ಸವದತ್ತಿ ಮೇ 5 :
ತಾಲೂಕಿನ ಆಲದಕಟ್ಟಿ ಗ್ರಾಮದಲ್ಲಿ ವಿಡಿಯೋ ಕಾಲ್ ನಲ್ಲಿ ಮಗುವನ್ನು ತೋರಿಸುವ ವಿಚಾರಕ್ಕೆ ಅತ್ತೆಯೊಂದಿಗೆ ಉಂಟಾದ ಕಲಹವು ಹಲ್ಲೆಗೆ ತಿರುಗಿ, ಅಳಿಯನು ಚಾಕುವಿನಿಂದ ಇರಿದ ಘಟನೆ ಸೋಮವಾರ ಸಂಜೆ ನಡೆದಿದೆ.
ಇರಿತಕ್ಕೊಳಗಾದವರು 45 ವರ್ಷದ ಮಹಾದೇವಿ ಕರಿಗಾರ ಆಗಿದ್ದು, ಆರೋಪಿಯಾಗಿರುವ ಅಳಿಯ 26 ವರ್ಷದ ಅರವಿಂದ ಗವಳಿ ಅವರನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.
ಸುಮಾರು ಒಂದೂವರೆ ವರ್ಷದ ಹಿಂದೆ ಮಹಾದೇವಿಯ ಮಗಳನ್ನು ಅರವಿಂದ ಗವಳಿಗೆ ಮದುವೆ ಮಾಡಲಾಗಿತ್ತು. ಎರಡು ತಿಂಗಳ ಹಿಂದೆ ಮಗಳಿಗೆ ಹೆರಿಗೆಯಾಗಿದ್ದು, ಅವಳು ತವರು ಮನೆಯಲ್ಲಿ ವಾಸವಾಗಿದ್ದಳು. ಈ ನಡುವೆ ಅರವಿಂದ ತನ್ನ ಪತ್ನಿಗೆ ಪದೇಪದೇ ವಿಡಿಯೋ ಕಾಲ್ ಮಾಡಿ ಮಗುವನ್ನು ತೋರಿಸುವಂತೆ ಒತ್ತಾಯ ಮಾಡುತ್ತಿದ್ದನು.
ಮನೆಯ ಕೆಲಸಗಳಲ್ಲಿ ನಿರತರಾಗಿದ್ದ ಕಾರಣ ನಿರಂತರವಾಗಿ ಮೊಬೈಲ್ ಬಳಸಲು ಸಾಧ್ಯವಿಲ್ಲ ಎಂದು ಮಹಾದೇವಿ ತಿಳಿಸಿದ್ದರಿಂದ ಇಬ್ಬರ ನಡುವೆ ವಾಗ್ವಾದ ಉಂಟಾಗಿದೆ. ಈ ವೇಳೆ ಅರವಿಂದ ಅವಾಚ್ಯವಾಗಿ ನಿಂದನೆ ನಡೆಸಿದ್ದಾನೆ ಎನ್ನಲಾಗಿದೆ. ಅಲ್ಲದೆ, ಮನೆಗೆ ಬಂದರೆ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಮಹಾದೇವಿ ಎಚ್ಚರಿಕೆ ನೀಡಿದ್ದಳು ಎಂದು ತಿಳಿದುಬಂದಿದೆ.
ಇದನ್ನು ಸವಾಲಾಗಿ ತೆಗೆದುಕೊಂಡ ಅರವಿಂದ, ಆಲದಕಟ್ಟಿ ಗ್ರಾಮದ ಮಹಾದೇವಿಯ ಮನೆಗೆ ಬಂದು ಚಾಕುವಿನಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದನು. ಗಾಯಗೊಂಡ ಮಹಾದೇವಿಯನ್ನು ತಕ್ಷಣ ಬೆಳಗಾವಿಯ ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಐಸಿಯು ವಿಭಾಗದಲ್ಲಿ ಚಿಕಿತ್ಸೆ ಮುಂದುವರಿದಿದೆ.
ಘಟನೆಯ ಮಾಹಿತಿ ತಿಳಿದ ಮುರಗೋಡ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.