ವಿಜಯಪುರ, ಮೇ 15 : ವಿಜಯಪುರ ಜಿಲ್ಲೆ ಆಲಮೇಲ ತಾಲೂಕಿನ ಮೋರಟಗಿ ಗ್ರಾಮದಲ್ಲಿ ಭಾರಿ ಗಾಳಿ-ಮಳೆಗೆ ಮನೆಯ ಮೇಲ್ಚಾವಣಿ ಹಾಗೂ ಗೋಡೆ ಕುಸಿದು ಒಂದೇ ಕುಟುಂಬದ 4 ಮಂದಿ ಮೃತಪಟ್ಟ ದಾರುಣ ಘಟನೆ ಗುರುವಾರ ತಡರಾತ್ರಿ ನಡೆದಿದೆ.
ಮೃತರನ್ನು ಗುರುನಾಥ ಬಡಿಗೇರ(35), ಜ್ಯೋತಿ ಬಡಿಗೇರ(28), ಮಕ್ಕಳಾದ ಕಾಳಮ್ಮ ಬಡಿಗೇರ(13) ಹಾಗೂ ಕೀರ್ತಿ ಬಡಿಗೇರ(9) ಎಂದು ಗುರುತಿಸಲಾಗಿದೆ.
ಗುರುವಾರ ರಾತ್ರಿ ಸುಮಾರು 1.30ರ ವೇಳೆಗೆ ಈ ದುರ್ಘಟನೆ ಸಂಭವಿಸಿದೆ. ತಮ್ಮ ಸ್ವಂತ ಮನೆಯ ದುರಸ್ತಿ ಕಾಮಗಾರಿ ಹಿನ್ನೆಲೆ ಕುಟುಂಬ ಇತ್ತೀಚೆಗೆ ಬಾಡಿಗೆ ಮನೆಗೆ ಸ್ಥಳಾಂತರಗೊಂಡಿತ್ತು ಎಂದು ತಿಳಿದುಬಂದಿದೆ.
ಮಾಹಿತಿ ತಿಳಿಯುತ್ತಿದ್ದಂತೆ ಸಿಂದಗಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಗ್ನಿಶಾಮಕ ದಳದ ಸಿಬ್ಬಂದಿ ಕಲ್ಲು-ಮಣ್ಣಿನಡಿ ಸಿಲುಕಿದ್ದ ಮೃತದೇಹಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ರವಾನಿಸಿದರು.