Editorial

ಸಚಿವರಾಗಲು ಅರ್ಹತೆ!

ರಾಜ್ಯ ಸಂಪುಟ ವಿಸ್ತರಣೆಯೋ, ಪುನಾರಚನೆಯೋ ಏನೋ ಒಂದು ನಡೆಯಲಿದೆ. ಈ ಸಂದರ್ಭದಲ್ಲಿ ಹಲವರು ಸಚಿವ ಸ್ಥಾನ ಕಳೆದುಕೊಳ್ಳಬಹುದು, ಮತ್ತೆ ಕೆಲವರು ಹೊಸದಾಗಿ ಸ್ಥಾನ ಪಡೆಯಬಹುದು. ಈ ರೀತಿಯ ಲೆಕ್ಕಾಚಾರ ಈಗೀಗ ಬಹಳ ಜೋರಾಗಿದೆ. ಸಚಿವ ಸ್ಥಾನದ ಆಕಾಂಕ್ಷಿಗಳು ಸಾಕಷ್ಟು ಕಸರತ್ತು ನಡೆಸಿದ್ದಾರೆ. ಇದಕ್ಕೆ ಅಡ್ಡಗಾಲು ಇಡುವ ಕೆಲಸವನ್ನೂ ಹಲವರು ಮಾಡುತ್ತಿದ್ದಾರೆ. ಈ ನಡುವೆ ದೆಹಲಿಗೆ ಹೋಗಿದ್ದ ಮುಖ್ಯಮಂತ್ರಿಗಳು ಬರಿಗೈಯಿಂದ ವಾಪಸ್ಸು ಬಂದಿದ್ದಾರೆ. ಇಲ್ಲಿ ಮಂತ್ರಿ ಆಗಲು ಮೇಲಿಂದ ಅಸ್ತು ಅನಿಸಿಕೊಳ್ಳಬೇಕು.

ಮೇಲಿನವರು ಬೇರೆ ಬೇರೆ ವಿಚಾರಗಳಲ್ಲಿ ವ್ಯಸ್ತರಾಗಿದ್ದಾರೆ. ಅವರಿಗೆ ಮುಂದೆ ಬರುವ ಪಶ್ಚಿಮ ಬಂಗಾಲದ ಚುನಾವಣೆ ಮತ್ತು ಈಗ ಪಡೆದಿರುವ ಹೊಸ ಬಹುಮಾನವಾದ ಬಿಹಾರದ ಸಂಪುಟ ರಚನೆ ಕಸರತ್ತು; ಇವೆಲ್ಲ ಇದ್ದಾಗ ಅವರು ನಮ್ಮ ಮುಖ್ಯಮಂತ್ರಿಗಳಿಗೆ ದೊರಕುವುದು ಕಷ್ಟ. ಅಲ್ಲಿ ಮಾಜಿ ಅಧ್ಯಕ್ಷರ ಅಪ್ಪಣೆ ಮೇರೆಗೆ ನಡೆದುಕೊಳ್ಳುವ ಹಾಲಿ ಅಧ್ಯಕ್ಷರು ಇದ್ದಾರೆ. ಅವರ ಕೈಗೆ ನಮ್ಮ ಮುಖ್ಯಮಂತ್ರಿಗಳು ಸಚಿವರ ಎರಡು ಪಟ್ಟಿ ಒಪ್ಪಿಸಿ ಬಂದಿದ್ದಾರೆ. ಅಪ್ಪಣೆ ಯಾವಾಗ ಮತ್ತು ಯಾವ ಪಟ್ಟಿಗೆ ದೊರಕುವುದೋ ಎಂದು ಕಾಯುತ್ತ ಇದ್ದಾರೆ. ಇದಲ್ಲದೇ ಮೂರನೇ ಪಟ್ಟಿಯನ್ನು ಮೇಲಿನವರೇ ಕರುಣಿಸುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ.

ಈಗ ಬಿಜೆಪಿಗೆ ದೊರೆತಿರುವ ಹೊಸ ಬಹುಮಾನ ಬಿಹಾರ. ಅಲ್ಲಿ ಆಗಿರುವ ಸಚಿವರ ನೇಮಕಾತಿ ಗಮನವಿಟ್ಟು ನೋಡಿದರೆ, ಸಚಿವರಾಗಲು ಏನೇನು ಅರ್ಹತೆ ಬೇಕು ಎನ್ನುವುದು ತಿಳಿಯುತ್ತದೆ. ಅದಕ್ಕೆ ಭಾರೀ ಅನುಭವ ಏನೂ ಬೇಕಿಲ್ಲ. ಏಕೆಂದರೆ ಅಂಥ ಅನುಭವಶಾಲಿ ಸುಶೀಲ ಮೋದಿ ಅವರನ್ನು ಹೊರಗಿಡಲಾಗಿದೆ. ಅಲ್ಲಿ ಅಸ್ತಿತ್ವಕ್ಕೆ ಬಂದಿರುವ ಸಚಿವ ಸಂಪುಟದ ಅರ್ಧಕ್ಕೂ ಹೆಚ್ಚು ಜನ ಕ್ರಿಮಿನಲ್ ಮೊಕದ್ದಮೆ ಎದುರಿಸುತ್ತಾ ಇರುವವರು ಮತ್ತು ಬಹುಪಾಲು ಮಂತ್ರಿಗಳು ಕೋಟಿ ಒಡೆಯರು. ಈ ಅಂಶಗಳನ್ನು ನಮ್ಮಲ್ಲಿ ಸಚಿವರಾಗಲು ಬಯಸುವವರು ಗಮನದಲ್ಲಿ ಇಟ್ಟುಕೊಂಡರೆ ಸಾಕು.

ಅಲ್ಲಿ ನೇಮಕ ಆಗಿರುವ ಹಣಕಾಸು ಸಚಿವರು ಹೆಚ್ಚಿನ ವಿದ್ಯಾರ್ಹತೆ ಹೊಂದಿಲ್ಲ. ಅವರು ಓದಿರುವುದು ಹನ್ನೆರಡನೇ ತರಗತಿವರೆಗೆ ಮಾತ್ರ. ಹೀಗಾಗಿ ನಮ್ಮ ರಾಜ್ಯದಲ್ಲಿ ಹಣಕಾಸು ಸಚಿವರಾಗಲು ಬಯಸುವವರು ಇದನ್ನು ಗಮನದಲ್ಲಿ ಇಟ್ಟುಕೊಂಡು ಲಾಬಿ ಮಾಡಬೇಕು.

ಬಿಹಾರದ ವಿದ್ಯಾಮಂತ್ರಿಗಳು ಪ್ರಮಾಣ ವಚನ ಸ್ವೀಕರಿಸಿದ ಮೂರು ದಿನದಲ್ಲೇ ರಾಜೀನಾಮೆ ಕೊಟ್ಟು ನಿರ್ಗಮಿಸಿದ್ದಾರೆ. ಕಾರಣ ಇಷ್ಟೇ, ಈ ಹಿಂದೆ ಅವರು ಉನ್ನತ ಹುದ್ದೆಯಲ್ಲಿ ಇದ್ದಾಗ ಇದೇ ಇಲಾಖೆಯಲ್ಲಿ ನಡೆಸಿದ್ದ ಭಾರಿ ಭ್ರಷ್ಠಾಚಾರ ಈಗ ಮತ್ತೆ ಜೀವ ತಳೆದು ಕುಣಿದ ಕಾರಣ ಅವರು ರಾಜೀನಾಮೆ ನೀಡಬೇಕಾಗಿ ಬಂದಿದೆ. ಆದ್ದರಿಂದ ಸಚಿವರಾಗಲು ಬಯಸುವವರು ಇದನ್ನೂ ಗಮನಿಸಬೇಕು. ಸಚಿವರಾಗಲು ಇರುವ ಅರ್ಹತೆ ಎಂದರೆ ನೀವು ಭ್ರಷ್ಠರಾಗಿರಬೇಕು, ಆದರೆ ಅದು ಬಹಿರಂಗ ಆಗದಂತೆ, ನಿಮ್ಮ ಅಕ್ರಮದ ರೆಕಾರ್ಡುಗಳು ವಿರೋಧ ಪಕ್ಷದವರ ಕೈಗೆ ಸಿಗದಂತೆ ಎಚ್ಚರ ತೆಗೆದುಕೊಳ್ಳಬೇಕು.

ಬಿಹಾರದಲ್ಲಿ ಇಬ್ಬರು ಉಪ ಮುಖ್ಯಮಂತ್ರಿಗಳು ಇದ್ದಾರೆ. ಅವರಿಬ್ಬರೂ ಬಿಜೆಪಿಯವರು. ಒಬ್ಬರಿಗೆ ಪ್ರಧಾನಿ ಯಾರು ಎಂದು ತಿಳಿದಿಲ್ಲ ಮತ್ತು ಅವರಿಗೆ ‘ಜನಗಣ ಮನ’ ರಾಷ್ಟ್ರಗೀತೆ ಗೊತ್ತಿಲ್ಲ. ಇನ್ನೊಬ್ಬರು ಮಹಿಳಾ ಉಪ ಮುಖ್ಯಮಂತ್ರಿಣಿಗೆ ಅವರದ್ದೇ ರಾಜ್ಯದಲ್ಲಿ ಹತ್ತು ದಿನದ ಹಿಂದೆ ಚುನಾವಣೆ ನಡೆಯುತ್ತಿದ್ದ ಸಂದರ್ಭದಲ್ಲಿ ಅಪ್ರಾಪ್ತ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿ, ಸೀಮೆ ಎಣ್ಣೆ ಸುರಿದು ಕೊಂದು ಹಾಕಿದ ವಿಚಾರವೇ ಗೊತ್ತಿಲ್ಲ. ಪತ್ರಕರ್ತರು ಆ ಬಗ್ಗೆ ಕೇಳಿದ್ದಕ್ಕೆ ತಮಗೆ ಆ ವಿಷಯ ತಿಳಿಯದು, ವಿಚಾರಿಸಿ ಹೇಳುತ್ತೇನೆ ಎಂದಿದ್ದಾರೆ. ಹೀಗೆ ದಡ್ಡರು ಮತ್ತು ಉಡಾಫೆ ಜನರಾದರೆ ಮಾತ್ರ ಉಪ ಮುಖ್ಯಮಂತ್ರಿಯಂಥ ಹುದ್ದೆ ಗಳಿಸಬಹುದು ಎಂಬುದು ಇದರಿಂದ ಸ್ಪಷ್ಟ. ನಮ್ಮ ರಾಜ್ಯದಲ್ಲಿಯೂ ಇಂಥ ಅಪರೂಪದ ಕಲ್ಯಾಣ ಗುಣ ಹೊಂದಿದ ಜನರನ್ನು ಹುಡುಕಿದರೆ ಉಪ ಮುಖ್ಯಮಂತ್ರಿ ಹುದ್ದೆಗಾದರೂ ಯತ್ನಿಸಬಹುದು.

ಬಿಹಾರದಂಥ ವಿಶಾಲ ರಾಜ್ಯದಲ್ಲಿಯೇ ಮೇಲಿನಂಥ ಬೃಹಸ್ಪತಿಗಳನ್ನು ಮಂತ್ರಿಗಳು, ಉಪ ಮುಖ್ಯಮಂತ್ರಿಗಳನ್ನಾಗಿ ನೇಮಕ ಮಾಡಿರುವಾಗ, ನಮ್ಮವರು ಕೂಡ ಸ್ವಲ್ಪ ಯೋಚಿಸಿ ತಾವು ಈ ಹುದ್ದೆಗಳಿಗೆ ಅರ್ಹರೇ ಅಥವಾ ಆ ಅರ್ಹತೆ ಇಲ್ಲದೇ ಇದ್ದಲ್ಲಿ ಗಳಿಸಿಕೊಳ್ಳುವುದು ಹೇಗೆ ಎಂದು ವಿಚಾರ ಮಾಡಿ ಸೂಕ್ತ ತೀರ್ಮಾನ ತೆಗೆದುಕೊಳ್ಳುವುದು ಒಳ್ಳೆಯದು.

ಹಿಂದಿನವರು ಮಹಾನ್ ಬುದ್ಧಿಗೇಡಿಗಳು. ಆಗೆಲ್ಲ ಅವರು ಓದಿದವರನ್ನು, ತಿಳಿವಳಿಕೆ ಇದ್ದವರನ್ನು, ನಿರ್ದಿಷ್ಟ ಕ್ಷೇತ್ರದಲ್ಲಿ ಕೆಲಸ ಮಾಡಿದವರನ್ನು ಆರಿಸಿ ಮಂತ್ರಿ ಆಗಿ ನೇಮಿಸುತ್ತಿದ್ದರು. ಈಗ ಕಾಲ ಬದಲಾಗಿದೆ. ಗೂಂಡಾಗಳು, ಓದದೇ ಇರುವವರು, ಭ್ರಷ್ಠತೆಯಲ್ಲಿ ದಾಖಲೆ ಸ್ಥಾಪಿಸಿದವರು ಮಾತ್ರ ಈಗ ಮಂತ್ರಿ ಆಗಲು ಅರ್ಹತೆ ಪಡೆದುಕೊಂಡಿರುತ್ತಾರೆ ಎನ್ನುವುದಕ್ಕೆ ಬಿಹಾರ ಒಂದು ಸಣ್ಣ ಉದಾಹರಣೆ.

ಸಂಪುಟ ರಚನೆ ಎಂದರೆ ಮುಖ್ಯಮಂತ್ರಿಗಳಿಗೆ ತಲೆ ನೋವು ಎಂದು ಕೆಲವರು ಹೇಳುತ್ತಾರೆ. ಅದು ಬುದ್ದಿ ಇಲ್ಲದವರ ಮಾತು. ಈಗ ನೋಡಿ ಬಿಹಾರದಲ್ಲಿ ಎಷ್ಟು ಸಲೀಸಾಗಿ ಸಂಪುಟ ರಚಿಸಲಾಗಿದೆ. ಅಷ್ಟು ದೊಡ್ಡ ರಾಜ್ಯದಲ್ಲಿಯೇ ಹಾಗೆ ಸಲೀಸಾಗಿ ಸಂಪುಟ ರಚನೆ ಮಾಡಿರುವಾಗ, ಪುಟ್ಟ ರಾಜ್ಯ ಕರ್ನಾಟಕದಲ್ಲಿ ಅದೇಕೆ ಕಷ್ಟ, ತಲೆನೋವು ಆಗಬೇಕು?. ಇಲ್ಲಿಯೂ ದಡ್ಡರು, ಭ್ರಷ್ಠರು, ಕಡು ಪಾಪಿಗಳೂ ಸಿಗಬಹುದು. ಅವರಿಗೆ ಆದ್ಯತೆ ಮೇರೆಗೆ ಸ್ಥಾನ ಕೊಟ್ಟರೆ ಎಲ್ಲವೂ ಸಲೀಸು. ಅದರ ಬಗ್ಗೆ ತಲೆ ಕೆಡಿಸಿಕೊಳ್ಳುವ ಅಗತ್ಯವೇ ಇಲ್ಲ.

‘ರಾಜಕೀಯ ದುಷ್ಕರ್ಮಿಯ ಅಂತಿಮ ಘಟ್ಟ’ ಎಂದು ಬಹಳ ಹಿಂದೆಯೇ ಸ್ಯಾಮುಯಲ್ ಜಾನ್ಸನ್ ಹೇಳಿದ್ದ. ಅದರಲ್ಲಿ ಅತಿ ಹೆಚ್ಚು ದುಷ್ಕರ್ಮ ಮಾಡಿದವನಿಗೆ ವಿಶೇಷ ಸ್ಥಾನಮಾನ ಬೇಡವೇ?. ಸಂಪುಟ ರಚನೆ ದೊಡ್ಡ ಸಮಸ್ಯೆಯೇ ಅಲ್ಲ. ಸುಮ್ಮನೇ ಅವರಿವರು ಬಾಯಿ ತೀಟೆಗೆ ಅದೊಂದು ಬಹಳ ದೊಡ್ಡ ತಲೆ ನೋವು ಎಂಬಂತೆ ಬಿಂಬಿಸುತ್ತ ಬಂದಿದ್ದಾರೆ ಅಷ್ಟೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!