LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureEditorialBeautyRecipes

ಸುದೀರ್ಘ ವಿಚಾರಣೆ ನಂತರ ಶಿವಂ ಅಸೋಸಿಯೇಟ್ಸ ಶಿವಾನಂದ‌ ನೀಲಣ್ಣವರ ಬಂಧನ : ಸಾವಿರಾರು ಕೋಟಿ ಅಕ್ರಮ ಹಣ ಸಂಗ್ರಹ ಶಂಕೆ

ಬೆಳಗಾವಿ, ಮೇ 16 : ಕಾನೂನುಬಾಹಿರವಾಗಿ ಸಾರ್ವಜನಿಕರಿಂದ ಹಣ ಸಂಗ್ರಹಿಸಿ ಅನಧಿಕೃತ ಹಣಕಾಸು ವ್ಯವಹಾರ ನಡೆಸಿದ ಆರೋಪದಡಿ ಶಿವಂ ಅಸೋಸಿಯೇಟ್ಸ್‌ ಮಾಲೀಕ ಶಿವಾನಂದ ನೀಲಣ್ಣವರ ವಿರುದ್ಧ ಎಫ್‌ಐಆರ್‌ ದಾಖಲಿಸಿರುವ ಪೊಲೀಸರು ಅವರನ್ನು ಬಂಧಿಸಿದ್ದಾರೆ.

news_1778908858_0_879.webp

ಶಿವಾನಂದ ನೀಲಣ್ಣವರ ಅವರ ಶಿವಬಸವ ನಗರದ ನಿವಾಸ, ಕಚೇರಿ ಸೇರಿದಂತೆ ವಿವಿಧ ಸ್ಥಳಗಳ ಮೇಲೆ ಗುರುವಾರ ದಾಳಿ ನಡೆಸಲಾಗಿತ್ತು. ಶುಕ್ರವಾರವೂ ದಿನಪೂರ್ತಿ ದಾಖಲೆಗಳ ಪರಿಶೀಲನೆ ಮುಂದುವರಿಯಿತು. ಮಧ್ಯಾಹ್ನ ಅವರನ್ನು ವಿಚಾರಣೆಗೆ ಕರೆದೊಯ್ದ ಪೊಲೀಸರು, ರಾತ್ರಿ ಪ್ರಕರಣ ದಾಖಲಿಸಿ ಬಳಿಕ ಮನೆಯಿಂದ ವಶಕ್ಕೆ ಪಡೆದರು.

ನಂತರ ಅವರನ್ನು ಮಾಳಮಾರುತಿ ಪೊಲೀಸ್ ಠಾಣೆಗೆ ಕರೆದೊಯ್ದು ನಗರ ಪೊಲೀಸ್ ಆಯುಕ್ತ ಭೂಷಣ ಬೊರಸೆ ನೇತೃತ್ವದಲ್ಲಿ ತೀವ್ರ ವಿಚಾರಣೆ ನಡೆಸಲಾಯಿತು.

ಪ್ರಾಥಮಿಕ ತನಿಖೆಯಲ್ಲಿ ಸಾವಿರಾರು ಜನರಿಂದ ಹಣ ಸಂಗ್ರಹಿಸಿರುವ ಮಾಹಿತಿ ಲಭ್ಯವಾಗಿದೆ. ‘ಅಕ್ಯೂಮೆನ್‌’ ಹೆಸರಿನ ಆ್ಯಪ್‌ ಅಭಿವೃದ್ಧಿಪಡಿಸಿ ಅದರ ಮೂಲಕ ಸಾರ್ವಜನಿಕರಿಂದ ಹೂಡಿಕೆ ಸಂಗ್ರಹಿಸಲಾಗುತ್ತಿತ್ತು ಎಂದು ಪೊಲೀಸರು ಶಂಕಿಸಿದ್ದಾರೆ. ಈ ಆ್ಯಪ್‌ ಮೂಲಕ ಸಾವಿರಾರು ಕೋಟಿ ರೂಪಾಯಿ ವ್ಯವಹಾರ ನಡೆದಿರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಆರ್‌ಬಿಐ ನಿಯಮಗಳನ್ನು ಉಲ್ಲಂಘಿಸಿ ಠೇವಣಿ ಸಂಗ್ರಹಿಸಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ. ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಉಪವಿಭಾಗಾಧಿಕಾರಿ ಶ್ರವಣ ನಾಯಕ ನೇತೃತ್ವದಲ್ಲಿ ಸಹಕಾರ ಇಲಾಖೆ ಹಾಗೂ ಪೊಲೀಸರ ತಂಡ ದಾಳಿ ನಡೆಸಿ ನೂರಾರು ದಾಖಲೆಗಳನ್ನು ವಶಪಡಿಸಿಕೊಂಡಿದೆ. ಹಣ ವರ್ಗಾವಣೆ, ಹೂಡಿಕೆ ಹಾಗೂ ಠೇವಣಿ ವ್ಯವಹಾರಗಳ ಕುರಿತು ಪರಿಶೀಲನೆ ಮುಂದುವರಿದಿದೆ.

ಶಿವಾನಂದ ನೀಲಣ್ಣವರ ಸಂಗ್ರಹಿಸಿರುವ ಹಣದ ಕುರಿತು ಇನ್ನೂ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಆದರೆ ಇಷ್ಟು  ವರ್ಷಗಳಲ್ಲಿ  ಸುಮಾರು ₹45,000 ಕೋಟಿ ಮಟ್ಟದ ವ್ಯವಹಾರ ನಡೆದಿರಬಹುದೆಂದು ಅಂದಾಜಿಸಲಾಗಿದೆ. 30,000ಕ್ಕೂ ಹೆಚ್ಚು ಜನರು ಹಣ ಹೂಡಿಕೆ ಮಾಡಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆ ನಡೆದಿರುವ ಅನುಮಾನವೂ ವ್ಯಕ್ತವಾಗಿದ್ದು, ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರಿದಿದೆ.

ವಿವಾದಕ್ಕೆ ಕಾರಣವಾದ ಹೇಳಿಕೆ :

ಇತ್ತೀಚೆಗೆ ಕಡೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಶಿವಾನಂದ ನೀಲಣ್ಣವರ ನೀಡಿದ ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು.

ನಾನು ದೊಡ್ಡ ಸಾಮ್ರಾಜ್ಯ ಕಟ್ಟಿದ್ದೇನೆ. ಯಾರಿಗೂ ಹೆದರುವುದಿಲ್ಲ. ನನ್ನ ಬಳಿ 15 ಸಾವಿರ ಬಂದೂಕುಗಳಿವೆ. ಬೇಕಾದರೆ 2028ಕ್ಕೆ ಸಿಎಂ ಆಗಿ ತೋರಿಸುತ್ತೇನೆ ಎಂದು ಹೇಳಿಕೊಂಡಿದ್ದರು ಎನ್ನಲಾಗಿದೆ. ಈ ಹೇಳಿಕೆಗಳು ವ್ಯಾಪಕ ಚರ್ಚೆಗೆ ಕಾರಣವಾಗಿದ್ದವು.

ಮೇ 17ರಂದು ಬೆಳಗಾವಿಯಲ್ಲಿ 20 ಸಾವಿರ ಜನರನ್ನು ಸೇರಿಸಿ ಸ್ವಚ್ಛತಾ ಕಾರ್ಯಕ್ರಮ ಆಯೋಜಿಸಲಾಗಿತ್ತು. ನಗರಾದ್ಯಂತ ಕಟೌಟ್‌, ಪೋಸ್ಟರ್‌ ಹಾಗೂ ಬ್ಯಾನರ್‌ಗಳನ್ನು ಅಳವಡಿಸಲಾಗಿತ್ತು. ದಾಳಿ ಬಳಿಕ ಪಾಲಿಕೆ ಅಧಿಕಾರಿಗಳು ಕಾರ್ಯಕ್ರಮ ರದ್ದುಪಡಿಸಿ ಪೋಸ್ಟರ‌ಗಳನ್ನು ತೆರವುಗೊಳಿಸಿದರು.

ಯಾರು ಈ ಶಿವಾನಂದ ನೀಲಣ್ಣವರ? :

ಶಿವಾನಂದ ನೀಲಣ್ಣವರ ಮೂಲತಃ ಹುಬ್ಬಳ್ಳಿಯ ಉಣಕಲ್‌ ನಿವಾಸಿಗಳು. ಆರಂಭದಲ್ಲಿ ಮೆಡಿಕಲ್‌ ಕಾಲೇಜಿನಲ್ಲಿ ಸಿಪಾಯಿ ಕೆಲಸ ಮಾಡುತ್ತಿದ್ದ ಅವರು ನಂತರ ಆಟೋದಲ್ಲಿ ಐಸ‌ಕ್ರೀಮ್‌ ಮಾರಾಟ ಮಾಡುತ್ತಿದ್ದರು. ಬಳಿಕ ಐಸ‌ಕ್ರೀಮ್‌ ಕಾರ್ಖಾನೆ ಆರಂಭಿಸಿ ವ್ಯಾಪಾರ ಕ್ಷೇತ್ರಕ್ಕೆ ಪ್ರವೇಶಿಸಿದ್ದರು.

2012ರ ಬಳಿಕ ಶಿವಂ ಅಸೋಸಿಯೇಟ್ಸ್‌ ಹೆಸರಿನಲ್ಲಿ ಹಣಕಾಸು ಹಾಗೂ ಹೂಡಿಕೆ ವ್ಯವಹಾರ ಆರಂಭಿಸಿದ್ದರು. ಕಡಿಮೆ ಅವಧಿಯಲ್ಲಿ ಹೆಚ್ಚಿನ ಲಾಭ ನೀಡುವ ಭರವಸೆ ನೀಡಿ ಸಾವಿರಾರು ಜನರಿಂದ ಹಣ ಸಂಗ್ರಹಿಸಿರುವ ಆರೋಪ ಕೇಳಿಬಂದಿದೆ.

ಈ ಪ್ರಕರಣ ಇದೀಗ ಬೆಳಗಾವಿ ಮಾತ್ರವಲ್ಲದೆ ರಾಜ್ಯ ಮಟ್ಟದಲ್ಲಿಯೂ ಭಾರೀ ಸಂಚಲನ ಮೂಡಿಸಿದ್ದು, ಇನ್ನಷ್ಟು ಮಾಹಿತಿ ತನಿಖೆಯಲ್ಲಿ ಹೊರಬೀಳುವ ಸಾಧ್ಯತೆ ಇದೆ.

Author
A B Dharwadkar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST