Bengaluru

ನಿಗಮಗಳ ರಚನೆಯ ಹಿಂದೆ ರಾಜಕೀಯದ ವಾಸನೆ: ಪ್ರೊ ಕೆ ಮರುಳಸಿದ್ಧಪ್ಪ ವಿಷಾದ

ಬೆಂಗಳೂರು, ನ 19 [ಯುಎನ್ಐ] ರಾಜ್ಯದಲ್ಲಿ ವೀರಶೈವ – ಲಿಂಗಾಯತ ಅಭಿವೃದ್ಧಿ ನಿಗಮ ಮತ್ತು ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆ ಹಿಂದೆ ಸ್ಪಷ್ಟವಾಗಿ ರಾಜಕೀಯ ಉದ್ಧೇಶ ಹೊಂದಿದೆ ಎಂದು ಹಿರಿಯ ವಿದ್ವಾಂಸ ಪ್ರೊ ಕೆ ಮರುಳಸಿದ್ಧಪ್ಪ ಟೀಕಿಸಿದ್ದಾರೆ.

‘ಬಹುರೂಪಿ’ ಪ್ರಕಾಶನ ಹಮ್ಮಿಕೊಂಡಿದ್ದ ಸಂವಾದದಲ್ಲಿ ಅವರು ಜಿ ಎನ್ ನಾಗರಾಜ್ ಅವರ ಹೊಸ ಕೃತಿ ‘ಜಾತಿ ಬಂತು ಹೇಗೆ?’ ಕುರಿತು ಮಾತನಾಡಿದ ಅವರು, ಉತ್ತರ ಕರ್ನಾಟಕದ ಜಾತಿ ಸಮುದಾಯಗಳ ಮತಗಳ ಮೇಲೆ ಕಣ್ಣಿಟ್ಟು ನಡೆಸಿರುವ ಈ ರಾಜಕೀಯಕ್ಕೆ ಅಂತಃಕರಣವೇ ಇಲ್ಲ ಎಂದು ಅವರು ವಿಷಾದಿಸಿದರು.

ಇವತ್ತಿನ ರಾಜಕಾರಣ ಜಾತಿಯನ್ನು ಅಸ್ತ್ರವನ್ನಾಗಿ ಬಳಸುತ್ತಿದೆ. ರಾಜ್ಯದಲ್ಲಿ ಎಲ್ಲಾ ಜಾತಿಗಳಿಗೂ ಒಂದು ಪ್ರಾಧಿಕಾರ ಮಾಡಲು ಹೊರಟಿರುವ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ನಿರ್ಧಾರವೇ ಇದಕ್ಕೆ ಸಾಕ್ಷಿ ಒದಗಿಸುವಂತಿದೆ. ಇದು ಜಾತಿ ಉದ್ಧಾರ ಮಾಡುವ ಉದ್ಧೇಶವನ್ನು ಖಂಡಿತಾ ಹೊಂದಿಲ್ಲ. ಬದಲಿಗೆ ಆ ಜಾತಿಯ ಮತಗಳನ್ನು ಮಾತ್ರ ಬಾಚಿಕೊಳ್ಳುವ ಉತ್ಸಾಹ ತೋರಿಸುತ್ತಿದೆ ಎಂದು ಹೇಳಿದರು.

ಸಂವಿಧಾನ ಜಾತ್ಯತೀತ ಆಶಯವನ್ನು ಹೊಂದಿದೆ. ಹಾಗಾಗಿ ಸ್ವಾತಂತ್ರ್ಯಾನಂತರ ಜಾತಿ ಎನ್ನುವುದು ನಾಶವಾಗಿ ಹೋಗುತ್ತದೆ ಎನ್ನುವ ಕನಸು ಇತ್ತು. ಆದರೆ ಈಗ ಜಾತಿ ಮತ್ತು ಧರ್ಮಗಳೆರಡೂ ಸ್ವಾತಂತ್ರ್ಯಪೂರ್ವಕ್ಕಿಂತ ಬಲವಾಗಿ ಬೆಳೆದು ನಿಂತಿವೆ ಎಂದು ಕಳವಳ ವ್ಯಕ್ತಪಡಿಸಿದರು.

ಹೋರಾಟಗಾರ್ತಿ ಕೆ ನೀಲಾ ಮಾತನಾಡಿ, ವಚನ ಚಳವಳಿಯ ಆಶಯವನ್ನೇ ಇಲ್ಲವಾಗಿಸುವ ಹುನ್ನಾರ ಈ ಪ್ರಾಧಿಕಾರಗಳ ರಚನೆಯ ಹಿಂದಿದೆ. ವಚನ ಚಳವಳಿಯ ಜಾತ್ಯಾತೀತ ಆಶಯವನ್ನು ಹರಡದಂತೆ ವ್ಯವಸ್ಥಿತ ಕೋಟೆ ರೂಪಿಸಲಾಯಿತು. ನಂತರ ಅದನ್ನು ಜಾತಿಯಾಗಿಸಿ ಅದರಿಂದ ಲಾಭ ಪಡೆಯುವ ಹುನ್ನಾರ ಈಗ ನಡೆದಿದೆ ಎಂದು ಟೀಕಿಸಿದರು.

ಸಾಹಿತಿ ಮೂಡ್ನಾಕೂಡು ಚಿನ್ನಸ್ವಾಮಿ ಅವರು ಕೃತಿಯನ್ನು ವಿಮರ್ಶಿಸಿ ಅಸ್ಪೃಶ್ಯತೆಯ ಅಗ್ನಿಕುಂಡ ಇನ್ನೂ ಜೀವಂತವಾಗಿದೆ. ಜಾತಿ ಎನ್ನುವುದು ವಿನಾಶವಾಗುವವರೆಗೆ ಅಸ್ಪೃಶ್ಯತೆಯ ಗಾಯಗಳು ಮರೆಯಾಗುವುದಿಲ್ಲ ಎಂದರು.

ಕೃತಿಕಾರ ಜಿ ಎನ್ ನಾಗರಾಜ್ ಮಾತನಾಡಿ ನನ್ನ ‘ಜಾತಿ ಬಂತು ಹೇಗೆ?’ ಕೃತಿ ಕರ್ನಾಟಕದಲ್ಲಿ ಜಾತಿ ವ್ಯವಸ್ಥೆ ಮತ್ತು ಅಸ್ಪೃಶ್ಯತೆಯ ಉಗಮವನ್ನು ಶೋಧಿಸುತ್ತದೆ. ಜಾತಿಯ ವಿರುದ್ಧ ಪ್ರಬಲ ಹೋರಾಟ ಕಟ್ಟಿದ ಡಾ ಅಂಬೇಡ್ಕರ್, ಇ ಎಂ ಎಸ್ ನಂಬೂದರಿಪಾಡ್, ಇ ಕೆ ನಾಯನಾರ್, ಬಿ ಟಿ ರಣದಿವೆ ಅವರ ಹೋರಾಟ ಅಮೂಲ್ಯವಾದದ್ದು ಅದನ್ನು ರಕ್ಷಿಸಿಕೊಳ್ಳಬೇಕು ಎಂದರು.

 

Related Articles

Leave a Reply

Your email address will not be published. Required fields are marked *

Back to top button
error: Content is protected !!