LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureEditorialBeautyRecipes

ಅಥಣಿ ತಾಲೂಕಿನ ಹಳ್ಳಿಯೊಂದರ ಸರ್ಕಾರಿ ಶಾಲೆಯ ವಿದ್ಯಾರ್ಥಿನಿ ಪ್ರಾರ್ಥನಾ ರಾಜ್ಯಕ್ಕೆ ಪ್ರಥಮ

ಅಥಣಿ, ಏಪ್ರಿಲ್ 23 : ಈ ಸಾಲಿನ ಎಸ್‌.ಎಸ್‌.ಎಲ್‌.ಸಿ ಪರೀಕ್ಷೆಯಲ್ಲಿ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಪ್ರಾರ್ಥನಾ ನಾಗಪ್ಪ ಬಿರಾದಾರ ಪಾಟೀಲ 625ಕ್ಕೆ 625 ಅಂಕಗಳನ್ನು ಪಡೆದು ರಾಜ್ಯದಲ್ಲಿ ಪ್ರಥಮ ಸ್ಥಾನ ಗಳಿಸಿ ಅಪೂರ್ವ ಸಾಧನೆ ಮಾಡಿದ್ದಾಳೆ.


ಅಥಣಿ ತಾಲೂಕಿನ ಕಟಗೇರಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಪ್ರಾರ್ಥನಾ ತನ್ನ ಶ್ರಮ, ನಿಷ್ಠೆ ಹಾಗೂ ಸ್ಪಷ್ಟ ಗುರಿಯೊಂದಿಗೆ ಮಾಡಿದ ಅಧ್ಯಯನದ ಫಲವಾಗಿ ಈ ವಿಶೇಷ ಸಾಧನೆ ಸಾಧಿಸಿದ್ದಾಳೆ. ಆಕೆಯ ಸಾಧನೆ ಶಾಲೆ, ಶಿಕ್ಷಕರು ಮತ್ತು ಪೋಷಕರಿಗೆ ಹೆಮ್ಮೆಯ ವಿಷಯವಾಗಿದ್ದು, ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಗೆ ಕೀರ್ತಿ ತಂದಿದೆ ಎಂದು ಡಿಡಿಪಿಐ ಸೀತಾರಾಮು ತಿಳಿಸಿದ್ದಾರೆ.


620 ಅಂಕ ಬರುವ ನಿರೀಕ್ಷೆ ಇಟ್ಟುಕೊಂಡಿದ್ದೆ. ಆದರೆ, 625 ಅಂಕ ಪಡೆದಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ. ಎಲ್ಲಾ ಶಿಕ್ಷಕರು ನನಗೆ ಬಹಳಷ್ಟು ಪ್ರೋತ್ಸಾಹ ಮಾಡಿದರು. ತಂದೆ-ತಾಯಿ ಬೆಂಬಲದಿಂದ ಇದು ಸಾಧ್ಯವಾಗಿದೆ. ಮುಂದೆ ಪಿಯುಸಿ ಸೈನ್ಸ್ ಸೇರಿಕೊಂಡು ವೈದ್ಯೆ ಅಥವಾ ಯುಪಿಎಸ್​ಸಿ ಪರೀಕ್ಷೆ ಎದುರಿಸುವ ಗುರಿ ಹೊಂದಿದ್ದೇನೆ ಎಂದು ಪ್ರಾರ್ಥನಾ ತಿಳಿಸಿದಳು.


ಏಕಾಗ್ರತೆಯಿಂದ ಪಾಠ ಕೇಳಿದ್ದೆ. ಇದರಿಂದ ಅಲ್ಲಿಯೇ ಶೇ.80ರಷ್ಟು ಅರ್ಥ ಆಗುತ್ತಿತ್ತು. ಬಳಿಕ‌ ಮನೆಗೆ ಹೋದ ಮೇಲೆ ಶೇ.20ರಷ್ಟು ಪೂರ್ಣ ಆಗುತ್ತಿತ್ತು. ಒಮ್ಮೆ ಓದಿ ಬಿಟ್ಟು ಬಿಡುತ್ತಿರಲಿಲ್ಲ. ಪಠ್ಯವನ್ನು ಪುನರ್ ಮನನ ಮಾಡಿದ್ದರಿಂದಲೇ 625 ಅಂಕ ಗಳಿಸಲು ಸಾಧ್ಯವಾಗಿದೆ ಎಂದು ಪ್ರಾರ್ಥನಾ ವಿವರಿಸಿದಳು.


ಗ್ರಾಮೀಣ ಪ್ರದೇಶದ ವಿದ್ಯಾರ್ಥಿನಿಯಾದ ಪ್ರಾರ್ಥನಾ ಅವರ ತಂದೆ ನಾಗಪ್ಪ ಅದೇ ಶಾಲೆಯಲ್ಲಿ ಕನ್ನಡ ಭಾಷಾ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ತಾಯಿ ವಿನೋದಾ ಗೃಹಿಣಿಯಾಗಿದ್ದಾರೆ.


ಎಸ್‌.ಎಸ್‌.ಎಲ್‌.ಸಿ ಪರೀಕ್ಷೆ-1ರ ಫಲಿತಾಂಶ ಗುರುವಾರ ಮಧ್ಯಾಹ್ನ ಪ್ರಕಟಗೊಂಡಿದೆ. ತೃತೀಯ ಭಾಷಾ ವಿಷಯಕ್ಕೆ ಈ ಬಾರಿ ಶ್ರೇಣಿ ಬದಲು ಅಂಕ ನೀಡಲು ಸರ್ಕಾರ ನಿರ್ಧರಿಸಿದೆ. ಪರೀಕ್ಷೆ ಬರೆದ ವಿದ್ಯಾರ್ಥಿಗಳ ಪೈಕಿ 94.1 ಶೇಕಡಾ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಒಟ್ಟು 7,70,209 ವಿದ್ಯಾರ್ಥಿಗಳಲ್ಲಿ 7,24,794 ಮಂದಿ ಉತ್ತೀರ್ಣರಾಗಿದ್ದಾರೆ.


ಜಿಲ್ಲಾವಾರು ಫಲಿತಾಂಶದಲ್ಲಿ ದಕ್ಷಿಣ ಕನ್ನಡ ಪ್ರಥಮ ಸ್ಥಾನ, ಉಡುಪಿ ದ್ವಿತೀಯ ಸ್ಥಾನ ಹಾಗೂ ಉತ್ತರ ಕನ್ನಡ ತೃತೀಯ ಸ್ಥಾನ ಪಡೆದಿದೆ. ಕಲಬುರಗಿ ಕೊನೆಯ ಸ್ಥಾನದಲ್ಲಿದೆ. ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದು, ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಗಮನಾರ್ಹ ಸಾಧನೆ ತೋರಿದ್ದಾರೆ.

Author
A B Dharwadkar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST