LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureEditorialBeautyRecipes

ಮೊದಲ ಬಾರಿಗೆ ರಾಜ್ಯದಲ್ಲಿ ಭೂಸ್ವಾಧೀನ, ಪುನಶ್ಚೇತನ ಹಾಗೂ ಪರಿಹಾರ ಪ್ರಾಧಿಕಾರ ರಚಿಸಲು ತೀರ್ಮಾನ

ಬೆಂಗಳೂರು:



“ಕೃಷ್ಣಾ ಮೇಲ್ದಂಡೆ 3ನೇ ಹಂತದ ಯೋಜನೆಯಡಿ ಮುಳುಗಡೆಯಾಗುವ ಪ್ರತಿ ಎಕರೆ ನೀರಾವರಿ ಜಮೀನಿಗೆ ರೂ.40 ಲಕ್ಷ ಹಾಗೂ ಒಣ ಜಮೀನಿಗೆ ಪ್ರತಿ ಎಕರಿಗೆ ರೂ.30 ಲಕ್ಷ. ಕಾಲುವೆಗಾಗಿ ಸ್ವಾಧೀನಪಡಿಸಿಕೊಳ್ಳುವ ಭೂಮಿ ಪೈಕಿ ನೀರಾವರಿ ಜಮೀನಿಗೆ ಪ್ರತಿ ಎಕರೆಗೆ ರೂ.30 ಲಕ್ಷ ಹಾಗೂ ಒಣ ಜಮೀನಿಗೆ ಪ್ರತಿ ಎಕರಿಗೆ ರೂ.25 ಲಕ್ಷ ಪರಿಹಾರ ನೀಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.



ವಿಧಾನಸೌಧದಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆ ಹಂತ 3ರ ಭೂಸ್ವಾಧೀನ ಪ್ರಕ್ರಿಯೆ ತ್ವರಿತಗೊಳಿಸಲು ಮಂಗಳವಾರ ಕರೆಯಲಾಗಿದ್ದ ವಿಶೇಷ ಸಚಿವ ಸಂಪುಟ ಸಭೆ ಬಳಿಕ ಜಲಸಂಪನ್ಮೂಲ ಸಚಿವರೂ ಆಗಿರುವ ಡಿ.ಕೆ. ಶಿವಕುಮಾರ್ ಅವರು ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದರು.



“ಸ್ಥಳೀಯ ಜನಪ್ರತಿನಿಧಿಗಳು, ರೈತರು, ಸಚಿವರ ಅಭಿಪ್ರಾಯ ಪಡೆದು ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ಇನ್ನು ಈ ಪರಿಹಾರ ದರವು ಕೇವಲ ಕೃಷ್ಣಾ ಭಾಗ್ಯ ಜಲನಿಗಮ ವ್ಯಾಪ್ತಿಯ ಯುಕೆಪಿ 3ನೇ ಹಂತದ ಯೋಜನೆ ಪ್ರದೇಶಕ್ಕೆ ಮಾತ್ರ ಸೀಮಿತವಾಗಲಿದೆ. ಅಧಿಸೂಚನೆ ಹೊರಡಿಸುವುದು ತಡವಾಗುತ್ತಿರುವ ಹಿನ್ನೆಲೆಯಲ್ಲಿ ಇತರೆ ಪ್ರಕ್ರಿಯೆಗಳು ವಿಳಂಬವಾಗಬಾರದು ಎಂಬ ಕಾರಣಕ್ಕೆ ಸರ್ಕಾರ ಭೂಸ್ವಾಧೀನ ಪ್ರಕ್ರಿಯೆಗೆ ಮುಂದಾಗಿದೆ. ಈ ಯೋಜನೆಯಲ್ಲಿ ರೂ.70 ಸಾವಿರ ಕೋಟಿ ಕೇವಲ ಭೂಸ್ವಾಧೀನ ಪ್ರಕ್ರಿಯೆಗೆ ವ್ಯಯವಾಗಲಿದೆ. ಈ ಪ್ರಕ್ರಿಯೆಯನ್ನು ರೈತರ ಒಪ್ಪಿಗೆ ಹಾಗೂ ನೇರವಾಗಿ ಖರೀದಿ ಮೂಲಕ 3 ವರ್ಷಗಳ ಅವಧಿಯಲ್ಲಿ ಮುಗಿಸಲು ತೀರ್ಮಾನಿಸಲಾಗಿದೆ” ಎಂದು ತಿಳಿಸಿದರು.



“ಈ ಭಾಗದಲ್ಲಿ ದಿನೇ ದಿನೆ ಭೂಮಿ ಬೆಲೆ ಏರಿಕೆಯಾಗುತ್ತಿದೆ. ಈ ಹಿಂದೆ ಬೊಮ್ಮಾಯಿ ಅವರ ಸರ್ಕಾರವು ನೀರಾವರಿ ಜಮೀನಿಗೆ ಪ್ರತಿ ಎಕರೆಗೆ 24 ಲಕ್ಷ ಹಾಗೂ ಒಣ ಭೂಮಿಗೆ 20 ಲಕ್ಷ ಪರಿಹಾರ ನಿಗದಿ ಮಾಡಿತ್ತು. ಈ ವಿಚಾರವಾಗಿ ಸಂಪುಟ ಉಪಸಮಿತಿ ರಚಿಸಲಾಗಿತ್ತಾದರೂ ರೈತರು ಈ ತೀರ್ಮಾನಕ್ಕೆ ಒಪ್ಪಿಗೆ ನೀಡಿರಲಿಲ್ಲ. ಹೀಗಾಗಿ ಈ ತೀರ್ಮಾನವನ್ನು ಜಾರಿಗೊಳಿಸಲು ಸಾಧ್ಯವಾಗಲಿಲ್ಲ. ಈ ಯೋಜನೆಯ ಎಲ್ಲಾ ಭೂಸ್ವಾಧೀನ ಪ್ರಕ್ರಿಯೆಯನ್ನು ಒಂದೇ ಹಂತದಲ್ಲಿ ಮಾಡಲು ತೀರ್ಮಾನಿಸಿದ್ದೇವೆ” ಎಂದು ತಿಳಿಸಿದರು.



 



“ಈ ಯೋಜನೆಗೆ 1,33,867 ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳಬೇಕಾಗಿದ್ದು, ಈ ಪೈಕಿ 75,563 ಎಕರೆ ಮುಳುಗಡೆಯಾಗಲಿದ್ದು, ಕಾಲುವೆಗಾಗಿ 51,837 ಎಕರೆ ಭೂಮಿ ಅಗತ್ಯವಿದೆ. ಇನ್ನು ಪುನಶ್ಚೇತನ ಕಾರ್ಯಕ್ಕೆ 6,467 ಎಕರೆ ಜಮೀನು ಬೇಕಾಗಿದೆ. ಈ ಯೋಜನೆಗೆ ಅಗತ್ಯವಿರುವ ಭೂಮಿಯನ್ನು 2013ರ ಭೂಸ್ವಾಧೀನ ಕಾಯ್ದೆ ಅನ್ವಯ ಸ್ವಾಧೀನಪಡಿಸಿಕೊಳ್ಳಲಾಗುವುದು. ಈ ಪ್ರಕ್ರಿಯೆಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಅನೇಕ ಪ್ರಕರಣಗಳು ವಿಚಾರಣೆ ನಡೆಯುತ್ತಿದೆ. ಸುಮಾರು 20 ಸಾವಿರ ಪ್ರಕರಣಗಳು ನ್ಯಾಯಾಲಯದ ಮೆಟ್ಟಿಲೇರಿವೆ. ಈ ಕಾಯ್ದೆಯಲ್ಲಿ ನೀಡಲಾಗಿರುವ ಅವಕಾಶದ ಪ್ರಕಾರ ಈ ಪ್ರಕರಣಗಳನ್ನು ರಾಜಿ ಸಂಧಾನ ಕಾನೂನು ಪ್ರಕಾರ ಇವುಗಳನ್ನು ಇತ್ಯರ್ಥ ಮಾಡಿಕೊಳ್ಳಲು ತೀರ್ಮಾನಿಸಲಾಗಿದೆ. ನ್ಯಾಯಾಲಯದಲ್ಲಿ ಪ್ರಕರಣವಿಲ್ಲದ ಜಮೀನುಗಳನ್ನು ರೈತರಿಂದ ನೇರವಾಗಿ ಖರೀದಿ ಮಾಡಲಾಗುವುದು” ಎಂದು ಮಾಹಿತಿ ನೀಡಿದರು.



“ಪುನಶ್ಚೇತನ ಕಾರ್ಯಕ್ಕೆ ಸಂಬಂಧಿಸಿದಂತೆ ಪ್ರಮುಖ ಪ್ರಕರಣಗಳಿರುವ ಕಾರಣ, ನಾವು ಈ ವಿಚಾರದಲ್ಲಿ ಹೊಸ ನೀತಿ ರೂಪಿಸಲು ತೀರ್ಮಾನಿಸಿದ್ದೇವೆ. ಈ ವಿಚಾರವಾಗಿ ಸ್ಥಳೀಯ ನಾಯಕರು, ರೈತರ ಅಭಿಪ್ರಾಯ ಪಡೆಯಲಾಗುವುದು. ನ್ಯಾಯಯುತ ಪರಿಹಾರ, ಭೂಸ್ವಾಧೀನ ಪಾರದರ್ಶಕತೆ ಹಕ್ಕು ಕಾಯ್ದೆಯ ಸೆಕ್ಷನ್ 51ರ ಅಡಿಯಲ್ಲಿ ಭೂಸ್ವಾಧೀನ, ಪುನಶ್ಚೇತನ ಹಾಗೂ ಪರಿಹಾರ ಪ್ರಾಧಿಕಾರ ರಚಿಸಲು ಅವಕಾಶವಿದೆ. ಹೀಗಾಗಿ ರಾಜ್ಯ ಸರ್ಕಾರ ಮೊದಲ ಬಾರಿಗೆ ಈ ಪ್ರಾಧಿಕಾರವನ್ನು ರಚಿಸಲಿದೆ. ಮುಖ್ಯನ್ಯಾಯಮೂರ್ತಿಗಳು ನೇಮಕ ಮಾಡುವ ನ್ಯಾಯಾಧೀಶರ ನೇತೃತ್ವದಲ್ಲಿ ಈ ಪ್ರಾಧಿಕಾರವನ್ನು ರಚಿಸಲಾಗುವುದು” ಎಂದು ತಿಳಿಸಿದರು.



“ರೈತರ ಬದುಕಿಗೆ ಹೊಸ ರೂಪ ನೀಡಿ, ನೆನೆಗುದಿಗೆ ಬಿದ್ದಿರುವ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸುವುದು ನಮ್ಮ ಸರ್ಕಾರದ ಸಂಕಲ್ಪ. ಕೃಷ್ಣಾ ಮೇಲ್ದಂಡೆ 3ನೇ ಹಂತದ ಯೋಜನೆ ಜಾರಿಗೆ ಸಂಬಂಧಿಸಿದಂತೆ ಇಂದು ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ನೀರಾವರಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕರ್ನಾಟಕದ ಇತಿಹಾಸದಲ್ಲೇ ಮಹತ್ತರ ತೀರ್ಮಾನ ಕೈಗೊಂಡಿದೆ. 30-12-2020ರಲ್ಲಿ ಕೃಷ್ಣಾ ನೀರು ವಿವಾದ ನ್ಯಾಯಾಧೀಕರಣದಲ್ಲಿ ಕರ್ನಾಟಕ ರಾಜ್ಯಕ್ಕೆ ತನ್ನ ಪಾಲಿನ ನೀರು ಹಂಚಿಕೆಯಾಗಿದ್ದು, ಇದರ ಅಂತಿಮ ವರದಿ 29-11-2013ರಲ್ಲಿ ನೀಡಲಾಗಿತ್ತು. ಆದರೂ ಇವತ್ತಿನವರೆಗೂ ಕೇಂದ್ರ ಸರ್ಕಾರ ಈ ವಿಚಾರವಾಗಿ ಗೆಜೆಟ್ ಅಧಿಸೂಚನೆ ಹೊರಡಿಸಿಲ್ಲ” ಎಂದು ತಿಳಿಸಿದರು.



 



“ಕರ್ನಾಟಕ ರಾಜ್ಯ ತನ್ನ ಪಾಲಿನ ನೀರನ್ನು ಪಡೆಯಲು ನಾನು ಹಾಗೂ ಮುಖ್ಯಮಂತ್ರಿಗಳು ಹಲವು ಬಾರಿ ಕೇಂದ್ರ ಜಲಶಕ್ತಿ ಸಚಿವರನ್ನು ಭೇಟಿ ಮಾಡಿ ಈ ವಿಚಾರವಾಗಿ ಮನವಿ ಮಾಡಿದ್ದೇವೆ. ನಮ್ಮ ಮನವಿಗೆ ಸ್ಪಂದಿಸಿರುವ ಕೇಂದ್ರ ಸಚಿವರು ಅಧಿಸೂಚನೆ ಹೊರಡಿಸಲು ತಾತ್ವಿಕ ಒಪ್ಪಿಗೆ ನೀಡಿದ್ದಾರೆ. ಕೇಂದ್ರ ಸಚಿವರು ಈ ವಿಚಾರವಾಗಿ ಎರಡು ಬಾರಿ ಸಭೆ ನಿಗದಿ ಮಾಡಿದ್ದರಾದರೂ ರಾಜಕೀಯ ಒತ್ತಡಗಳಿಂದಾಗಿ ಈ ಸಭೆ ಮುಂದೂಡಲಾಗಿತ್ತು. ಒಂದು ಬಾರಿ ಮಹಾರಾಷ್ಟ್ರ ಹಾಗೂ ಮತ್ತೊಂದು ಬಾರಿ ಆಂಧ್ರ ಪ್ರದೇಶದ ಒತ್ತಡದಿಂದ ಸಭೆ ಮುಂದೂಡಲಾಗಿದೆ. ಈ ವಿಚಾರದಲ್ಲಿ ಆತಂಕ ಪಡುವ ಅಗತ್ಯವಿಲ್ಲ. ಮತ್ತೊಂದು ದಿನಾಂಕ ನಿಗದಿ ಮಾಡಿ ಸಭೆ ಮಾಡೋಣ ಎಂದು ಕೇಂದ್ರ ಸಚಿವರು ಪತ್ರ ಬರೆದಿದ್ದಾರೆ. ಹೀಗಾಗಿ ನಾವು ಯೋಜನೆ ಜಾರಿಗಾಗಿ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ” ಎಂದು ಹೇಳಿದರು.



“ಈ ಮಧ್ಯೆ ಮಹಾರಾಷ್ಟ್ರ ಮುಖ್ಯಮಂತ್ರಿಗಳು ಆಲಮಟ್ಟಿ ಅಣೆಕಟ್ಟಿನ ಎತ್ತರ ಹೆಚ್ಚಳವನ್ನು ವಿರೋಧಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರುವುದಾಗಿ ಹೇಳಿದ್ದಾರೆ. ಈ ವಿಚಾರವಾಗಿ ನಾವು ಪ್ರತ್ಯೇಕವಾಗಿ ಹೋರಾಟ ಮಾಡುತ್ತೇವೆ. ಅದರ ಬಗ್ಗೆ ಸಧ್ಯಕ್ಕೆ ಚರ್ಚೆ ಮಾಡುವುದಿಲ್ಲ. ಈಗ ಬಂದಿರುವ ತೀರ್ಪಿನ ಪ್ರಕಾರ ನಮ್ಮ ಪಾಲಿನ ನೀರನ್ನು ಪಡೆಯುವುದು ನಮ್ಮ ಹಕ್ಕು. ನಮ್ಮ ರಾಜ್ಯದ ರೈತರ ಹಿತರಕ್ಷಣೆ ಮಾಡುವುದು ನಮ್ಮ ಕರ್ತವ್ಯವಾಗಿದ್ದು, ಈ ಯೋಜನೆಯಲ್ಲಿ ಭೂಮಿ ಕಳೆದುಕೊಳ್ಳುವ ಸಂತ್ರಸ್ತ ರೈತರನ್ನು ರಕ್ಷಣೆ ಮಾಡಲಾಗುವುದು” ಎಂದು ತಿಳಿಸಿದರು.



ಒಂದೆಡೆ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿಲ್ಲ, ಮತ್ತೊಂದೆಡೆ ನೆರೆ ರಾಜ್ಯಗಳ ಆಕ್ಷೇಪ ವ್ಯಕ್ತವಾಗುತ್ತಿರುವ ಬಗ್ಗೆ ಕೇಳಿದಾಗ, “ಮಹಾರಾಷ್ಟ್ರ ಸಿಎಂ ಸುಪ್ರೀಂ ಕೋರ್ಟ್ ಮೆಟ್ಟಿಲೇರುವುದಾಗಿ ಈಗಾಗಲೇ ಹೇಳಿಕೆ ನೀಡಿದ್ದಾರೆ. ಈ ಪ್ರಕರಣದಲ್ಲಿ ನ್ಯಾಯಾಧೀಕರಣದ ತೀರ್ಪು ಹೊರಬಂದಿದೆ. ಈ ವಿಚಾರದಲ್ಲಿ ಮಹಾರಾಷ್ಟ್ರ ಸಿಎಂಗೆ ಬೇರೆ ಆಯ್ಕೆ ಇಲ್ಲ. ಈ ಹಿಂದೆ ಮಹಾರಾಷ್ಟ್ರ ಈ ಯೋಜನೆಗೆ ಒಪ್ಪಿಗೆ ನೀಡಿತ್ತು. ಸಮುದ್ರಕ್ಕೆ ಸೇರುತ್ತಿರುವ ಹೆಚ್ಚುವರಿ ನೀರನ್ನು ಬಳಸಿಕೊಳ್ಳಲು ನಾವು ಮುಂದಾಗಿದ್ದೇವೆ. ಇನ್ನು ತೆಲಂಗಾಣ ಹಾಗೂ ಆಂಧ್ರಪ್ರದೇಶ ಈ ವಿಚಾರದಲ್ಲಿ ಒಪ್ಪಿಗೆ ನೀಡುವ ವಿಶ್ವಾಸವಿದೆ. ಈ ಯೋಜನೆಯಿಂದ ಎಲ್ಲಾ ರಾಜ್ಯಗಳ ರೈತರಿಗೂ ಪ್ರಯೋಜನವಾಗಲಿದೆ. ಈ ವಿಚಾರದಲ್ಲಿ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸುವುದೊಂದೇ ಬಾಕಿ ಇದೆ” ಎಂದು ತಿಳಿಸಿದರು.
Author
A B Dharwadkar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮುಸ್ಲಿಮರ 10 ಪ್ರಮುಖ ಬೇಡಿಕೆಗಳಿಗೆ ಸರಕಾರ ಸ್ಪಂದಿಸಲಿ: ಸಮಾವೇಶದಲ್ಲಿ ಒತ್ತಾಯಶಿವಂ ಅಸೋಸಿಯೇಟ್ಸ್ ಬಹುಕೋಟಿ ವಂಚನೆ : ಶಿವಾನಂದ ನೀಲಣ್ಣನವರ್‌ ಆಸ್ತಿ ಜಪ್ತಿ ಶುರುನೀಟ್‌ ಪ್ರಶ್ನೆಪತ್ರಿಕೆ ಸೋರಿಕೆ : ಎನ್‌ಟಿಎ ಪ್ರಶ್ನೆಪತ್ರಿಕೆ ಸಮಿತಿಯ ಜೀವಶಾಸ್ತ್ರ ಉಪನ್ಯಾಸಕಿ ಬಂಧನಮಾಲ್ಡೀವ್ಸ್‌ನಲ್ಲಿ ಕೇವ್‌ ಸ್ಕೂಬಾ ಡೈವಿಂಗ್ ದುರಂತ : ಇಟಲಿಯ 5 ಪ್ರಜೆಗಳ ಸಾವುಮುಂಜಾಗ್ರತಾ ಕ್ರಮವಾಗಿ ಪ್ರಧಾನಿ ಏನು ಮಾಡಿದ್ದಾರೆ : ಸಚಿವೆ ಹೆಬ್ಬಾಳ್ಕರ ಪ್ರಶ್ನೆಸುದೀರ್ಘ ವಿಚಾರಣೆ ನಂತರ ಶಿವಂ ಅಸೋಸಿಯೇಟ್ಸ ಶಿವಾನಂದ‌ ನೀಲಣ್ಣವರ ಬಂಧನ : ಸಾವಿರಾರು ಕೋಟಿ ಅಕ್ರಮ ಹಣ ಸಂಗ್ರಹ ಶಂಕೆಮೋದಿ ಸರಕಾರದ ‘ಅಚ್ಚೇ ದಿನ್’ ಜನ ನೋಡಲೇ ಇಲ್ಲKoppal | ಸೇತುವೆ ಮೇಲಿಂದ ಬಿದ್ದ ಟ್ರ್ಯಾಕ್ಟರ್ : 6 ಮಂದಿ ಸಾವುಡಿಸೇಲ್ ದರ ಏರಿಕೆ ಹೊಡೆತದ ಮೇಲೆ ಖಾಸಗಿ ಬಸ್ ಟಿಕೆಟ್ ದರ ಭಾರಿ ಹೆಚ್ಚಳದ ಪ್ರಹಾರಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ: ಇಂಧನ ಬೆಲೆ ಇಳಿದಾಗ ಲಕ್ಷಾಂತರ ಕೋಟಿ ಲಾಭ ಮಾಡಿಕೊಂಡ ಕಂಪನಿಗಳಿಂದ ಈಗ ಜನರ ಮೇಲೆ ಮತ್ತಷ್ಟು ಹೊರೆ