Bengaluru

ಕೇಂದ್ರೀಯ ವಿದ್ಯಾಲಯಗಳಲ್ಲಿ ಹಿಂದಿ, ಸಂಸ್ಕೃತ ಕಲಿಯಲು ಪ್ರೋತ್ಸಾಹಿಸುತ್ತಿರುವುದು ಖಂಡನೀಯ -ಟಿ.ಎಸ್.ನಾಗಾಭರಣ

ಬೆಂಗಳೂರು,ನ.18(ಯುಎನ್ಐ): ರಾಜ್ಯದ ಕೇಂದ್ರೀಯ ವಿದ್ಯಾಲಯಕ್ಕೆ ಸೇರುವ ಮಕ್ಕಳಲ್ಲಿ ಕನ್ನಡ ಕಲಿಯುವ ಆಸಕ್ತಿಯಿದ್ದರೂ ಬಲವಂತವಾಗಿ ಹಿಂದಿ, ಸಂಸ್ಕೃತ ಕಲಿಯಲು ಪ್ರೋತ್ಸಾಹಿಸುತ್ತಿರುವುದು ಖಂಡನೀಯ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ಹೇಳಿದ್ದಾರೆ.

ವಿಧಾನಸೌಧದಲ್ಲಿಂದು ಆಡಳಿತದಲ್ಲಿ ಸಂಪೂರ್ಣ ಕನ್ನಡ ಅನುಷ್ಠಾನ ಕುರಿತು ವಿಕೇಂದ್ರೀಯ ವಿದ್ಯಾಲಯ ಸಂಘಟನೆಯೊಂದಿಗೆ ಜಾಲ ಸಂಪರ್ಕ ಸಭೆ ನಡೆಸಿ ಮಾತನಾಡಿದ ಟಿ.ಎಸ್.ನಾಗಾಭರಣ, ಕೇಂದ್ರೀಯ ವಿದ್ಯಾಲಯವು ಸೇರಿದಂತೆ ರಾಜ್ಯದಲ್ಲಿರುವ ಎಲ್ಲ ಶೈಕ್ಷಣಿಕ ಸಂಸ್ಥೆಗಳು 2015ರ ಕನ್ನಡ ಭಾಷಾ ಕಲಿಕಾ ಅಧಿನಿಯಮದನ್ವಯ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಬೇಕಿರುವುದು ಜವಾಬ್ದಾರಿಯಾಗಿದ್ದು, ಕೂಡಲೇ ಕನ್ನಡವನ್ನು ದ್ವಿತೀಯ ಭಾಷೆಯಾಗಿ ಬೋಧಿಸುವಂತೆ ಸೂಚಿಸಿದರು.

ಪ್ರಾಧಿಕಾರ ನಡೆಸುವ ಮುಖ್ಯವಾದ ಕನ್ನಡ ಅನುಷ್ಠಾನ ಪರಿಶೀಲನಾ ಸಭೆಗೆ ಮುಖ್ಯವಾಗಿ ಆಯುಕ್ತರು ಪಾಲ್ಗೊಂಡು ಕನ್ನಡದ ಅನುಷ್ಠಾನ, ನೇಮಕಾತಿ ಇತ್ಯಾದಿಗಳ ಬಗ್ಗೆ ಚರ್ಚಿತವಾಗುವ ವಿಷಯಗಳ ಅನುಪಾಲನೆ ಮಾಡುವಲ್ಲಿ ತುರ್ತು ಕ್ರಮಗಳನ್ನು ಕೈಗೊಳ್ಳಬೇಕಾಗಿರುವುದು ಆಯುಕ್ತರ ಮುಖ್ಯ ಕರ್ತವ್ಯವಾಗಿದೆ. ಆದರೆ ಸಭೆಗೆ ಅನುಪಸ್ಥಿತರಾಗಿದ್ದ ಆಯುಕ್ತರ ಗೈರಿಗೆ ಸೂಕ್ತ ಮಾಹಿತಿಯನ್ನು ಪ್ರಾಧಿಕಾರಕ್ಕೆ ತಿಳಿಸುವಂತೆ ನಾಗಾಭರಣ ಹೇಳಿದರು.

ಈ ಸಂದರ್ಭದಲ್ಲಿ ಶಿಕ್ಷಣ ತಜ್ಞರಾದ ಡಾ.ವಿ.ಪಿ.ನಿರಂಜನಾರಾಧ್ಯ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ.ಕೆ.ಮುರಳಿಧರ, ಕೇಂದ್ರೀಯ ವಿದ್ಯಾಲಯ ಸಂಘಟನೆಯ ಉಪ ಆಯುಕ್ತರಾದ ಡಾ.ಎನ್.ವಸಂತ್, ಅಧ್ಯಕ್ಷರ ಅಪ್ತ ಕಾರ್ಯದರ್ಶಿ ಡಾ.ವೀರಶೆಟ್ಟಿ ಪಾಲ್ಗೊಂಡಿದ್ದರು.

 

Related Articles

Leave a Reply

Your email address will not be published. Required fields are marked *

Back to top button
error: Content is protected !!