ರಾಮನಗರ, ಸೆ. 15 : ಟಿ.ನರಸೀಪುರದಲ್ಲಿ ಇನ್ಸ್‌ಪೆಕ್ಟರ್ ವಿರುದ್ಧ ಬಿಜೆಪಿ ನಾಯಕರು ನಡೆಸುತ್ತಿರುವ ಪ್ರತಿಭಟನೆ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ. ಬಾಲಕೃಷ್ಣ ತೀವ್ರ ವಾಗ್ದಾಳಿ ನಡೆಸಿದ್ದು, ಮಸೀದಿ ಬಳಿ ಪಟಾಕಿ ಹಚ್ಚಿ ಅನಗತ್ಯವಾಗಿ ಗೊಂದಲ ಸೃಷ್ಟಿಸುವ ಅಗತ್ಯವೇನಿದೆ ಎಂದು ಪ್ರಶ್ನಿಸಿದ್ದಾರೆ.
ರಾಮನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮದು ಸರ್ವಜನಾಂಗದ ಶಾಂತಿಯ ತೋಟ. ಎಲ್ಲ ಸಮುದಾಯದ ಜನರೂ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾರೆ. ಆದರೆ ಬಿಜೆಪಿ ನಾಯಕರು ವಿನಾಕಾರಣ ಗೊಂದಲ ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.
ಗಣೇಶ ಮೂರ್ತಿ ಪ್ರತಿಷ್ಠಾಪನೆ ಹಾಗೂ ಮೆರವಣಿಗೆ ವೇಳೆ ಅನುಸರಿಸಬೇಕಾದ ಮುನ್ನೆಚ್ಚರಿಕೆ ಮತ್ತು ನಿಯಮಗಳನ್ನು ಜವಾಬ್ದಾರಿಯಿಂದ ಪಾಲಿಸುವಂತೆ ಇನ್ಸ್‌ಪೆಕ್ಟರ್ ಸೂಚಿಸಿದ್ದರು. ಆದರೆ ಅವರ ಹೇಳಿಕೆಯ ಕೆಲವು ಭಾಗಗಳನ್ನು ಕತ್ತರಿಸಿ ಜೋಡಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಡಲಾಗಿದೆ ಎಂದು ಬಾಲಕೃಷ್ಣ ಹೇಳಿದರು.
ಯಾವುದೇ ಸಂಘರ್ಷ ನಡೆಯಬಾರದು ಎಂಬುದೇ ಪೊಲೀಸ್ ಇಲಾಖೆಯ ಉದ್ದೇಶ. ಇದರಲ್ಲಿ ಯಾವುದೇ ರಾಜಕೀಯವಿಲ್ಲ. ‘ಅನ್ಯ ಧರ್ಮೀಯರು ಆರ್. ಅಶೋಕ ಹಾಗೂ ಪ್ರತಾಪ ಸಿಂಹ ಅವರ ಮನೆ ಮುಂದೆ ಬಂದು ಪಟಾಕಿ ಹಚ್ಚಿ, ಡಿಜೆ ಹಾಕಿದರೆ ನೀವು ಸುಮ್ಮನಿರುತ್ತೀರಾ?’ ಎಂದು ಬಿಜೆಪಿ ನಾಯಕರನ್ನು ಪ್ರಶ್ನಿಸಿದರು.
ಸಮಾಜದಲ್ಲಿ ಶಾಂತಿ ಮತ್ತು ಸೌಹಾರ್ದ ಕಾಪಾಡುವುದು ಎಲ್ಲರ ಜವಾಬ್ದಾರಿಯಾಗಿದ್ದು, ಧಾರ್ಮಿಕ ಕಾರ್ಯಕ್ರಮಗಳನ್ನು ನೆಪವಾಗಿಟ್ಟುಕೊಂಡು ಅನಗತ್ಯ ವಿವಾದ ಸೃಷ್ಟಿಸುವುದು ಸರಿಯಲ್ಲ ಎಂದು ಬಾಲಕೃಷ್ಣ ಹೇಳಿದರು.