ನವದೆಹಲಿ, ಜೂನ್ 17: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಅವರ ಹೊಸ ತಂಡವನ್ನು ಮುಂದಿನ ಕೆಲ ದಿನಗಳಲ್ಲಿ ಘೋಷಿಸುವ ಸಾಧ್ಯತೆ ಇದ್ದು, ಈ ಸಂಬಂಧ ಹಿರಿಯ ಬಿಜೆಪಿ ನಾಯಕರು ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಪ್ರತಿನಿಧಿಗಳು ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರ ನಿವಾಸದಲ್ಲಿ ಮಹತ್ವದ ಸಭೆ ನಡೆಸಿದ್ದಾರೆ.
ಸುಮಾರು ನಾಲ್ಕು ಗಂಟೆಗಳ ಕಾಲ ನಡೆದ ಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಆರ್‌ಎಸ್‌ಎಸ್‌ನ ಅಖಿಲ ಭಾರತೀಯ ಸಹ ಕಾರ್ಯವಾಹ ಅರುಣ ಕುಮಾರ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿ.ಎಲ್. ಸಂತೋಷ ಭಾಗವಹಿಸಿದ್ದರು.
ಸಭೆಯ ಕುರಿತು ಯಾವುದೇ ಅಧಿಕೃತ ಮಾಹಿತಿ ಪ್ರಕಟವಾಗದಿದ್ದರೂ, ಬಿಜೆಪಿ ಸಂಘಟನೆಯ ಪುನರ್‌ರಚನೆ ಮತ್ತು ನಿತಿನ್ ನಬಿನ್ ನೇತೃತ್ವದ ಹೊಸ ರಾಷ್ಟ್ರೀಯ ತಂಡದ ರಚನೆ ಕುರಿತು ಸಮಾಲೋಚನೆ ನಡೆದಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ದೆಹಲಿ ಬಿಜೆಪಿ ಘಟಕ ಸೇರಿದಂತೆ ಹಲವು ರಾಜ್ಯ ಘಟಕಗಳಲ್ಲೂ ಹಾಗೂ ರಾಷ್ಟ್ರೀಯ ಸಂಘಟನೆಯಲ್ಲೂ ಬದಲಾವಣೆಗಳು ನಡೆಯುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಈ ಸಭೆ ಮಹತ್ವ ಪಡೆದುಕೊಂಡಿದೆ. ಮುಂಬರುವ ದಿನಗಳಲ್ಲಿ ಪಕ್ಷದ ಪ್ರಮುಖ ಹುದ್ದೆಗಳಿಗೆ ನೇಮಕಾತಿ ಹಾಗೂ ಜವಾಬ್ದಾರಿಗಳ ಹಂಚಿಕೆ ಕುರಿತು ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.
ನಿತಿನ್ ನಬಿನ್ ಬಿಜೆಪಿ ಇತಿಹಾಸದಲ್ಲೇ ಅತ್ಯಂತ ಕಿರಿಯ ರಾಷ್ಟ್ರೀಯ ಅಧ್ಯಕ್ಷರಾಗಿರುವ ಹಿನ್ನೆಲೆಯಲ್ಲಿ, ಅವರ ಹೊಸ ತಂಡದಲ್ಲಿ ಯುವ ನಾಯಕರಿಗೆ ಹೆಚ್ಚಿನ ಅವಕಾಶ ಸಿಗುವ ನಿರೀಕ್ಷೆಯಿದೆ. ಸಂಘಟನೆಯ ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಉದ್ದೇಶದಿಂದ ಹೊಸ ಮುಖಗಳು ಹಾಗೂ ಅನುಭವಿ ನಾಯಕರ ನಡುವೆ ಸಮತೋಲನ ಸಾಧಿಸಲು ಪಕ್ಷ ನಾಯಕತ್ವ ಮುಂದಾಗಿದೆ ಎನ್ನಲಾಗಿದೆ.
ಸಂಘಟನಾ ಪುನರ್‌ರಚನೆಯ ಭಾಗವಾಗಿ ಕೆಲ ನಾಯಕರನ್ನು ಪಕ್ಷದ ಸಂಘಟನಾ ಜವಾಬ್ದಾರಿಗಳಿಂದ ಸರ್ಕಾರದ ಹುದ್ದೆಗಳಿಗೆ ಹಾಗೂ ಕೆಲವರನ್ನು ಸರ್ಕಾರದಿಂದ ಸಂಘಟನೆಗೆ ವರ್ಗಾಯಿಸುವ ಸಾಧ್ಯತೆಯೂ ಇದೆ ಎಂದು ಮೂಲಗಳು ತಿಳಿಸಿವೆ.
ಇದರ ಜತೆಗೆ ವಿವಿಧ ಜಾತಿ, ಸಮುದಾಯ ಮತ್ತು ಪ್ರಾದೇಶಿಕ ಹಿನ್ನೆಲೆಯ ನಾಯಕರಿಗೆ ಅವಕಾಶ ನೀಡುವ ಮೂಲಕ ಪಕ್ಷದ ಸಾಮಾಜಿಕ ಸಮತೋಲನವನ್ನು ಹೊಸ ತಂಡದಲ್ಲಿ ಪ್ರತಿಬಿಂಬಿಸುವ ಪ್ರಯತ್ನ ನಡೆಯುತ್ತಿದೆ ಎನ್ನಲಾಗಿದೆ.
ಸಭೆಯಲ್ಲಿ ಆರ್‌ಎಸ್‌ಎಸ್ ಪರವಾಗಿ ಭಾಗವಹಿಸಿದ್ದ ಅರುಣ್ ಕುಮಾರ್ ಅವರು ಸಂಘದ ಅಭಿಪ್ರಾಯಗಳು ಮತ್ತು ಸಲಹೆಗಳನ್ನು ಹಂಚಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಪಕ್ಷದ ಮೂಲಗಳ ಪ್ರಕಾರ, ನಿತಿನ್ ನಬಿನ್ ಅವರು ಜೂನ್ 20 ಅಥವಾ 21ರಂದು ತಮ್ಮ ಹೊಸ ರಾಷ್ಟ್ರೀಯ ತಂಡವನ್ನು ಘೋಷಿಸುವ ಸಾಧ್ಯತೆ ಇದೆ. ಇದೇ ವೇಳೆ, ಎನ್‌ಡಿಎ ಸರ್ಕಾರದ ಮೂರನೇ ಅವಧಿಗೆ ಎರಡು ವರ್ಷ ಪೂರ್ಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಸಂಪುಟದಲ್ಲಿಯೂ ಪುನರ್‌ರಚನೆ ನಡೆಯುವ ಸಾಧ್ಯತೆಗಳ ಕುರಿತು ರಾಜಕೀಯ ವಲಯದಲ್ಲಿ ಚರ್ಚೆಗಳು ನಡೆಯುತ್ತಿವೆ.
ಹೊಸ ತಂಡದಲ್ಲಿ ಅನುಭವಿ ಸಂಘಟನಾ ಕಾರ್ಯಕರ್ತರು, ಯುವ ನಾಯಕರು ಹಾಗೂ ಮಹಿಳೆಯರಿಗೆ ಸಮರ್ಪಕ ಪ್ರಾತಿನಿಧ್ಯ ನೀಡುವ ಸಾಧ್ಯತೆ ಇದ್ದು, ಪಕ್ಷದ ವಿಸ್ತರಣೆ ಮತ್ತು ಸಾಮಾಜಿಕ ವ್ಯಾಪ್ತಿಯನ್ನು ಹೆಚ್ಚಿಸುವ ಗುರಿಯೊಂದಿಗೆ ಸಂಘಟನಾ ಬದಲಾವಣೆಗಳನ್ನು ಕೈಗೊಳ್ಳುವ ನಿರೀಕ್ಷೆಯಿದೆ.