತಿಳಿಸಿದ್ದಾರೆ.



ತಳ್ಳುವ ಗಾಡಿಗಳಿಗೆ ಬೆಂಕಿ



ಕಲ್ಲು ತೂರಾಟದ ವೇಳೆ ತರಕಾರಿ ಮಾರುಕಟ್ಟೆಯ ಮೂರು ತಳ್ಳುಗಾಡಿಗಳಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ ಘಟನೆ ಕೂಡ ನಡೆದಿದೆ. ಸ್ಥಳದಲ್ಲಿದ್ದ ಪೊಲೀಸರು ತಕ್ಷಣವೇ ಬೆಂಕಿ ನಂದಿಸಿದ್ದಾರೆ. “ನಮ್ಮ ತಳ್ಳುಗಾಡಿ ಸುಟ್ಟಿದ್ದಾರೆ. ಅದರಲ್ಲಿ ಇದ್ದ ಚಿಲ್ಲರೆ ಹಣವೂ ಬೆಂಕಿಗಾಹುತಿಯಾಗಿದೆ” ಎಂದು ಘಟನೆ ಬಗ್ಗೆ ವ್ಯಾಪಾರಿ ಜನ್ನತಬಿ ದೊಡ್ಡಮನಿ  ರೋದಿಸಿದ್ದಾರೆ.



ಘಟನೆಯನ್ನು ಖಂಡಿಸಿ ಯುವಕರು ರಸ್ತೆ ತಡೆದು ಪ್ರತಿಭಟನೆ ನಡೆಸಲು ಮುಂದಾಗಿದ್ದು, ಕಲ್ಲೆಸೆದವರ ಬಂಧನ ಹಾಗೂ ಐಜಿಪಿ ಸ್ಥಳಕ್ಕೆ ಬರಬೇಕೆಂದು ಒತ್ತಾಯಿಸಿದರು. ಪೊಲೀಸರು ಮನವೊಲಿಸಿ ಅವರನ್ನು ಕಳುಹಿಸಿದರೂ, ಆರೋಪಿಗಳನ್ನು ಬಂಧಿಸದಿದ್ದರೆ ಬಾಗಲಕೋಟ ಬಂದ್‌ಗೆ ಕರೆ ನೀಡುವುದಾಗಿ ಹಿಂದೂ ಕಾರ್ಯಕರ್ತರು ಎಚ್ಚರಿಕೆ ನೀಡಿದ್ದಾರೆ.



ನಿಷೇಧಾಜ್ಞೆ ಜಾರಿ

ಕಲ್ಲು ಹಾಗೂ ಚಪ್ಪಲಿ ತೂರಾಟದ ಹಿನ್ನೆಲೆ ಹಳೆ ಬಾಗಲಕೋಟ, ನವನಗರ ಮತ್ತು ವಿದ್ಯಾಗಿರಿ ಪ್ರದೇಶಗಳಲ್ಲಿ ಫೆ.24ರ ಮಧ್ಯರಾತ್ರಿವರೆಗೆ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಬಾಗಲಕೋಟ ಉಪವಿಭಾಗಾಧಿಕಾರಿ ಸಂತೋಷ ಜಗಲಾಸರ ಆದೇಶ ಹೊರಡಿಸಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ನಾಲ್ಕಕ್ಕಿಂತ ಹೆಚ್ಚು ಜನ ಸೇರಿ ತಿರುಗಾಡುವುದು, ಅಪಾಯಕಾರಿ ಶಸ್ತ್ರಾಸ್ತ್ರ ಹಿಡಿದು ಓಡಾಟ ನಡೆಸುವುದು, ಸುರಕ್ಷತೆಗೆ ಧಕ್ಕೆ ತರುವ ಯಾವುದೇ ಚಟುವಟಿಕೆ, ಅನುಮತಿ ಇಲ್ಲದೆ ಸಭೆ-ಸಮಾರಂಭ ಹಾಗೂ ಧರಣಿ ನಡೆಸುವುದನ್ನು ನಿಷೇಧಿಸಲಾಗಿದೆ.



ಸ್ಥಳದಲ್ಲಿ ಭಾರೀ ಸಂಖ್ಯೆಯಲ್ಲಿ ಪೊಲೀಸ್ ಬಂದೋಬಸ್ತ ಮಾಡಲಾಗಿದ್ದು, ಪಂಕಾ ಮಸೀದಿ ಮತ್ತು ಕೊತ್ತಲೇಶ್ವರ ದೇಗುಲದ ಬಳಿ ಹೆಚ್ಚುವರಿ ಭದ್ರತೆ ಒದಗಿಸಲಾಗಿದೆ. ಯಾವುದೇ ಅನಾಹುತ ನಡೆಯದಂತೆ ಪೊಲೀಸ್ ಸಿಬ್ಬಂದಿ ಸ್ಥಳದಲ್ಲೇ ಬೀಡುಬಿಟ್ಟಿದ್ದಾರೆ.
Author
A B Dharwadkar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST