Patna

12 ನೇ ತರಗತಿವರೆಗೆ ಕಲಿತವ ಹಣಕಾಸು ಮಂತ್ರಿ, ಶಿಕ್ಷಣ ಹಗರಣದ ಆರೋಪಿ ಶಿಕ್ಷಣ ಸಚಿವ!

ಪಾಟ್ನಾ, 18- ಬಿಹಾರ ಮುಖ್ಯಮಂತ್ರಿಯಾಗಿ ನಿತೀಶ ಕುಮಾರ ಮತ್ತೆ ಅಧಿಕಾರ ಸ್ವೀಕರಿಸಿದ ನಂತರ ನಡೆದ ಪ್ರಥಮ ಸಂಪುಟ ಸಭೆಯಲ್ಲಿ ನೂತನ ಸಚಿವರುಗಳಿಗೆ ಖಾತೆ ಹಂಚಿಕೆ ಮಾಡಲಾಗಿದೆ.

ಗೃಹ ಖಾತೆ ಸಹಿತ ಹಲವು ಖಾತೆಗಳನ್ನು ತಮ್ಮ ಬಳಿಯೇ ಮುಖ್ಯಮಂತ್ರಿ ಉಳಿಸಿಕೊಂಡಿದ್ದರೆ, 12 ನೇ ತರಗತಿವರೆಗೆ ಮಾತ್ರ ಶಿಕ್ಷಣ ಪಡೆದಿರುವ ತಾರಕಿಶೋರ ಪ್ರಸಾದ ಅವರಿಗೆ ಉಪಮುಖ್ಯಮಂತ್ರಿ ಅಲ್ಲದೆ ಹಣಕಾಸು ಖಾತೆ ಸೇರಿ ಆರು ಖಾತೆಗಳನ್ನು ವಹಿಸಲಾಗಿದೆ. ಈ ಹಿಂದೆ ವಿತ್ತ ಖಾತೆ ಮಾಜಿ ಉಪಮುಖ್ಯಮಂತ್ರಿ ಸುಶೀಲ ಕುಮಾರ ಮೋದಿ ನಿರ್ವಹಿಸುತ್ತಿದ್ದರು.

ಮೊದಲ ಬಾರಿ ಸಚಿವರಾಗಿರುವ ತಾರಕಿಶೋರ ಪ್ರಸಾದ ಅವರಿಗೆ ವಿತ್ತ ಖಾತೆ ಸಹಿತ ಇತರ ಪ್ರಮುಖ ಖಾತೆಗಳಾದ ವಾಣಿಜ್ಯ, ಪರಿಸರ, ಅರಣ್ಯ ಮತ್ತು ಹವಾಮಾನ, ಐಟಿ, ವಿಪತ್ತು ನಿರ್ವಹಣೆ, ನಗರಾಭಿವೃದ್ಧಿ ಮತ್ತು ವಸತಿ ಖಾತೆಗಳನ್ನೂ ನೀಡಿರುವುದು ಹಲವರ ಹುಬ್ಬೇರುವಂತೆ ಮಾಡಿದೆ.

ಶಿಕ್ಷಣ ಕ್ಷೇತ್ರದ ನೌಕರರ ನೇಮಕಾತಿ ಹಗರಣದ ಆರೋಪಿ ಮೇವಾಲಾಲ ಚೌಧರಿ ಸಂಪುಟದಲ್ಲಿ ಶಿಕ್ಷಣ ಸಚಿವರಾಗಿದ್ದಾರೆ. 2015ರಲ್ಲಿ ಮೊದಲ ಬಾರಿ ಜೆಡಿಯು ಶಾಸಕನಾಗಿದ್ದ ಚೌಧರಿ ಅದಕ್ಕೂ ಮೊದಲು ಶಿಕ್ಷಕನಾಗಿದ್ದರು. ಇವರ ವಿರುದ್ಧ ಸಬೌರ್ ಕೃಷಿ ವಿವಿಯಲ್ಲಿ ನೇಮಕಾತಿ ಹಗರಣ ನಡೆಸಿರುವ ಆರೋಪವಿದೆ. 2017ರಲ್ಲಿ ಈ ಕುರಿತು ಪ್ರಕರಣ ದಾಖಲಾಗಿದ್ದು, ಪ್ರಸ್ತುತ ಚೌಧರಿ ಅವರು ನ್ಯಾಯಾಲಯದಿಂದ ನಿರೀಕ್ಷಣಾ ಜಾಮೀನು ಪಡೆದಿದ್ದಾರೆ.

ಚುನಾವಣಾ ಪ್ರಚಾರದ ವೇಳೆ ಆರ್ ಜೆಡಿ ನಾಯಕ ಹಾಗೂ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಂಬಿಸಲ್ಪಟ್ಟಿದ್ದ ತೇಜಸ್ವಿ ಯಾದವ ಅವರ ಶೈಕ್ಷಣಿಕ ಅರ್ಹತೆಗಳನ್ನು ಪ್ರಶ್ನಿಸಿದ್ದ ಎನ್‍ಡಿಎ ಪಾಳಯ ಈಗ 12 ನೇ ತರಗತಿ ತನಕ ಶಿಕ್ಷಣ ಪಡೆದಿರುವ ಉಪಮುಖ್ಯಮಂತ್ರಿಗೆ ಇಷ್ಟೊಂದು ಮಹತ್ವದ ಖಾತೆಗಳನ್ನು ನೀಡಿದೆ. ಈ ಕುರಿತು ಆರ್ ಜೆಡಿ ವಕ್ತಾರ ಮೃತ್ಯುಂಜಯ ತಿವಾರಿ ಪ್ರಶ್ನಿಸಿದ್ದಾರೆ.

Leave a Reply

Your email address will not be published. Required fields are marked *

Back to top button
error: Content is protected !!