ತುಮಕೂರು, ಮೇ 19 : ಚುನಾವಣಾ ಸಂದರ್ಭದಲ್ಲಿ ಜಿ. ಪರಮೇಶ್ವರ್ ಅಧ್ಯಕ್ಷತೆಯ ಪ್ರಣಾಳಿಕೆ ಸಮಿತಿ ರೂಪಿಸಿದ್ದ 580 ಭರವಸೆಗಳಲ್ಲಿ 290ಕ್ಕೂ ಹೆಚ್ಚು ಭರವಸೆಗಳನ್ನು ಕಾಂಗ್ರೆಸ್ ಸರ್ಕಾರ ಈಡೇರಿಸಿದೆ. ಉಳಿದಿರುವ ಭರವಸೆಗಳನ್ನೂ ಮುಂದಿನ ಎರಡು ವರ್ಷಗಳಲ್ಲಿ ಪೂರ್ಣಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ರಾಜ್ಯ ಸರ್ಕಾರಕ್ಕೆ ಮೂರು ವರ್ಷಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ತುಮಕೂರು ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ಆಯೋಜಿಸಿದ್ದ ಮೂರು ವರ್ಷಗಳ ಸಾಧನಾ ಸಮರ್ಪಣಾ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ನವ ಕರ್ನಾಟಕ ಅಭಿವೃದ್ಧಿ ಮಾದರಿಯ ವಸ್ತು ಪ್ರದರ್ಶನವನ್ನು ಉದ್ಘಾಟಿಸಿದ ಮುಖ್ಯಮಂತ್ರಿ, ತುಮಕೂರು ಜಿಲ್ಲೆಯಲ್ಲಿ ಕೈಗೆತ್ತಿಕೊಳ್ಳಲಾದ 682 ಕೋಟಿ ರೂ. ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿದರು.
ನಾಳೆಗೆ ಸರ್ಕಾರ ಅಧಿಕಾರಕ್ಕೆ ಬಂದು ಮೂರು ವರ್ಷಗಳು ಪೂರ್ಣಗೊಳ್ಳುತ್ತಿರುವ ಸಂದರ್ಭದಲ್ಲಿ ಗೃಹ ಸಚಿವ ಜಿ. ಪರಮೇಶ್ವರ್ ನೇತೃತ್ವದಲ್ಲಿ ಸಾಧನಾ ಸಮರ್ಪಣಾ ಸಮಾವೇಶವನ್ನು ಅಚ್ಚುಕಟ್ಟಾಗಿ ಆಯೋಜಿಸಲಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಗಳ ಪೈಕಿ 290ಕ್ಕೂ ಹೆಚ್ಚು ಭರವಸೆಗಳನ್ನು ಈಡೇರಿಸಲಾಗಿದೆ. ಮುಖ್ಯವಾಗಿ ಘೋಷಿಸಿದ್ದ ಐದು ಗ್ಯಾರಂಟಿಗಳನ್ನು ಅಧಿಕಾರಕ್ಕೆ ಬಂದ ಕ್ಷಣದಿಂದಲೇ ಹಂತ ಹಂತವಾಗಿ ಜಾರಿಗೆ ತಂದಿದ್ದೇವೆ. ಉಳಿದ ಭರವಸೆಗಳನ್ನೂ ಈಡೇರಿಸಿ ಜನರ ಮುಂದೆ ಧನ್ಯತೆ ಅರ್ಪಿಸಲು ಬಂದಿದ್ದೇವೆ ಎಂದು ಹೇಳಿದರು.
ಸರ್ಕಾರ ಸರ್ವ ಜಾತಿ, ಸರ್ವ ಧರ್ಮದ ಜನರ ಅಭಿವೃದ್ಧಿಗೆ ಬದ್ಧವಾಗಿದೆ. ಎಲ್ಲ ವರ್ಗದ ಬಡವರಿಗೆ ಶಕ್ತಿ ತುಂಬುವ ಕೆಲಸ ಮಾಡಿದ್ದೇವೆ. ಬಿಜೆಪಿ ರೀತಿಯಲ್ಲಿ ಜಾತಿ ಹಾಗೂ ಧರ್ಮದ ಹೆಸರಿನಲ್ಲಿ ಜನರನ್ನು ವಿಭಜಿಸುವ ರಾಜಕಾರಣವನ್ನು ನಾವು ಮಾಡಿಲ್ಲ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬರುವ ಮೊದಲು ಇದ್ದ ಪೆಟ್ರೋಲ್, ಡೀಸೆಲ್ ಹಾಗೂ ಚಿನ್ನದ ಬೆಲೆಗಳು ಈಗ ಗಗನಕ್ಕೇರಿವೆ. ಮೋದಿ ಆಡಳಿತದಲ್ಲಿ ಅಂಬಾನಿ ಹಾಗೂ ಅದಾನಿಯಂತಹ ಉದ್ಯಮಿಗಳು ಮಾತ್ರ ಲಾಭ ಪಡೆದಿದ್ದಾರೆ. ಅವರ ಆಸ್ತಿ ಲಕ್ಷಾಂತರ ಕೋಟಿಗೆ ಏರಿಕೆಯಾಗಿದೆ. ಆದರೆ ಬಡವರು ಹಾಗೂ ಮಧ್ಯಮ ವರ್ಗದವರ ಬದುಕು ಸಂಕಷ್ಟಕ್ಕೆ ಸಿಲುಕಿದೆ ಎಂದು ಆರೋಪಿಸಿದರು.
ಕರ್ನಾಟಕದ ತಲಾ ಆದಾಯ ದೇಶದಲ್ಲೇ ಅಗ್ರಸ್ಥಾನದಲ್ಲಿದೆ. ಜಿಎಸ್‌ಟಿ ಸಂಗ್ರಹದಲ್ಲಿಯೂ ರಾಜ್ಯದ ಕೊಡುಗೆ ಮಹತ್ವದ್ದಾಗಿದೆ. ದೇಶದ ಸರಾಸರಿ ತಲಾ ಆದಾಯಕ್ಕಿಂತ ರಾಜ್ಯದ ಆದಾಯ ಹೆಚ್ಚಾಗಿರುವುದು ಸರ್ಕಾರದ ಅಭಿವೃದ್ಧಿ ಕಾರ್ಯಗಳ ಫಲ ಎಂದು ಹೇಳಿದರು.
ನಾವು ನುಡಿದಂತೆ ನಡೆದಿದ್ದೇವೆ. ಹೀಗಾಗಿ 2028ರ ವಿಧಾನಸಭಾ ಚುನಾವಣೆಯಲ್ಲೂ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕುವೆಂಪು ಅವರ ಸರ್ವ ಜನಾಂಗದ ಶಾಂತಿಯ ತೋಟ ಎಂಬ ಆಶಯದ ನಾಡನ್ನು ಇನ್ನಷ್ಟು ಬಲಿಷ್ಠವಾಗಿ ರೂಪಿಸಲಾಗುವುದು. ಸಂವಿಧಾನಬದ್ಧ ಅಭಿವೃದ್ಧಿ ಮಾರ್ಗದಲ್ಲಿ ರಾಜ್ಯವನ್ನು ಮುನ್ನಡೆಸುತ್ತೇವೆ ಎಂದು ಹೇಳಿದರು.
ನೀಟ್ ಪರೀಕ್ಷೆಯಿಂದ 22 ಲಕ್ಷ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಚೆಲ್ಲಾಟ ನಡೆದಿದೆ. ಹಲವು ವಿದ್ಯಾರ್ಥಿಗಳ ಆತ್ಮಹತ್ಯೆಗೆ ಕೇಂದ್ರ ಸರ್ಕಾರವೇ ಕಾರಣ ಎಂದು ಆರೋಪಿಸಿದ ಮುಖ್ಯಮಂತ್ರಿ, ರಾಜ್ಯದ ಸಿಇಟಿ ಮಾದರಿಯ ಪರೀಕ್ಷೆ ನಡೆಸುವಂತೆ ನೀಡಿದ್ದ ಸಲಹೆಯನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದೆ ಎಂದು ಟೀಕಿಸಿದರು.
ವರ್ಷಕ್ಕೆ 2 ಕೋಟಿ ಉದ್ಯೋಗ ನೀಡುವ ಭರವಸೆ ಈಡೇರಿಲ್ಲ. ರೈತರ ಆದಾಯ ದುಪ್ಪಟ್ಟು ಮಾಡುವುದಾಗಿಯೂ ಹೇಳಿದ್ದರೂ ಅದು ಸಾಧ್ಯವಾಗಿಲ್ಲ. ಕಪ್ಪು ಹಣವನ್ನು ವಾಪಸ್ ತರುವ ಭರವಸೆಯೂ ಈಡೇರಿಲ್ಲ ಎಂದು ಬಿಜೆಪಿ ಹಾಗೂ ಆರ್‌ಎಸ್‌ಎಸ್ ವಿರುದ್ಧ ವಾಗ್ದಾಳಿ ನಡೆಸಿದರು.
ದೇಶದ ಸಾಲವನ್ನು 220 ಲಕ್ಷ ಕೋಟಿ ರೂ.ಗೆ ಹೆಚ್ಚಿಸಿರುವುದು ಕೇಂದ್ರ ಸರ್ಕಾರದ ವೈಫಲ್ಯ ಎಂದು ಆರೋಪಿಸಿದರು.
ಸಮಾವೇಶದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ, ಗೃಹ ಸಚಿವ ಜಿ. ಪರಮೇಶ್ವರ, ಕಂದಾಯ ಸಚಿವ ಕೃಷ್ಣಬೈರೇಗೌಡ ಸೇರಿದಂತೆ ಸಂಪುಟದ ಸಚಿವರು, ಶಾಸಕರು ಹಾಗೂ ವಿವಿಧ ಗಣ್ಯರು ಉಪಸ್ಥಿತರಿದ್ದರು.