Bengaluru

ನೆಹರೂ ದೂರದೃಷ್ಟಿಯೇ ಸ್ವಾತಂತ್ರ್ಯ ಭಾರತದ ಪ್ರಗತಿಯ ಬುನಾದಿ: ಡಿ.ಕೆ ಶಿವಕುಮಾರ

ಬೆಂಗಳೂರು, ನ.14 (ಯುಎನ್ಐ) ಪಂಡಿತ ಜವಾಹರಲಾಲ್ ನೆಹರೂ ಅವರ ತತ್ವ ಸಿದ್ಧಾಂತಗಳು, ದೂರದೃಷ್ಟಿಯೇ ಸ್ವತಂತ್ರ ಭಾರತದ ಪ್ರಗತಿ ಇತಿಹಾಸದ ಭದ್ರ ಬುನಾದಿ. ಇದನ್ನು ಉಳಿಸಿಕೊಂಡು ಹೋಗಬೇಕಿರುವುದು ನಮ್ಮ ಜವಾಬ್ದಾರಿ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ದೇಶದ ಪ್ರಥಮ ಪ್ರಧಾನಮಂತ್ರಿ ಪಂಡಿತ್ ಜವಾಹರಲಾಲ್ ನೆಹರೂ ಅವರ ಜನ್ಮದಿನದ ಅಂಗವಾಗಿ ಕ್ವೀನ್ಸ್ ರಸ್ತೆಯ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಶಿವಕುಮಾರ್ ಅವರು ನೆಹರೂ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.

ಬಿಜೆಪಿ ನಾಯಕರು ದೇಶದ ಇತಿಹಾಸ ಬದಲಿಸುತ್ತೇನೆ ಎಂದರೆ ಅದು ದೇಶಕ್ಕೆ ಆಗುವ ನಷ್ಟ. ಕಾಂಗ್ರೆಸ್ ಪಕ್ಷದ ಇತಿಹಾಸವೇ ದೇಶದ ಇತಿಹಾಸ. ಕಾಂಗ್ರೆಸ್ ನಾಯಕರ ಇತಿಹಾಸ ದೇಶದ ಅಭಿವೃದ್ಧಿಯ ಇತಿಹಾಸ. ಕಾಂಗ್ರೆಸ್ ನಾಯಕರ ತ್ಯಾಗ ಬಲಿದಾನವೇ ಭಾರತದ ಸ್ವಾತಂತ್ರ್ಯದ ಇತಿಹಾಸ. ನೆಹರೂ ಅವರು ವಿದ್ಯಾಭ್ಯಾಸ ಮುಗಿಸಿ ಬಂದ ಮೇಲೆ 1920ರಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಿ ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಸಿಕೊಂಡರು. ನಂತರ ಗಾಂಧೀಜಿ ಅವರ ಜತೆ ಕೆಲಸ ಮಾಡಿದರು. ನೆಹರೂ ಅವರು ತಮ್ಮ ಆಸ್ತಿಯನ್ನು ಮಾರಾಟ ಮಾಡಿ ಚಳುವಳಿಗೆ ಸಹಾಯ ಮಾಡಿದ್ದರು. ಅವರು 1929ರಲ್ಲಿ ಕಾಂಗ್ರೆಸ್ ಅಧ್ಯಕ್ಷರಾಗುವ ಮುನ್ನ, ಅಲಹಾಬಾದ್ ಪಾಲಿಕೆಯಲ್ಲಿ ಮುಖ್ಯಸ್ಥರಾಗಿ ಕೆಲಸ ಮಾಡಿದ್ದರು ಎಂದು ಡಿ.ಕೆ.ಶಿವಕುಮಾರ ತಿಳಿಸಿದರು.

ನೆಹರೂ ಅವರಿಗೆ ಪ್ರಧಾನಮಂತಿ ಹುದ್ದೆ ಏಕಾಏಕಿ ಸಿಗಲಿಲ್ಲ. ಅವರ ಹೋರಾಟ, ಸ್ಥಳೀಯ ಸಂಸ್ಥೆಗಳಲ್ಲಿ ನಿರ್ವಹಿಸಿದ ಕಾರ್ಯ, ಸ್ಥಳೀಯ ಮಟ್ಟದಿಂದ ಮಾಡಿದ ಕೆಲಸ ಅವರನ್ನು ನಾಯಕರನ್ನಾಗಿ ಬೆಳೆಸಿತು. ರಾಜಗೋಪಾಲಾಚಾರಿ, ಸುಭಾಷ್ ಚಂದ್ರ ಬೋಸ್ ಅವರು ಕೂಡ ಸ್ಥಳೀಯ ಆಡಳಿತ ವ್ಯವಸ್ಥೆಯಲ್ಲಿ ಕೆಲಸ ಮಾಡಿದ್ದಾರೆ ಎಂದರು.

ನೆಹರೂ ಅವರು ಪ್ರಧಾನಿಯಾಗಿ ಮಾಡಿದ ಮೊದಲ ಕೆಲಸ ವಿಧವೆಯರ ಶೋಷಣೆ ತಪ್ಪಿಸಿದ್ದು ಮತ್ತು ಅವರಿಗೆ ಸಮಾನ ಆಸ್ತಿ ಹಕ್ಕು ನೀಡಿದ್ದು. ರಾಷ್ಟ್ರದಲ್ಲಿ ಉದ್ಯೋಗ ಸೃಷ್ಟಿಸಲು ಸಾರ್ವಜನಿಕ ವಲಯದ ಸಂಸ್ಥೆಗಳನ್ನು ಆರಂಭಿಸಿದರು. ಅಂತಹ ಸಂಸ್ಥೆಗಳನ್ನು ಇದೀಗ ಬಿಜೆಪಿ ಸರ್ಕಾರ ಖಾಸಗಿಯವರಿಗೆ ಮಾರಲು ಮುಂದಾಗಿದೆ ಎಂದು ಹೇಳಿದರು.

ನಮ್ಮ ನಾಯಕರು ಎಚ್.ಎಂ.ಟಿ, ಐಟಿಐ, ಹೆಚ್ ಎಎಲ್ ಸೇರಿದಂತೆ ಅನೇಕ ಸಂಸ್ಥೆಗಳನ್ನು ಸ್ಥಾಪಿಸಿದರು. ಈಗ ರೈಲ್ವೆ ವ್ಯವಸ್ಥೆಯನ್ನೂ ಖಾಸಗೀಕರಣ ಮಾಡಲು ಕೇಂದ್ರ ಸರಕಾರ ಮುಂದಾಗಿದೆ. ನಮ್ಮ ನಾಯಕರು ದೇಶಕ್ಕಾಗಿ ಮಾಡಿದ ಆಸ್ತಿಯನ್ನು ಇವರು ಮಾರುತ್ತಿದ್ದಾರೆ. ಇದನ್ನೆಲ್ಲ ಅವರು ತಮ್ಮ ಆಪ್ತರಿಗೆ ಮಾರುತ್ತಿದ್ದಾರೆ ಎಂದು ಡಿ.ಕೆ.ಶಿವಕುಮಾರ ತಿಳಿಸಿದರು.

ನೆಹರೂ ಅವರ ತ್ಯಾಗ, ಸಿದ್ಧಾಂತ, ಆಚಾರ, ವಿಚಾರ ದೇಶದ ಅಭಿವೃದ್ಧಿಗೆ ಭದ್ರ ಬುನಾದಿ. ಅವರು ವಿಶ್ವದ ಅನೇಕ ರಾಷ್ಟ್ರಗಳ ಜತೆ ಉತ್ತಮ ಸಂಬಂಧ ಬೆಳೆಸಿದ್ದರು. ಸರ್ದಾರ್ ವಲ್ಲಭಭಾಯಿ ಪಟೇಲ್ ಅವರೇ ನೆಹರೂ ಅವರ ಹೆಸರನ್ನು ಪ್ರಧಾನ ಮಂತ್ರಿ ಸ್ಥಾನಕ್ಕೆ ಸೂಚಿಸಿದ್ದರು. ಹಾಗೆಂದು ಪಟೇಲರ ಪುತ್ರಿಯೇ ಪತ್ರ ಬರೆದಿರುವ ದಾಖಲೆ ಇದೆ. ಭಿನ್ನಾಭಿಪ್ರಾಯ ಏನೇ ಇದ್ದರೂ ವ್ಯಕ್ತಿಗಳು, ರಾಜ್ಯ, ಧರ್ಮಗಳ ನಡುವೆ ವೈಮನಸ್ಸು ಸೃಷ್ಟಿಸಬಾರದು. ಕಿಚ್ಚು ಹಚ್ಚಬಾರದು ಎಂದರು.

 

Related Articles

Leave a Reply

Your email address will not be published. Required fields are marked *

Back to top button
error: Content is protected !!