ಹೊಸದಿಲ್ಲಿ, ಜೂ. 1 : ನೀಟ್ ಯುಜಿ-2026 ಪ್ರಶ್ನೆಪತ್ರಿಕೆ ಸೋರಿಕೆ ವಿವಾದದ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ಜೂ. 6ರಂದು ಹೊಸದಿಲ್ಲಿಯ ಜಂತರ್ ಮಂತರ್‌ನಲ್ಲಿ ಶಾಂತಿಯುತ ಪ್ರತಿಭಟನೆ ನಡೆಸುವುದಾಗಿ ಕಾಕ್ರೋಚ್ ಜನತಾ ಪಕ್ಷದ ಸಂಸ್ಥಾಪಕ ಅಭಿಜೀತ್ ದಿಪ್ಕೆ ಘೋಷಿಸಿದ್ದಾರೆ.
ಅಮೆರಿಕದ ಬೋಸ್ಟನ್‌ನಲ್ಲಿ ನೆಲೆಸಿರುವ ದಿಪ್ಕೆ, ಭಾರತಕ್ಕೆ ಆಗಮಿಸಿದ ತಕ್ಷಣ ಪ್ರತಿಭಟನೆಯ ನೇತೃತ್ವ ವಹಿಸುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿರುವ ವಿಡಿಯೊ ಸಂದೇಶದಲ್ಲಿ ತಿಳಿಸಿದ್ದಾರೆ. ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಿಂದ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯಕ್ಕೆ ಧಕ್ಕೆಯಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಭಾರತದ ಸಂವಿಧಾನ ನೀಡಿರುವ ಹಕ್ಕಿನಡಿ ನಾಗರಿಕರು ಒಂದಾಗಿ ಸೇರಿ ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹಿಸುವ ಸಮಯ ಬಂದಿದೆ. ಈ ಹೋರಾಟ ಸಂಪೂರ್ಣ ಶಾಂತಿಯುತ ಹಾಗೂ ಪ್ರಜಾಪ್ರಭುತ್ವದ ಮಾರ್ಗದಲ್ಲಿ ನಡೆಯಲಿದೆ ಎಂದು ಅವರು ಹೇಳಿದ್ದಾರೆ.
ಆನ್‌ಲೈನ್ ಮನವಿಗೆ 8 ಲಕ್ಷಕ್ಕೂ ಅಧಿಕ ಬೆಂಬಲ
ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹಿಸಿ ಆರಂಭಿಸಲಾದ ಆನ್‌ಲೈನ್ ಮನವಿಗೆ ಈಗಾಗಲೇ 8 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಹಿ ಹಾಕಿದ್ದಾರೆ ಎಂದು ದಿಪ್ಕೆ ಹೇಳಿದ್ದಾರೆ. ಲಕ್ನೊ, ಜೈಪುರ, ಮಹಾರಾಷ್ಟ್ರ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ನಡೆದ ಪ್ರತಿಭಟನೆಗಳ ಮೂಲಕವೂ ಈ ಅಭಿಯಾನಕ್ಕೆ ಬೆಂಬಲ ವ್ಯಕ್ತವಾಗಿದೆ ಎಂದು ತಿಳಿಸಿದ್ದಾರೆ.
ನೀಟ್, ಸಿಬಿಎಸ್‌ಇ ಹಾಗೂ ಸಿಯುಇಟಿ ಸೇರಿದಂತೆ ವಿವಿಧ ರಾಷ್ಟ್ರೀಯ ಮಟ್ಟದ ಪರೀಕ್ಷೆಗಳ ನಿರ್ವಹಣೆಯಲ್ಲಿ ಉಂಟಾಗಿರುವ ಸಮಸ್ಯೆಗಳಿಂದ ಒಂದು ಕೋಟಿಗೂ ಹೆಚ್ಚು ವಿದ್ಯಾರ್ಥಿಗಳು ತೊಂದರೆ ಅನುಭವಿಸಿದ್ದಾರೆ ಎಂದು ಆರೋಪಿಸಿದ ಅವರು, ಇಷ್ಟೊಂದು ದೊಡ್ಡ ಪ್ರಮಾದದ ಬಳಿಕವೂ ಸಚಿವರು ರಾಜೀನಾಮೆ ನೀಡದಿದ್ದರೆ ಆಡಳಿತದಲ್ಲಿ ಉತ್ತರದಾಯಿತ್ವ ಉಳಿದಿಲ್ಲ ಎಂಬ ಸಂದೇಶ ರವಾನೆಯಾಗುತ್ತದೆ ಎಂದು ಹೇಳಿದ್ದಾರೆ.
ಜೂ. 6ರಂದು ಜಂತರ್ ಮಂತರ್‌ನಲ್ಲಿ ಪ್ರತಿಭಟನೆ
ಜೂ. 6ರಂದು ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಲು ಪೊಲೀಸರ ಅನುಮತಿ ಪಡೆಯಲಾಗುವುದು. ಪ್ರತಿಭಟನೆ ಸಂಪೂರ್ಣ ಅಹಿಂಸಾತ್ಮಕವಾಗಿರಲಿದ್ದು, ವಿದ್ಯಾರ್ಥಿಗಳು ಹಾಗೂ ಯುವಜನರು ತಮ್ಮ ಸಾಂವಿಧಾನಿಕ ಹಕ್ಕುಗಳನ್ನು ಚಲಾಯಿಸಿ ಭಾಗವಹಿಸಬೇಕು ಎಂದು ಅವರು ಕರೆ ನೀಡಿದ್ದಾರೆ.
ಬಂಧನದ ಸಾಧ್ಯತೆ ಕುರಿತು ಪ್ರತಿಕ್ರಿಯಿಸಿದ ದಿಪ್ಕೆ, ತಮ್ಮ ಕುಟುಂಬದವರು ಹಾಗೂ ಸ್ನೇಹಿತರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಭಾರತ ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು, ಶಾಂತಿಯುತ ಪ್ರತಿಭಟನೆಗೆ ಅವಕಾಶ ದೊರೆಯುತ್ತದೆ ಎಂಬ ವಿಶ್ವಾಸವಿದೆ ಎಂದು ಹೇಳಿದ್ದಾರೆ.
ದೇಶಕ್ಕಾಗಿ ಭಾರತಕ್ಕೆ ಮರಳುತ್ತಿದ್ದೇನೆ
ಮಹಾತ್ಮ ಗಾಂಧಿ, ಡಾ. ಬಿ.ಆರ್. ಅಂಬೇಡ್ಕರ್, ಭಗತ್ ಸಿಂಗ್ ಹಾಗೂ ಜವಾಹರಲಾಲ್ ನೆಹರೂ ಅವರ ಆದರ್ಶಗಳಿಂದ ಪ್ರೇರಿತನಾಗಿದ್ದೇನೆ. ಪ್ರಜಾಪ್ರಭುತ್ವದಲ್ಲಿ ಧ್ವನಿ ಎತ್ತುವ ಹಕ್ಕು ನೀಡಿರುವ ಭಾರತದ ಸಂವಿಧಾನದ ಮೇಲೆ ಸಂಪೂರ್ಣ ನಂಬಿಕೆ ಇದೆ ಎಂದು ದಿಪ್ಕೆ ಹೇಳಿದ್ದಾರೆ.
ಅಮೆರಿಕದಲ್ಲಿ ಹಲವು ಉದ್ಯೋಗಾವಕಾಶಗಳು ದೊರೆತಿದ್ದರೂ ಅವುಗಳನ್ನು ತಿರಸ್ಕರಿಸಿ ದೇಶಕ್ಕಾಗಿ ಹಾಗೂ ವಿದ್ಯಾರ್ಥಿಗಳ ಪರವಾಗಿ ಕೆಲಸ ಮಾಡಲು ಭಾರತಕ್ಕೆ ಮರಳಲು ನಿರ್ಧರಿಸಿದ್ದೇನೆ ಎಂದು ಅವರು ತಿಳಿಸಿದ್ದಾರೆ.
"ಈ ದೇಶ ಯಾವುದೇ ಒಂದು ರಾಜಕೀಯ ಪಕ್ಷಕ್ಕೆ ಸೇರಿಲ್ಲ. ಇದು ನಮ್ಮೆಲ್ಲರ ದೇಶ. ದೇಶದ ಭವಿಷ್ಯ ಹಾಗೂ ವಿದ್ಯಾರ್ಥಿಗಳ ಹಿತದ ಪ್ರಶ್ನೆ ಎದುರಾದಾಗ ಮೌನವಾಗಿರದೆ ಪ್ರಜಾಪ್ರಭುತ್ವದ ಮಾರ್ಗದಲ್ಲಿ ಧ್ವನಿ ಎತ್ತುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ" ಎಂದು ಅವರು ಹೇಳಿದ್ದಾರೆ.
ನೀಟ್ ವಿವಾದದ ಬಳಿಕ ಹುಟ್ಟಿಕೊಂಡ ಕಾಕ್ರೋಚ್ ಜನತಾ ಪಕ್ಷ
ನೀಟ್ ಪರೀಕ್ಷಾ ಅಕ್ರಮ ಪ್ರಕರಣದ ವಿಚಾರಣೆ ವೇಳೆ ಸುಪ್ರೀಮ ಕೋರ್ಟನಲ್ಲಿ ನಡೆದ ಚರ್ಚೆಯ ಸಂದರ್ಭದಲ್ಲಿ "ಜಿರಳೆಗಳು" ಎಂಬ ಪದ ಬಳಕೆಯಾದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆ ನಡೆದಿತ್ತು. ಇದರ ಬೆನ್ನಲ್ಲೇ ಅಭಿಜೀತ್ ದಿಪ್ಕೆ "ಕಾಕ್ರೋಚ್ ಜನತಾ ಪಕ್ಷ" ಎಂಬ ವಿಡಂಬನಾತ್ಮಕ ರಾಜಕೀಯ ಚಳುವಳಿಯನ್ನು ಆರಂಭಿಸಿದ್ದರು.
"ಜಿರಳೆ" ಎಂಬ ಪದವನ್ನು ಯುವಜನರ ಹೋರಾಟ, ಜಾಗೃತಿ ಹಾಗೂ ಶಿಕ್ಷಣ ವ್ಯವಸ್ಥೆಯಲ್ಲಿ ಉತ್ತರದಾಯಿತ್ವಕ್ಕೆ ಆಗ್ರಹಿಸುವ ಸಂಕೇತವಾಗಿ ಪರಿವರ್ತಿಸುವ ಉದ್ದೇಶದಿಂದ ಈ ಚಳುವಳಿಯನ್ನು ಆರಂಭಿಸಲಾಗಿದೆ ಎಂದು ಅವರು ಹೇಳಿದ್ದರು.
ಮೇ 3ರಂದು ನಡೆದ ನೀಟ್ ಯುಜಿ-2026 ಪರೀಕ್ಷೆಗೆ ಮುನ್ನ ವಿದ್ಯಾರ್ಥಿಗಳ ನಡುವೆ ಹರಿದಾಡಿದ್ದ ಅಣಕು ಪ್ರಶ್ನೆಪತ್ರಿಕೆಗಳು ಹಾಗೂ ಊಹೆ ಪ್ರಶ್ನೆಪತ್ರಿಕೆಗಳಲ್ಲಿ, ನಿಜವಾದ ಪರೀಕ್ಷೆಯಲ್ಲಿ ಕೇಳಲಾದ ಹಲವು ಪ್ರಶ್ನೆಗಳು ಕಂಡುಬಂದಿದ್ದವು. ಇದರಿಂದ ಪ್ರಶ್ನೆಪತ್ರಿಕೆ ಸೋರಿಕೆ ಆರೋಪಗಳು ಭಾರೀ ವಿವಾದಕ್ಕೆ ಕಾರಣವಾಗಿದ್ದವು.
ಪ್ರಕರಣ ಬೆಳಕಿಗೆ ಬಂದ ಬಳಿಕ ಕೇಂದ್ರ ಸರ್ಕಾರ ಸಿಬಿಐ ತನಿಖೆಗೆ ಆದೇಶಿಸಿತ್ತು. ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಪರೀಕ್ಷೆಯನ್ನು ರದ್ದುಗೊಳಿಸಿತ್ತು. ಮೇ 3ರಂದು ನಡೆದ ಪರೀಕ್ಷೆಗೆ 22 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಜರಾಗಿದ್ದರು.
ರದ್ದುಗೊಂಡ ಪರೀಕ್ಷೆಯನ್ನು ಹೆಚ್ಚುವರಿ ಭದ್ರತಾ ಕ್ರಮಗಳೊಂದಿಗೆ ಜೂ. 21ರಂದು ಮರುನಡೆಸಲು ನಿರ್ಧರಿಸಲಾಗಿದೆ. ಈ ನಡುವೆ ತಮ್ಮ ರಾಜೀನಾಮೆಗೆ ಆಗ್ರಹಗಳು ಕೇಳಿಬರುತ್ತಿದ್ದರೂ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ. ತನಿಖೆ ಮತ್ತು ಸರಿಪಡಿಸುವ ಕ್ರಮಗಳ ಮೂಲಕ ಸಂಪೂರ್ಣ ಉತ್ತರದಾಯಿತ್ವ ಖಚಿತಪಡಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಕಳೆದ ವಾರ ಸುಪ್ರೀಮ ಕೋರ್ಟನಲ್ಲಿ ನಡೆದ ವಿಚಾರಣೆ ವೇಳೆ, ನ್ಯಾಯಸಮ್ಮತ ಮತ್ತು ಪಾರದರ್ಶಕ ಮರುಪರೀಕ್ಷೆ ನಡೆಸುವ ಪ್ರಕ್ರಿಯೆಯನ್ನು ಪ್ರಧಾನಿ ನರೇಂದ್ರ ಮೋದಿ ವೈಯಕ್ತಿಕವಾಗಿ ಮೇಲ್ವಿಚಾರಣೆ ಮಾಡುತ್ತಿದ್ದಾರೆ ಎಂದು ಕೇಂದ್ರ ಸರ್ಕಾರ ನ್ಯಾಯಾಲಯಕ್ಕೆ ತಿಳಿಸಿತ್ತು.