Bengaluru

ಫೆಬ್ರವರಿ, ಮಾರ್ಚ್ ನಲ್ಲಿ ಕೋವಿಡ್-19 ಎರಡನೇ ಅಲೆ ಸಂಭವ : ಡಾ. ಸಿ.ಎನ್. ಮಂಜುನಾಥ

ಬೆಂಗಳೂರು, ನ 17- ಬರುವ ಫೆಬ್ರವರಿ ಮತ್ತು ಮಾರ್ಚ್ ನಲ್ಲಿ ಕೋವಿಡ್-19 ಎರಡನೇ ಅಲೆ ಶುರುವಾಗುವ ಸಂಭವವಿದ್ದು ರಾಜ್ಯದ ಜನತೆ ಹೆಚ್ಚು ಜಾಗೃತಿಯಿಂದ ಇರಬೇಕು ಎಂದು ಜಯದೇವ ಹೃದ್ರೋಗ ಮತ್ತು ಸಂಶೋಧನಾ ಸಂಸ್ಥೆ ನಿರ್ದೇಶಕ ಸಿ.ಎನ್. ಮಂಜುನಾಥ ಹೇಳಿದ್ದಾರೆ.

ಅಂತಾರಾಷ್ಟ್ರೀಯ ಲಯನ್ಸ್ ಸಂಸ್ಥೆ ಜಿಲ್ಲೆ 312-ಎಫ್, ಕರ್ನಾಟಕ ಮಾಧ್ಯಮ ಅಕಾಡೆಮಿ, ಭಾರತೀಯ ವಿದ್ಯಾಭವನ ಆಶ್ರಯದಲ್ಲಿ ರಾಷ್ಟ್ರೀಯ ಪತ್ರಿಕೋದ್ಯಮ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ’ಕೋವಿಡ್-19 ರೋಗ ತಡೆಗಟ್ಟುವಲ್ಲಿ ಮಾಧ್ಯಮಗಳ ಹಾಗೂ ಲಯನ್ಸ್ ಸಂಸ್ಥೆಯ ಪಾತ್ರ’ ವಿಚಾರ ಸಂಕಿರಣ ಹಾಗೂ ಲಯನ್ಸ್ ಮಾಧ್ಯಮ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಎಚ್ಚರಿಕೆಯಿಂದ ಇದ್ದರೆ ಜೀವ, ಜೀವನವನ್ನು ರಕ್ಷಿಸಿಕೊಳ್ಳಬಹುದು ಎಂದರು.

’ಲಯನ್ಸ್ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರತಿಯೊಬ್ಬರಲ್ಲೂ ತಾಯಿಯ ಹೃದಯ ಇದೆ. ಕೋವಿಡ್-೧೯ ಕಷ್ಟಕರ ಸಂದರ್ಭದಲ್ಲಿ ಕೆಲಸ ನಿರ್ವಹಿಸಿದ ಪತ್ರಕರ್ತರನ್ನು ಗುರುತಿಸಿ ೧೨ ಜನ ಪತ್ರಕರ್ತರಿಗೆ ಪ್ರಶಸ್ತಿ ನೀಡುತ್ತಿರುವುದು ಶ್ಲಾಘನೀಯ ಎಂದರು.

’ಸರ್ಕಾರದ ಮಾರ್ಗಸೂಚಿಗಳನ್ನು ಹಾಗೂ ಆದೇಶಗಳನ್ನು ಸಾರ್ವಜನಿಕರಿಗೆ ತಿಳಿಸುವಲ್ಲಿ ಮಾಧ್ಯಮಗಳ ಪಾತ್ರ ಬಹಳಷ್ಟಿದೆ. ಕೊರೊನಾದಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಬೇಕು. ಅದು ಪ್ರತಿಯೊಬ್ಬರ ಜವಾಬ್ದಾರಿ. ಕೊರೊನಾ ಎರಡನೇ ಅಲೆ ಫೆಬ್ರವರಿ ಮತ್ತು ಮಾರ್ಚ್ ನಲ್ಲಿ ಜಾಸ್ತಿಯಾಗುವ ಸಂಭವವಿದೆ. ಆದುದರಿಂದ ಇನ್ನೂ ಒಂದು ವರ್ಷ ಮಾಸ್ಕ್ ಧರಿಸುವುದು ಅನಿವಾರ್ಯ ಎಂದರು.

ಕೋವಿಡ್-೧೯ ಆತಂಕವೇ ಹೊರತು ಕಳಂಕವಲ್ಲ. ಸತ್ತ ವ್ಯಕ್ತಿಯಿಂದ ಯಾವುದೇ ವೈರಾಣು ಹರಡುವುದಿಲ್ಲ. ಮಾಸ್ಕ್ ಧರಿಸುವುದು, ಸಾಮಾಜಿಕ ಜೊತೆಗೆ ದೈಹಿಕ ಅಂತರವನ್ನು ಕಾಯ್ದುಕೊಳ್ಳುವುದು ಮತ್ತು ಗುಂಪಿನಿಂದ ದೂರುವಿರುವುದು ಇವಿಷ್ಟನ್ನು ಪಾಲಿಸುವುದು ಬಹಳ ಮುಖ್ಯ ಎಂದು ಹೇಳಿದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಜಂಟಿ ನಿರ್ದೇಶಕ ಡಿ.ಪಿ.ಮುರಳೀಧರ್ ಮಾತನಾಡಿ ಕೋವಿಡ್-೧೯ ಸಂದರ್ಭದಲ್ಲಿ ಮಾಧ್ಯಮಗಳಷ್ಟೇ ಅಲ್ಲ ಸರ್ಕಾರವು ಸಹ ಅತ್ಯಂತ ಜವಾಬ್ದಾರಿಯುತ ಕೆಲಸ ಕಾರ್ಯ ನಿರ್ವಹಿಸಿದೆ. ಮಾಧ್ಯಮದವರು ಕಷ್ಟ ಮತ್ತು ಕ್ಲಿಷ್ಟಕರ ಸಂದರ್ಭದಲ್ಲಿ ಕೆಲಸ ಮಾಡಿರುವುದು ನಿಜಕ್ಕೂ ಹೆಮ್ಮೆಯ ವಿಚಾರ. ಜಾಗೃತಿ ಮೂಡಿಸುವಲ್ಲಿ ಮಾಧ್ಯಮಗಳು ಮೊದಲನೇ ಸಾಲಿನಲ್ಲಿ ನಿಲ್ಲುತ್ತವೆ. ಅದರಲ್ಲೂ ನಮ್ಮ ಕರ್ನಾಟಕ ರಾಜ್ಯ ಸರ್ಕಾರ ಅತ್ಯುತ್ತಮವಾಗಿ ಕೆಲಸ ನಿರ್ವಹಿಸಿದೆ. ಅದೇ ರೀತಿ ಲಯನ್ಸ್ ಸಂಸ್ಥೆಯು ಸಹ ಕೊರೊನಾ ವಾರಿಯರ್ಸ್ ರೀತಿಯಲ್ಲಿ ಕೆಲಸ ಮಾಡಿದೆ ಎಂದು ಹೇಳಿದರು.

 

Related Articles

Leave a Reply

Your email address will not be published. Required fields are marked *

Back to top button
error: Content is protected !!