ಜೆರುಸಲೆಮ್, ಜೂ.15 : ಮಧ್ಯಪ್ರಾಚ್ಯದಲ್ಲಿ ಅಶಾಂತಿಯ ಮುಖ್ಯ ಕಾರಣಕರ್ತ ಇಸ್ರೇಲ್ ಮತ್ತೆ ಶಾಂತಿಗೆ ಕ್ಯಾತೆ ತೆಗೆದಿದೆ. ಅಮೆರಿಕ ಮತ್ತು ಇರಾನ್ ನಡುವಿನ ಶಾಂತಿ ಒಪ್ಪಂದದ ಘೋಷಣೆಯ ಬೆನ್ನಲ್ಲೇ ಲೆಬನಾನ್, ಸಿರಿಯಾ ಹಾಗೂ ಗಾಜಾದಲ್ಲಿರುವ ಇಸ್ರೇಲ್ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ಸ್ಪಷ್ಟಪಡಿಸಿದ್ದಾರೆ.
ಅಮೆರಿಕದ ಮಧ್ಯಸ್ಥಿಕೆಯಲ್ಲಿ ಘೋಷಿಸಲಾದ ಶಾಂತಿ ಒಪ್ಪಂದದ ಭಾಗವಾಗಿ ಸೇನೆ ಹಿಂತೆಗೆದುಕೊಳ್ಳುವ ಯಾವುದೇ ಪ್ರಸ್ತಾವವನ್ನು ಇಸ್ರೇಲ್ ಒಪ್ಪುವುದಿಲ್ಲ. ಈ ನಿಲುವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಈಗಾಗಲೇ ತಿಳಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಭದ್ರತೆಯಲ್ಲಿ ರಾಜಿ ಇಲ್ಲ
ದೇಶದ ಭದ್ರತೆ ವಿಚಾರದಲ್ಲಿ ಯಾವುದೇ ರಾಜಿ ಸಾಧ್ಯವಿಲ್ಲ ಎಂದು ಕಾಟ್ಜ್ ಹೇಳಿದ್ದಾರೆ. ಬಾಹ್ಯ ರಾಜತಾಂತ್ರಿಕ ಒತ್ತಡಗಳು ಅಥವಾ ಅಂತಾರಾಷ್ಟ್ರೀಯ ಒಪ್ಪಂದಗಳ ಕಾರಣಕ್ಕೆ ಇಸ್ರೇಲ್ ತನ್ನ ಭದ್ರತಾ ವ್ಯವಸ್ಥೆಯನ್ನು ಬದಲಾಯಿಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಇಸ್ರೇಲ್ ನಾಗರಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಲೆಬನಾನ್, ಸಿರಿಯಾ ಹಾಗೂ ಗಾಜಾದ ಭದ್ರತಾ ವಲಯಗಳಲ್ಲಿ ಸೇನೆ ಅನಿರ್ದಿಷ್ಟ ಅವಧಿಯವರೆಗೆ ಮುಂದುವರಿಯಲಿದೆ ಎಂದು ತಿಳಿಸಿದ್ದಾರೆ.
ಇರಾನ್‌ಗೆ ಕಠಿಣ ಎಚ್ಚರಿಕೆ
ಉತ್ತರ ಗಡಿಯಲ್ಲಿ ಉದ್ವಿಗ್ನತೆ ಹೆಚ್ಚಿಸುವ ಯಾವುದೇ ಪ್ರಯತ್ನವನ್ನು ಇಸ್ರೇಲ್ ಸಹಿಸುವುದಿಲ್ಲ ಎಂದು ಕಾಟ್ಜ್ ಎಚ್ಚರಿಕೆ ನೀಡಿದ್ದಾರೆ.
ಇರಾನ್ ಲೆಬನಾನ್ ಮೂಲಕ ಯಾವುದೇ ರೀತಿಯ ದಾಳಿ ನಡೆಸಿದರೆ, ಅದಕ್ಕೆ ಇಸ್ರೇಲ್ ಪೂರ್ಣ ಬಲದಿಂದ ಪ್ರತಿಕ್ರಿಯೆ ನೀಡಲಿದೆ. ಪ್ರಸ್ತುತ ಮತ್ತು ಭವಿಷ್ಯದ ಎಲ್ಲ ಒತ್ತಡಗಳ ನಡುವೆಯೂ ಲೆಬನಾನ್‌ನಿಂದ ಹಿಂದೆ ಸರಿಯುವುದಿಲ್ಲ ಎಂದು ಅವರು ಪುನರುಚ್ಚರಿಸಿದ್ದಾರೆ.
ಈ ನಿಲುವನ್ನು ಪ್ರಧಾನಿ ಬೆಂಜಮಿನ್ ನೆತನ್ಯಾಹು ಕೂಡ ಅಮೆರಿಕ ಅಧ್ಯಕ್ಷ ಟ್ರಂಪ್ ಅವರಿಗೆ ಸ್ಪಷ್ಟವಾಗಿ ತಿಳಿಸಿದ್ದರು ಎಂದು ಕಾಟ್ಜ್ ಹೇಳಿದ್ದಾರೆ.
ಅಮೆರಿಕ ಮಧ್ಯಸ್ಥಿಕೆಗೆ ವಿರೋಧ
ಇಸ್ರೇಲ್ ರಾಷ್ಟ್ರೀಯ ಭದ್ರತಾ ಸಚಿವ ಇಟಮರ್ ಬೆನ್-ಗ್ವಿರ್ ಕೂಡ ಅಮೆರಿಕದ ಮಧ್ಯಸ್ಥಿಕೆ ಪ್ರಯತ್ನಗಳನ್ನು ತೀವ್ರವಾಗಿ ಟೀಕಿಸಿದ್ದಾರೆ. ಇಸ್ರೇಲ್ ಯಾವುದೇ ಬಾಹ್ಯ ರಾಜತಾಂತ್ರಿಕ ಒಪ್ಪಂದಗಳಿಗೆ ಬದ್ಧವಾಗಿಲ್ಲ. ದೇಶದ ಸಾರ್ವಭೌಮತ್ವ ಮತ್ತು ಭದ್ರತಾ ಹಿತಾಸಕ್ತಿಗಳೇ ಮೊದಲ ಆದ್ಯತೆ ಎಂದು ಅವರು ಹೇಳಿದ್ದಾರೆ.
ಅಮೆರಿಕ–ಇರಾನ್ ಶಾಂತಿ ಒಪ್ಪಂದಕ್ಕೆ ಜಾಗತಿಕ ಮಟ್ಟದಲ್ಲಿ ಸ್ವಾಗತ ವ್ಯಕ್ತವಾಗುತ್ತಿರುವ ಸಂದರ್ಭದಲ್ಲೇ, ಇಸ್ರೇಲ್‌ನ ಈ ಕಠಿಣ ನಿಲುವು ಮಧ್ಯಪ್ರಾಚ್ಯದ ಭವಿಷ್ಯದ ಶಾಂತಿ ಪ್ರಕ್ರಿಯೆಯ ಬಗ್ಗೆ ಹೊಸ ಪ್ರಶ್ನೆಗಳನ್ನು ಹುಟ್ಟುಹಾಕಿದೆ.