LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureEditorialBeautyRecipes

ಮೀಸಲಾತಿ ವಿಚಾರಣೆ ಮುಂದೂಡುತ್ತಿರುವ ಸರ್ಕಾರ; ಮುಸ್ಲಿಮ, ಲಿಂಗಾಯತ, ಒಕ್ಕಲಿಗರಿಗೆ ವಂಚನೆ - ಚಿಂತಕ ಶಿವಸುಂದರ

ಬೆಂಗಳೂರು, ೨೫-ಮುಸ್ಲಿಮ ಮೀಸಲಾತಿ ರದ್ದು ಆದೇಶ ಮೇ 9ರ ತನಕ ಜಾರಿ ಇಲ್ಲ, ಅಲ್ಲಿಯ ವರೆಗೆ 2002ರ ಆದೇಶವೇ ಜಾರಿ ಎಂದು ಸುಪ್ರೀಮ ಕೋರ್ಟ ಹೇಳಿದ್ದು ಚುನಾವಣಾ ಕುತಂತ್ರಕ್ಕಾಗಿ ಮುಸ್ಲಿಮ ಮೀಸಲಾತಿ ರದ್ದು ಆದೇಶದ ವಿಚಾರಣೆಯನ್ನು ಬಿಜೆಪಿ ಸರ್ಕಾರ ಪದೇ ಪದೇ ಮುಂದೂಡುತ್ತಿದೆ ಎಂದು ಚಿಂತಕ ಶಿವಸುಂದರ ಹೇಳಿದ್ದಾರೆ.



ಸುಪ್ರೀಮ  ಕೋರ್ಟನಲ್ಲಿ ಮುಸ್ಲಿಂ ಮೀಸಲಾತಿ ರದ್ದು ಆದೇಶದ ವಿಚಾರಣೆಯನ್ನು ಪದೇ ಪದೇ ಮುಂದೂಡಲು ಬಿಜೆಪಿ ಸರ್ಕಾರದ ಮಾಡುತ್ತಿರುವ ಮನವಿಯು ಚುನಾವಣಾ ಕುತಂತ್ರವಲ್ಲವೇ? ಇದು ಮುಸ್ಲಿಮರಿಗೂ, ಲಿಂಗಾಯತರಿಗೂ, ಒಕ್ಕಲಿಗರಿಗೂ ಕೂಡ ಮಾಡುತ್ತಿರುವ ವಂಚನೆಯಲ್ಲವೇ? ಎಂದು ಅವರು ಪ್ರಶ್ನಿಸಿದ್ದಾರೆ.



ಕರ್ನಾಟಕದ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ತನ್ನ ಮಾರ್ಚ 23ರ ಮುಸ್ಲಿಮ ಮೀಸಲಾತಿ ರದ್ದು ಆದೇಶದ ಬಗ್ಗೆ ತನ್ನ ಅಫಿಡವಿಟ್ ಮಂಡಿಸಲು ಸುಪ್ರೀಮ ಕೋರ್ಟಿನಲ್ಲಿ ಮೇ 9ರ ತನಕ ಮತ್ತೊಂದು ಗಡುವು ಕೇಳಿದೆ. ಇದು ತನ್ನ ಅಸಂವೈಧಾನಿಕ ನಡೆಯನ್ನು ಸಮರ್ಥಿಸಿಕೊಳ್ಳಲಾಗದೇ ಬಿಜೆಪಿ ಸರ್ಕಾರ ಕೇಳಿದ ನಾಲ್ಕನೇ ವಿಸ್ತರಣೆಯಾಗಿದೆ. ಮೇ 9 ರಂದೂ ಕೂಡ ಅದು ವಿಸ್ತರಣೆ ಕೇಳಿದರೆ ಸುಪ್ರೀಮ ಕೋರ್ಟಿನ ಬೇಸಿಗೆ ರಜಾ ಪ್ರಾರಂಭವಾಗುತ್ತದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.



ತಾನು ಲಿಂಗಾಯತ-ಒಕ್ಕಲಿಗರ ಪರವಾಗಿ ಮೀಸಲಾತಿ ಹೆಚ್ಚಿಸಿದ್ದೇನೆ ಎಂದು ಚುನಾವಣಾ ಪ್ರಚಾರ ಮಾಡುತ್ತಿರುವ ಬಿಜೆಪಿ ಸರ್ಕಾರ ಅದನ್ನು ಸುಪ್ರೀಮ ಕೋರ್ಟಿನಲ್ಲಿ ಏಕೆ ಸಮರ್ಥಿಸಿಕೊಳ್ಳಲು ಹಿಂದೆ ಮುಂದೆ ನೋಡುತ್ತಿದೆ? ಏಕೆಂದರೆ ಬಿಜೆಪಿ ಸರ್ಕಾರದ ಈ ಮೀಸಲಾತಿ ನೀತಿ ಅಸಾಂವಿಧಾನಿಕ, ಕಾನೂನು ಬಾಹಿರ. ಇದು ವಿಚಾರಣೆಗೆ ಬಂದರೆ ಬಿಜೆಪಿ ಆದೇಶ ಆದೇಶ ಸಿಂಧುವಾಗುವುದಿಲ್ಲ. ಆ ಆದೇಶವನ್ನು ಸುಪ್ರೀಮ ಕೋರ್ಟ ರದ್ದು ಮಾಡುತ್ತದೆ. ಆಗ ಚುನಾವಣೆಯಲ್ಲಿ ಬಿಜೆಪಿಗೆ ಮುಖಭಂಗವಾಗುತ್ತದೆ. ಆದ್ದರಿಂದಲೇ ಇಂದು ಮತ್ತೊಮ್ಮೆ ಮೇ 9 ರ ತನಕ ವಿಸ್ತರಣೆ ಕೇಳಿದೆ ಎಂದು ಅವರು ಹೇಳಿದ್ದಾರೆ.



ಮೇ 10 ಕ್ಕೆ ಚುನಾವಣಾ. ಮೇ 8 ಕ್ಕೆ ಚುನಾವಣಾ ಪ್ರಚಾರ ಮುಕ್ತಾಯವಾಗುತ್ತದೆ. ಸುಪ್ರೀಮ ಕೋರ್ಟನಲ್ಲಿ ಅಲ್ಲಿಯವರೆಗೆ ಗಡುವು ಪಡೆದುಕೊಂಡರೆ ತಾವು ಮುಸ್ಲಿಂ ಮೀಸಲಾತಿ ರದ್ದು ಮಾಡಿ ಲಿಂಗಾಯತ -ಒಕ್ಕಲಿಗರಿಗೆ ಮೀಸಲಾತಿ ಹೆಚ್ಚಿಸಿದೆವು ಎಂದು ಪ್ರಚಾರ ಮಾಡುತ್ತಾ ಲಿಂಗಾಯತ ಮತ್ತು ಒಕ್ಕಲಿಗರಿಬ್ಬರಿಗೂ ವಂಚಿಸುತ್ತಿರಬಹುದು. ಈ ಚುನಾವಣಾ ಕುತಂತ್ರದ ಭಾಗವಾಗಿಯೇ ಬಿಜೆಪಿ ಸರ್ಕಾರ ಮೇ 9ರ ತನಕ ಗಡುವು ಕೇಳಿದೆ ಎಂದು ಶಿವಸುಂದರ ಬರೆದಿದ್ದಾರೆ.



ಇದಲ್ಲದೆ ವಿಚಾರಣೆಯಲ್ಲಿ ಮೇ 9 ರ ತನಕ ವಿಸ್ತರಣೆ ಕೇಳುವುದಾದರೆ ಅಲ್ಲಿಯತನಕ ತಡೆಯಾಜ್ಞೆ ಕೊಡಬೇಕು ಎಂದು ಅಹವಾಲುದಾರ ಪರ ವಕೀಲರು ಕೇಳಿದಾಗ: “ಅದರ ಅಗತ್ಯವಿಲ್ಲ. ನಾವು ಅಲ್ಲಿಯ ತನಕ ಹೊಸ ನೀತಿಯನ್ನು ಜಾರಿ ಮಾಡುವುದಿಲ್ಲ” ಎಂದಷ್ಟೇ ಸರ್ಕಾರಿ ವಕೀಲರು ಹೇಳಿದ್ದಾರೆ. ಆದರೆ ಅಹವಾಲುದಾರ ಪರ ವಕೀಲರು ಅಷ್ಟು ಸಾಲುವುದಿಲ್ಲ. ಬದಲಿಗೆ ಹೊಸ ನೀತಿ ಜಾರಿ ಮಾಡದಿರುವುದರ ಜೊತೆಗೆ 2002 ರಲ್ಲಿ ಜಾರಿಯಾದ ಹಳೆಯ ನೀತಿಯನ್ನೇ ಜಾರಿ ಮಾಡುತ್ತೇವೆ ಎಂದು ಸರ್ಕಾರ ಭರವಸೆ ಕೊಡಬೇಕು ಎಂದು ಬಲವಾಗಿ ವಾದಿಸಿದರು. ಅನಿವಾರ್ಯವಾಗಿ ಸರ್ಕಾರಿ ವಕೀಲರು ಅದನ್ನು ಒಪ್ಪಿಕೊಳ್ಳಬೇಕಾಯಿತು ಎಂದು ಅವರು ವಿವರಿಸಿದ್ದಾರೆ.



ಹೀಗಾಗಿ ನ್ಯಾಯಾಧೀಶರು ಇವತ್ತಿನ ತಮ್ಮ ಆದೇಶದಲ್ಲಿ ಮುಂದಿನ ವಿಚಾರಣೆಯನ್ನು ಮೇ 9ಕ್ಕೆ ಮುಂದೂಡಿರುವುದರ ಜೊತೆಗೆ ಸರ್ಕಾರಿ ವಕೀಲರು ಮುಂದಿನ ವಿಚಾರಣೆಯ ತನಕ ಹೊಸ ನೀತಿಯನ್ನು ಜಾರಿ ಮಾಡದೇ ಹಳೆ ಆದೇಶವನ್ನೇ ಅಂದರೆ ಮುಸ್ಲಿಮರಿಗೆ ಶೇ. 4ರ ಮೀಸಲಾತಿ ಆದೇಶವನ್ನೇ ಮೇ 9ರವರೆಗೆ ಮುಂದುವರೆಸುವುದಾಗಿ ಭರವಸೆ ಕೊಟ್ಟಿರುವುದನ್ನು ದಾಖಲಿಸಿದ್ದಾರೆ. ಅಂದರೆ ಬಿಜೆಪಿ ಸರ್ಕಾರದ ಮಾರ್ಚ್ 23 ರ ಮುಸ್ಲಿಂ ಮೀಸಲಾತಿ ರದ್ದಿನ ಆದೇಶಕ್ಕೆ ಸುಪ್ರೀಮ ಕೋರ್ಟ ಮೇ 9 ರತನಕ ತಡೆಯಾಜ್ಞೆಯನ್ನೇ ಕೊಟ್ಟಂತಾಗಿದೆ ಎಂದು ಅವರು ಹೇಳಿದ್ದಾರೆ.



ಆದರೆ ಹಾಗೆ ಒಪ್ಪಿಕೊಂಡರೆ ಚುನಾವಣೆಯಲ್ಲಿ ತಮ್ಮ ಮುಸ್ಲಿಮ ವಿರೋಧಿ ಪ್ರಚಾರಕ್ಕೆ ಪೆಟ್ಟು ಬೀಳುತ್ತದೆ ಎಂದು ಬಿಜೆಪಿ ಮಾತುಗಳ ಕಸರತ್ತನ್ನು ಮಾಡುತ್ತಿದೆ. ಹೀಗಾಗಿ ಮಾರ್ಚ 23ರ ಮುಸ್ಲಿಂ ಮೀಸಲಾತಿ ಕಿತ್ತು ಲಿಂಗಾಯತ ಮತ್ತು ಒಕ್ಕಲಿಗರಿಗೆ ಹಂಚುವ ಬಿಜೆಪಿ ಸರ್ಕಾರದ ಆದೇಶ ಮೇ 9ರ ತನಕವಂತೂ ಜಾರಿಯಲ್ಲಿರುವುದಿಲ್ಲ. ಇದರ ಬಗ್ಗೆ ಬಿಜೆಪಿ ಏನೇ ಹೇಳಿದರೂ ಅದು ಸುಳ್ಳು ಪ್ರಚಾರವೇ ಆಗಿರುತ್ತದೆ. ಎಲ್ಲಕಿಂತ ಹೆಚ್ಚಾಗಿ ಬಿಜೆಪಿ ಸರ್ಕಾರ ಸುಪ್ರೀಮ ಕೋರ್ಟಿನಲ್ಲಿ ತನ್ನ ಈ ಕೋಮುವಾದಿ ಆದೇಶವನ್ನು ಸಮರ್ಥಿಸಿಕೊಳ್ಳಲು ಆಗುವುದಿಲ್ಲ ಎಂದು ಗೊತ್ತಾಗಿದೆ, ಹೀಗಾಗಿಯೇ ವಿಚಾರಣೆಯನ್ನು ಪದೇಪದೇ ಮುಂದೂಡುತ್ತಿದೆ. ಈಗಲಾದರೂ ಕರ್ನಾಟಕದ ಜನ ಬಿಜೆಪಿಯ ಈ ಕುತಂತ್ರಿ, ಕೋಮುವಾದಿ ಚುನಾವಣಾ ಪ್ರಚಾರಗಳನ್ನು ಅರ್ಥ ಮಾಡಿಕೊಳ್ಳುವರೇ ಎಂದು ಶಿವಸುಂದರ್ ಹೇಳಿದ್ದಾರೆ.
Author
A B Dharwadkar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST