ಮೈಸೂರು, ಆ. 1: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಮೈಸೂರು ಭೇಟಿಯನ್ನು ವಿರೋಧಿಸಿ 'ಗೋ ಬ್ಯಾಕ್ ಮೋದಿ' ಚಳುವಳಿ ನಡೆಸಲು ಮುಂದಾಗಿದ್ದ ದಲಿತ ಸಂಘರ್ಷ ಸಮಿತಿ (ದಸಂಸ) ಮುಖಂಡರು ಹಾಗೂ ಕಾರ್ಯಕರ್ತರನ್ನು ಪೊಲೀಸರು ಶನಿವಾರ ಮುಂಜಾಗ್ರತಾ ಕ್ರಮವಾಗಿ ವಶಕ್ಕೆ ಪಡೆದರು.
ನಗರದ ನಾರಾಯಣ ಶಾಸ್ತ್ರಿ ರಸ್ತೆಯಲ್ಲಿರುವ ವಿವೇಕ ಸ್ಮಾರಕದ ಉದ್ಘಾಟನೆಗಾಗಿ ಪ್ರಧಾನಿ ನರೇಂದ್ರ ಮೋದಿ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ, ಮಾನಸಗಂಗೋತ್ರಿಯ ಕ್ಲಾಕ್ ಟವರ್‌ನಿಂದ ವಿವೇಕ ಸ್ಮಾರಕದವರೆಗೆ ಪ್ರತಿಭಟನಾ ಜಾಥಾ ಹಮ್ಮಿಕೊಳ್ಳಲು ದಸಂಸ ನಿರ್ಧರಿಸಿತ್ತು. ಆದರೆ ಪ್ರತಿಭಟನೆ ಆರಂಭವಾಗುವ ಮುನ್ನವೇ ಕ್ಲಾಕ್ ಟವರ್ ಬಳಿ ಜಮಾಯಿಸಿದ್ದ ಮುಖಂಡರು ಮತ್ತು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದು ಸ್ಥಳದಿಂದ ಕರೆದೊಯ್ದರು.
ಇದಕ್ಕೂ ಮುನ್ನ ದಸಂಸ ಜಿಲ್ಲಾ ಸಂಚಾಲಕ ಚೋರನಹಳ್ಳಿ ಶಿವಣ್ಣ ಅವರನ್ನು ಶುಕ್ರವಾರ ರಾತ್ರಿ ಆಲನಹಳ್ಳಿ ಪೊಲೀಸರು ಅವರ ನಿವಾಸದಲ್ಲೇ ವಶಕ್ಕೆ ಪಡೆದಿದ್ದರು. ಆದರೂ ದಸಂಸ ರಾಜ್ಯ ಸಂಚಾಲಕ ಎಡದೊರೆ ಮಹದೇವಯ್ಯ ಅವರ ನೇತೃತ್ವದಲ್ಲಿ ಕಾರ್ಯಕರ್ತರು ಮಾನಸಗಂಗೋತ್ರಿಯ ಕ್ಲಾಕ್ ಟವರ್ ಬಳಿ ಸೇರಿ 'ಗೋ ಬ್ಯಾಕ್ ಮೋದಿ' ಚಳುವಳಿ ನಡೆಸಲು ಮುಂದಾದರು.
ಪ್ರತಿಭಟನೆ ನಡೆಯದಂತೆ ಪೊಲೀಸರು ಒಂದು ಗಂಟೆಗೂ ಹೆಚ್ಚು ಕಾಲ ದಸಂಸ ಮುಖಂಡರೊಂದಿಗೆ ಮಾತುಕತೆ ನಡೆಸಿದರು. ಜಾಥಾ ನಡೆಸುವುದಿಲ್ಲ, ಕೇವಲ ಹತ್ತು ನಿಮಿಷಗಳ ಕಾಲ ಪ್ರತಿಭಟನೆಗೆ ಅವಕಾಶ ನೀಡುವಂತೆ ಪ್ರತಿಭಟನಾಕಾರರು ಮನವಿ ಮಾಡಿದರೂ ಪೊಲೀಸರು ಅನುಮತಿ ನಿರಾಕರಿಸಿದರು.
ಹೋರಾಟ ನಡೆಸುವುದು ಪ್ರಜಾಪ್ರಭುತ್ವದ ಹಕ್ಕಾಗಿದ್ದು, ಅದಕ್ಕೆ ಅವಕಾಶ ನೀಡಬೇಕು. ಪ್ರತಿಭಟನೆಗಳನ್ನು ಹತ್ತಿಕ್ಕುವುದು ಸರಿಯಲ್ಲ ಎಂದು ದಸಂಸ ರಾಜ್ಯ ಸಂಚಾಲಕ ಎಡದೊರೆ ಮಹದೇವಯ್ಯ ಆಗ್ರಹಿಸಿದರು.
ನೀಟ್ ಹಗರಣದಿಂದ 21 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದರೂ ಅವರ ಕುಟುಂಬಗಳಿಗೆ ಸಮರ್ಪಕ ಪರಿಹಾರ ಅಥವಾ ಸರ್ಕಾರಿ ಉದ್ಯೋಗ ಕಲ್ಪಿಸಿಲ್ಲ. ಅಲ್ಲದೆ, ರಾಮಕೃಷ್ಣ ಆಶ್ರಮವು ಎನ್‌ಟಿಎಂ ಹೆಣ್ಣು ಮಕ್ಕಳ ಶಾಲೆ ಇದ್ದ ಜಾಗದಲ್ಲಿ ನೀಡಿದ್ದ ಭರವಸೆಗೆ ವಿರುದ್ಧವಾಗಿ ವಿವೇಕ ಸ್ಮಾರಕ ನಿರ್ಮಿಸಿದೆ. ಇಂತಹ ಪರಿಸ್ಥಿತಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸ್ಮಾರಕ ಉದ್ಘಾಟನೆಗೆ ಆಗಮಿಸುತ್ತಿರುವುದನ್ನು ವಿರೋಧಿಸಿ 'ಗೋ ಬ್ಯಾಕ್ ಮೋದಿ' ಚಳುವಳಿ ಹಮ್ಮಿಕೊಳ್ಳಲಾಗಿದೆ ಎಂದು ಅವರು ಹೇಳಿದರು.
ಬಳಿಕ ಪ್ರತಿಭಟನೆಗೆ ಮುಂದಾಗಿದ್ದ ದಸಂಸ ಮುಖಂಡರು ಹಾಗೂ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದು ಪೊಲೀಸ್ ವ್ಯಾನ್‌ನಲ್ಲಿ ಸಿಎಆರ್ ಮೈದಾನಕ್ಕೆ ಕರೆದೊಯ್ದರು. ಈ ವೇಳೆ ಪ್ರತಿಭಟನಾಕಾರರು "ಬೇಕೆ ಬೇಕು, ನ್ಯಾಯ ಬೇಕು", "ಗೋ ಬ್ಯಾಕ್ ಮೋದಿ" ಎಂದು ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
