ರೇಬಿಸ್ ಲಸಿಕೆ ಪಡೆಯದೆ ನಿರ್ಲಕ್ಷ್ಯ; ಚಿಕಿತ್ಸೆ ಫಲಿಸದೆ ಮೃತ್ಯು
ವಿಜಯಪುರ, ಮೇ 26 : ಹುಚ್ಚು ನಾಯಿ ಕಚ್ಚಿದ ಬಳಿಕ ಸಕಾಲದಲ್ಲಿ ರೇಬಿಸ್ ನಿರೋಧಕ ಲಸಿಕೆ ಪಡೆಯದೆ ನಿರ್ಲಕ್ಷ್ಯ ವಹಿಸಿದ್ದ ಪರಿಣಾಮ ಯುವಕನೊಬ್ಬ ಮೃತಪಟ್ಟಿರುವ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ.
ಮೃತ ಯುವಕನನ್ನು ನಿಡಗುಂದಿ ತಾಲೂಕಿನ ಗೋಲಸಂಗಿ ಗ್ರಾಮದ ನಿವಾಸಿ ಪ್ರದೀಪ ಚಂದ್ರಶೇಖರ ಹಳೇರೊಳ್ಳಿ (22) ಎಂದು ಗುರುತಿಸಲಾಗಿದೆ.
ಮೂಲಗಳ ಪ್ರಕಾರ, ಕಳೆದ ಮಾರ್ಚ್ ತಿಂಗಳಲ್ಲಿ ಬಾಗಲಕೋಟೆ ಜಿಲ್ಲೆ ಬೀಳಗಿ ತಾಲೂಕಿನ ಮನ್ನಿಕೇರಿ ಗ್ರಾಮದಲ್ಲಿ ನಡೆದಿದ್ದ ಚಂದ್ರಾದೇವಿ ಜಾತ್ರೆಗೆ ಪ್ರದೀಪ ತೆರಳಿದ್ದನು. ಈ ವೇಳೆ ಹುಚ್ಚು ನಾಯಿಯೊಂದು ಆತನಿಗೆ ಕಚ್ಚಿತ್ತು ಎನ್ನಲಾಗಿದೆ. ಆದರೆ, ಇದನ್ನು ಗಂಭೀರವಾಗಿ ಪರಿಗಣಿಸದ ಪ್ರದೀಪ ಸೂಕ್ತ ಚಿಕಿತ್ಸೆ ಹಾಗೂ ರೇಬಿಸ್ ನಿರೋಧಕ ಲಸಿಕೆ ಪಡೆಯದೆ ನಿರ್ಲಕ್ಷ್ಯ ವಹಿಸಿದ್ದಾನೆ ಎಂದು ತಿಳಿದುಬಂದಿದೆ.
ನಾಯಿ ಕಚ್ಚಿದ ಸುಮಾರು ಎರಡು ತಿಂಗಳ ಬಳಿಕ ಪ್ರದೀಪನಲ್ಲಿ ರೇಬಿಸ್ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿವೆ. ಒಂದು ವಾರದ ಹಿಂದೆ ಆರೋಗ್ಯದಲ್ಲಿ ತೀವ್ರ ಏರುಪೇರು ಕಂಡುಬಂದ ಹಿನ್ನೆಲೆ ಆತನನ್ನು ನಿಡಗುಂದಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿತ್ತು.
ಆದರೆ, ಸ್ಥಿತಿ ಮತ್ತಷ್ಟು ಗಂಭೀರಗೊಂಡ ಹಿನ್ನೆಲೆಯಲ್ಲಿ ಬಾಗಲಕೋಟೆಯ ಕೆರೂಡಿ ಖಾಸಗಿ ಆಸ್ಪತ್ರೆಗೆ ರವಾನಿಸಲಾಯಿತು. ಬಳಿಕ ಮೇ 25ರಂದು ಮಧ್ಯಾಹ್ನ ಬಾಗಲಕೋಟೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತಾದರೂ, ಅಷ್ಟರಲ್ಲಾಗಲೇ ರೇಬಿಸ್ ವೈರಸ್ ದೇಹದಾದ್ಯಂತ ವ್ಯಾಪಿಸಿತ್ತು ಎಂದು ವೈದ್ಯರು ತಿಳಿಸಿದ್ದಾರೆ. ತಡರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಪ್ರದೀಪ ಆಸ್ಪತ್ರೆಯಲ್ಲೇ ಮೃತಪಟ್ಟಿದ್ದಾನೆ.
ಈ ಘಟನೆ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದ್ದು, ನಾಯಿ ಕಡಿತಕ್ಕೊಳಗಾದ ತಕ್ಷಣವೇ ರೇಬಿಸ್ ನಿರೋಧಕ ಲಸಿಕೆ ಪಡೆಯುವುದು ಎಷ್ಟು ಅಗತ್ಯ ಎಂಬುದಕ್ಕೆ ಎಚ್ಚರಿಕೆಯ ಉದಾಹರಣೆಯಾಗಿದೆ. ಆರೋಗ್ಯ ಇಲಾಖೆ ಕೂಡ ನಾಯಿ ಕಡಿತದ ಬಳಿಕ ಚಿಕಿತ್ಸೆ ಹಾಗೂ ಲಸಿಕೆ ಪಡೆಯುವ ಕುರಿತು ನಿರಂತರ ಜಾಗೃತಿ ಮೂಡಿಸುತ್ತಿದ್ದರೂ, ನಿರ್ಲಕ್ಷ್ಯದಿಂದ ಇಂತಹ ದುರಂತಗಳು ಸಂಭವಿಸುತ್ತಿವೆ.