ಬೆಳಗಾವಿ, ಏಪ್ರಿ. 18 : ನಗರದ ಉದ್ಯಮಬಾಗ ಪ್ರದೇಶದ ಸುರೇಶ ಮುರ್ವೆ ಅವರನ್ನು ಗುರಿಯಾಗಿಸಿಕೊಂಡು ಸೈಬರ್ ಕಳ್ಳರು ಎಪಿಕೆ ಫೈಲ್ ಮೂಲಕ ಮೋಸ ನಡೆಸಿ, ಅವರ ಬ್ಯಾಂಕ್ ಖಾತೆಯಿಂದ ₹4.28 ಲಕ್ಷ ಹಣವನ್ನು ದೋಚಿದ ಘಟನೆ ಬೆಳಕಿಗೆ ಬಂದಿದೆ.
ರಾಷ್ಟ್ರೀಕೃತ ಬ್ಯಾಂಕ್ ಹೆಸರಿನಲ್ಲಿ ಅಪರಿಚಿತರಿಂದ ಕಳುಹಿಸಲಾದ ಎಪಿಕೆ ಫೈಲ್ ಅನ್ನು ಬ್ಯಾಂಕ್ ಸಂಬಂಧಿತ ಮಹತ್ವದ ದಾಖಲೆ ಎಂದು ನಂಬಿ ಸುರೇಶ ಮುರ್ವೆ ತಮ್ಮ ಮೊಬೈಲ್‌ನಲ್ಲಿ ತೆರೆದಿದ್ದಾರೆ. ಫೈಲ್ ತೆರೆಯುತ್ತಿದ್ದಂತೆಯೇ ಮೊಬೈಲ್ ಮೇಲಿನ ನಿಯಂತ್ರಣ ಕಳ್ಳರ ಕೈಗೆ ಸೇರಿದ್ದು, ಬಳಿಕ ಕಳ್ಳರು ಖಾತೆಯಲ್ಲಿದ್ದ ಹಣವನ್ನು ಅಕ್ರಮವಾಗಿ ವರ್ಗಾಯಿಸಿಕೊಂಡಿದ್ದಾರೆ.
ಘಟನೆ ತಿಳಿಯುತ್ತಿದ್ದಂತೆಯೇ ನಗರ ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದು, ಕಳ್ಳರು ಯಾವ ರೀತಿಯಲ್ಲಿ ಖಾತೆ ವಿವರಗಳನ್ನು ಪಡೆದರು ಎಂಬುದರ ಕುರಿತು ತಾಂತ್ರಿಕ ಪರಿಶೀಲನೆ ನಡೆಯುತ್ತಿದೆ.
ಇತ್ತೀಚಿನ ದಿನಗಳಲ್ಲಿ ಬ್ಯಾಂಕ್, ಕೂರಿಯರ್ ಹಾಗೂ ಸರ್ಕಾರಿ ಇಲಾಖೆಗಳ ಹೆಸರಿನಲ್ಲಿ ಎಪಿಕೆ ಫೈಲ್‌ಗಳು ಅಥವಾ ಅನುಮಾನಾಸ್ಪದ ಕೊಂಡಿಗಳನ್ನು ಕಳುಹಿಸಿ ಜನರನ್ನು ಮೋಸಗೊಳಿಸುವ ಪ್ರಕರಣಗಳು ಹೆಚ್ಚುತ್ತಿವೆ. ಇಂತಹ ಫೈಲ್‌ಗಳನ್ನು ಡೌನ್‌ಲೋಡ್ ಅಥವಾ ತೆರೆಯಬಾರದು ಎಂದು ಪೊಲೀಸರು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ.