Belagavi

ಖಾನಾಪುರ ಅಲಾತ್ರಿ ಹಳ್ಳದಲ್ಲಿ ಮುಳುಗಿ ಮತ್ತೊಬ್ಬನ ಸಾವು : ವಾರದಲ್ಲಿ ಎರಡನೆಯ ಘಟನೆ

ಬೆಳಗಾವಿ, ೨೨- ಕಳೆದ ಭಾನುವಾರ ನಗರದ ಇಬ್ಬರು ಯುವಕರು ಖಾನಾಪುರ ತಾಲೂಕಿನ ಮಂತುರ್ಗಾ ಗ್ರಾಮದ ಬಳಿಯ ಅಲಾತ್ರಿ ಹಳ್ಳದಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಇನ್ನೂ ಹಸಿಯಾಗಿರುವಾಗಲೇ ಇಂದು ಭಾನುವಾರ ಅದೇ ಸ್ಥಳದಲ್ಲಿ ಬೆಳಗಾವಿಯ ಯುವಕನೋರ್ವ ಮುಳುಗಿ ಮೃತಪಟ್ಟಿದ್ದಾರೆ.

ಯಳ್ಳೂರ ರಸ್ತೆಯಲ್ಲಿರುವ ಕೆಎಲ್‌ಇ ಆಸ್ಪತ್ರೆಯ ಎಕ್ಸ್-ರೇ ಟೆಕ್ನಿಶಿಯನ್ ವಡಗಾಂವಿಯ ನಿವಾಸಿ ಮಂಜುನಾಥ ಮಲ್ಲಿಕಾರ್ಜುನ ಸಾತಪುತೆ (೨೮) ಅವರು ಭಾನುವಾರ ರಜೆಯಾದ್ದರಿಂದ ತನ್ನ ಏಳೆಂಟು ಸ್ನೇಹಿತರೊಂದಿಗೆ ಮಧ್ಯಾಹ್ನ ಅಲಾತ್ರಿ ಹಳ್ಳಕ್ಕೆ ತೆರಳಿದ್ದರು. ಎಲ್ಲರೂ ಈಜಲು ನೀರಿಗೆ ಇಳಿದಿದ್ದಾಗ ಮಂಜುನಾಥ ನೀರಿನ ಸೆಳವಿಗೆ ಸಿಲುಕಿ ಅಸುನೀಗಿದ್ದಾರೆ.

ಘಟನಾ ಸ್ಥಳಕ್ಕೆ ತೆರಳಿ ಕಾರ್ಯಾಚರಣೆ ನಡೆಸಿದ ಅಗ್ನಿಶಾಮಕದಳದ ಸಿಬ್ಬಂದಿ ನೀರಿನಲ್ಲಿ ಮುಳುಗಿದ್ದ ಮಂಜುನಾಥನನ್ನು ಮೇಲೆತ್ತಿ ಚಿಕಿತ್ಸೆಗಾಗಿ ಸ್ಥಳೀಯ ತಾಲೂಕು ಆಸ್ಪತ್ರೆಗೆ ದಾಖಲಿಸಿದಾದರೂ ಅಷ್ಟರಲ್ಲೇ ಅವರು ಮೃತಪಟ್ಟಿದ್ದರು ಎಂದು ಮೂಲಗಳು ತಿಳಿಸಿವೆ.

ಖಾನಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೇವಲ ಒಂದೇ ವಾರದ ಅವಧಿಯಲ್ಲಿ ಮೂವರು ಸಾವನ್ನಪ್ಪಿದ ಅಲಾತ್ರಿ ಹಳ್ಳದ ಸುತ್ತಮುತ್ತಲಿನ ಪ್ರದೇಶದಲ್ಲಿ ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಬೇಕು ಎಂದು ತಾಲೂಕಿನ ಸಾರ್ವಜನಿಕರು ಜಿಲ್ಲಾಡಳಿತವನ್ನು ಆಗ್ರಹಿಸಿದ್ದಾರೆ.

ಅರಣ್ಯ ಇಲಾಖೆಯ ಅಧೀನದಲ್ಲಿರುವ ಅಲಾತ್ರಿ ಹಳ್ಳದ ಸುತ್ತಮುತ್ತ ಮದ್ಯಸೇವನೆ, ಮಾದಕ ವಸ್ತುಗಳ ಉಪಯೋಗ, ಅಕ್ರಮ ಮರಳುಗಾರಿಕೆ ಸೇರಿದಂತೆ ಹಲವು ಅಕ್ರಮಗಳು ನಡೆಯುತ್ತಿದ್ದು, ಪ್ರತಿ ವಾರಾಂತ್ಯ ಯುವಕರು ಅಲಾತ್ರಿ ಪ್ರದೇಶಕ್ಕೆ ಪಿಕ್ ನಿಕ್ ಗೆ ತೆರಳುತ್ತಾರೆ. ಹೀಗಾಗಿ ಅಲಾತ್ರಿ ಹಳ್ಳದ ಸುತ್ತಮುತ್ತಲಿನ ಪ್ರದೇಶದಲ್ಲಿ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತರಾದ ಮಹಾಂತೇಶ ರಾಹುತ, ಮಲ್ಲೇಶಪ್ಪ ಬೆನಕಟ್ಟಿ ಹಾಗೂ ಇತರರು ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!