ಹಾಸನ, ಏಪ್ರಿಲ್ 29 : ಹಾಸನ ಜಿಲ್ಲೆಯಲ್ಲಿ ಮನಕಲಕುವ ಘಟನೆ ಸಂಭವಿಸಿದ್ದು, ಸರಿಯಾದ ಸಮಯಕ್ಕೆ ವಿವಾಹವಾಗಲು ಕನ್ಯೆ ಸಿಗದಿದ್ದ ಕಾರಣ ಮನನೊಂದು ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮೃತರನ್ನು ವಿನಯ್ 35 ಎಂದು ಗುರುತಿಸಲಾಗಿದೆ. ಹಾಸನ ಜಿಲ್ಲೆಯ ಬೇಲೂರು ಪಟ್ಟಣದ ಕೃಷ್ಣ ಸಮುದ್ರದ ಕಲ್ಯಾಣಿ ಬಳಿ ಈ ಘಟನೆ ನಡೆದಿದೆ. ಚಿಕ್ಕಮಗಳೂರು ಜಿಲ್ಲೆಯ ಆಲ್ದೂರು ತಾಲೂಕಿನ ಗುಡ್ದೂರು ಗ್ರಾಮದ ನಿವಾಸಿಯಾಗಿದ್ದ ವಿನಯ್, ಕಳೆದ ಕೆಲವು ಸಮಯದಿಂದ ಮದುವೆಗಾಗಿ ಹುಡುಗಿ ಹುಡುಕುತ್ತಿದ್ದರು. ಹಲವು ಕಡೆ ಪ್ರಯತ್ನಿಸಿದರೂ ಯಾವುದೇ ಸಂಬಂಧ ಕುದರಿರಲಿಲ್ಲ.
ನನ್ನ ವಯಸ್ಸಿನವರಿಗೆಲ್ಲ ಮದುವೆಯಾಗಿದೆ, ನನಗೆ ಮಾತ್ರ ಹುಡುಗಿ ಸಿಗುತ್ತಿಲ್ಲ ಎಂಬ ಕೀಳರಿಮೆ ಹಾಗೂ ಸಾಂಸಾರಿಕ ಜೀವನದ ಬಗ್ಗೆ ನಿರಾಸೆಯಿಂದ ಬಳಲುತ್ತಿದ್ದ ವಿನಯ್, ಬೇಲೂರಿನ ಕೃಷ್ಣ ಸಮುದ್ರದ ಕಲ್ಯಾಣಿಗೆ ಹಾರಿ ಪ್ರಾಣ ಬಿಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಘಟನಾ ಸ್ಥಳಕ್ಕೆ ಬೇಲೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಭಾಗದ ಯುವಕರಿಗೆ, ವಿಶೇಷವಾಗಿ ಕೃಷಿ ಅವಲಂಬಿತರಿಗೆ ಮದುವೆಯಾಗಲು ಹುಡುಗಿಯರು ಸಿಗದಿರುವುದು ಗಂಭೀರ ಸಾಮಾಜಿಕ ಸಮಸ್ಯೆಯಾಗಿ ಪರಿಣಮಿಸಿದೆ. ಇಂತಹ ಸಂದರ್ಭಗಳಲ್ಲಿ ಮಾನಸಿಕ ಒತ್ತಡಕ್ಕೆ ಒಳಗಾಗಿ ಅತಿವಾದಿ ನಿರ್ಧಾರ ಕೈಗೊಳ್ಳದೆ, ಆಪ್ತರೊಂದಿಗೆ ಮಾತುಕತೆ ನಡೆಸಿ ಸಮಾಲೋಚನೆ ಪಡೆಯುವುದು ಅಗತ್ಯ ಎಂದು ತಜ್ಞರು ಸೂಚಿಸಿದ್ದಾರೆ.
ಜೀವನ ಅಮೂಲ್ಯವಾದುದು. ಯಾವುದೇ ಮಾನಸಿಕ ಒತ್ತಡ ಅಥವಾ ಸಮಸ್ಯೆಗಳಿದ್ದರೆ ಸಂಪರ್ಕಿಸಿ
ಆರೋಗ್ಯ ಸಹಾಯವಾಣಿ 104
ಸಹಾಯ 08025497777