ಬೆಳಗಾವಿ, ಏಪ್ರಿಲ್ 21 : ಬೆಳಗಾವಿ ನಗರದ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ನಿಂತಿದ್ದ ಲಾರಿಗೆ ಕೋಳಿ ಸಾಗಿಸುತ್ತಿದ್ದ ಚಿಕ್ಕ ಸರಕು ವಾಹನ ಡಿಕ್ಕಿ ಹೊಡೆದ ಪರಿಣಾಮ ಶಿವಮೊಗ್ಗ ಮೂಲದ ಇಬ್ಬರು ದುರ್ಮರಣ ಹೊಂದಿದ್ದಾರೆ.
ವಾಸೀಮ (28) ಹಾಗೂ ಮುಬಾರಕ (22) ಮೃತರು. ವಾಹನ ಚಾಲಕ ಬಸವರಾಜ ಈರಪ್ಪ ಹಂಚಿನಮನಿ (37) ಗಂಭೀರವಾಗಿ ಗಾಯಗೊಂಡಿದ್ದು, ಸ್ಥಿತಿ ಆತಂಕಕಾರಿ ಎಂದು ತಿಳಿದುಬಂದಿದೆ. ಘಟನೆ ಇಂದು ನಸುಕಿನ ಜಾವ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದೆ.
ಕೊಲ್ಲಾಪುರದಿಂದ ಶಿವಮೊಗ್ಗ ಜಿಲ್ಲೆಯ ಸೊರಬ ಕಡೆಗೆ ಕೋಳಿಗಳನ್ನು ಸಾಗಿಸುತ್ತಿದ್ದ ಗೂಡ್ಸ್ ವಾಹನ ನಿಯಂತ್ರಣ ತಪ್ಪಿ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ನೂರಾರು ಕೋಳಿಗಳು ಸಹ ಸಾವನ್ನಪ್ಪಿವೆ.
ಘಟನಾ ಸ್ಥಳಕ್ಕೆ ಹಿರೇಬಾಗೆವಾಡಿ ಪೊಲೀಸ್ ಠಾಣೆಯ ಪಿಎಸ್ಐ ಅವಿನಾಶ್ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತದೇಹಗಳು ಹಾಗೂ ಗಾಯಾಳುಗಳನ್ನು ಬೀಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಹಿರೇಬಾಗೆವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳ ಬದಿಯಲ್ಲಿ ವಾಹನ ನಿಲ್ಲಿಸುವುದಕ್ಕೆ ನಿರ್ಬಂಧವಿದ್ದರೂ, ಹಿರೇಬಾಗೆವಾಡಿಯಿಂದ ಹೊನಗಾ ಗ್ರಾಮದವರೆಗಿನ ಭಾಗದಲ್ಲಿ ಹೋಟೆಲ್ ಮತ್ತು ಧಾಬಾಗಳಿರುವುದರಿಂದ ಲಾರಿಗಳು ಹೆಚ್ಚಾಗಿ ನಿಲ್ಲಿಸುತ್ತಿವೆ. ಇದರಿಂದ ಅಪಘಾತಗಳ ಸಂಖ್ಯೆ ಹೆಚ್ಚುತ್ತಿದೆ ಎಂಬ ಆತಂಕ ವ್ಯಕ್ತವಾಗಿದ್ದು, ಸ್ಥಳೀಯರು ಹಾಗೂ ಸಂಘಟನೆಗಳು ಪೊಲೀಸ್ ಇಲಾಖೆಗೆ ಹಲವು ಬಾರಿ ಮನವಿ ಸಲ್ಲಿಸಿದ್ದಾರೆ.