Belagavi

ಅಪ್ರಾಪ್ತೆಯ ಸಾಮೂಹಿಕ ಅತ್ಯಾಚಾರ; ಎಲ್ಲ ೫ ಅತ್ಯಾಚಾರಿಗಳಿಗೆ ಜೀವಾವಧಿ ಶಿಕ್ಷೆ

ಬೆಳಗಾವಿ, ೧೩- ಬೆಳಗಾವಿ ತಾಲೂಕಿನ ಮುತ್ಯಾನಟ್ಟಿ ಗ್ರಾಮದ ಗುಡ್ಡದಲ್ಲಿ 2017 ರಲ್ಲಿ ನಡೆದಿದ್ದ ಅಪ್ರಾಪ್ತೆಯ ಸಾಮೂಹಿಕ ಅತ್ಯಾಚಾರದ ಎಲ್ಲ ಐದೂ ಅತ್ಯಾಚಾರಿಗಳಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗು ತಲಾ ಐದು ಲಕ್ಷ ರೂಪಾಯಿ ದಂಡ ವಿಧಿಸಿದೆ.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಮಂಜಪ್ಪ ಅಣ್ಣಯ್ಯನವರ ಪೋಕ್ಸೋ ಕಾಯ್ದೆಯಡಿ ಐವರಿಗೆ ಶಿಕ್ಷೆಯನ್ನು ಪ್ರಕಟಿಸಿದ್ದಾರೆ.

2017 ರಲ್ಲಿ ಪ್ರೇಮಿಗಳ ದಿನಾಚರಣೆಯ ಮಾರನೇ ದಿನ ಫೆಬ್ರವರಿ 15 ರಂದು ಓರ್ವ ಯುವಕ, ಯುವತಿ ಮುತ್ಯಾನಟ್ಟಿ ಗುಡ್ಡಕ್ಕೆ ಅಲೆದಾಡಲು ತೆರಳಿದ್ದರು. ಆಗ ಈ ಐವರು ದುರುಳರು ಯುವಕನನ್ನು ಥಳಿಸಿ ಯುವತಿಯನ್ನು ಅತ್ಯಾಚಾರಗೈದಿದ್ದರು.
ಅಲ್ಲದೇ ವಿಷಯ ಬಹಿರಂಗ ಪಡಿಸಿದರೆ ಕೊಲೆ ಮಾಡುವ ಬೆದರಿಕೆಯನ್ನೂ ಹಾಕಿದ್ದರು.

ಆದರೆ ಅತ್ಯಾಚಾರ ವಿಷಯ ತಿಳಿದು ಅಪ್ರಾಪ್ತೆಯ ಪೋಷಕರು ಕಾಕತಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಆಗಿನ ಪೊಲೀಸ್ ಇನ್ಸ್ಪೆಕ್ಟರ್ ರಮೇಶ ಗೋಕಾಕ ಹಾಗೂ ಸಿಬ್ಬಂದಿ ಸೇರಿ ಆರೋಪಿಗಳನ್ನು ಪತ್ತೆ ಹಚ್ಚಿ ಸೂಕ್ತ ಸಾಕ್ಷಿ ಸಮೇತ ನ್ಯಾಯಾಲಯ ಮುಂದೆ ಹಾಜರು ಪಡಿಸಿದ್ದರು.

ಮುತ್ಯಾನಟ್ಟಿಯ ಸಂಜು ಸಿದ್ದಪ್ಪ ದಡ್ಡಿ ( 24 ) , ಸುರೇಶ ಬರಮಪ್ಪ ದಡ್ಡಿ ( 24 ) , ಸುನೀಲ ಲಗಮಪ್ಪ ಡುಮ್ಮಗೋಳ ( 21 ) , ಮಣಗುತ್ತಿಯ ಮಹೇಶ ಬಾಲಪ್ಪ ಶಿವಣ್ಣಗೋಳ ( 23 ) ಹಾಗೂ ಶಹಾಪುರದ ಸೋಮಶೇಖರ ದುರದುಂಡೇಶ್ವರ ( 23 ) ಎಂಬುವರ ವಿರುದ್ಧ ಅತ್ಯಾಚಾರ ಆರೋಪ ಸಾಬೀತಾಗಿದೆ .

ತನಿಖಾಧಿಕಾರಿ ರಮೇಶ ಗೋಕಾಕ ಅವರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರು 186 ದಾಖಲೆಗಳು ಹಾಗೂ 46 ಮುದ್ದೆಮಾಲು ಗುರುತಿಸಿದ ಆಧಾರ ಮೇಲೆ ಅತ್ಯಾಚಾರವೆಸಗಿದ ಐವರನ್ನು ಅಪರಾಧಿಗಳೆಂದು ಪರಿಗಣಿಸಿದ್ದಾರೆ . ಸಂತ್ರಸ್ತೆಯ ಪರವಾಗಿ ಸರ್ಕಾರಿ ವಿಶೇಷ ಅಭಿಯೋಜಕ ಎಲ್. ವಿ . ಪಾಟೀಲ ವಕಾಲತ್ತು ವಹಿಸಿದ್ದರು.

ಇಂದು ಶುಕ್ರವಾರ ಮುಂಜಾನೆ ಕಾಕತಿ ಪಿಐ ಆರ್ ಹಳ್ಳೂರ, ಪಿಎಸ್ಐ ಅವಿನಾಶ ಯರಗೊಪ್ಪ ಹಾಗೂ ಸಿಬ್ಬಂದಿಗಳು ಐದು ಜನ ಅಪರಾಧಿಗಳನ್ನು ಹಿಂಡಲಗಾ ಜೈಲಿನಿಂದ ಕರೆತಂದು ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್ ಪರೀಕ್ಷೆ ನಡೆಸಿ ನಂತರ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ಈಗ ಶಿಕ್ಷೆ ಪ್ರಕಟವಾದ ನಂತರ ಮತ್ತೆ ಹಿಂಡಲಗಾ ಕಾರಾಗೃಹಕ್ಕೆ ಅಪರಾಧಿಗಳನ್ನು ಕರೆದೊಯ್ಯಲಾಯಿತು.

Related Articles

Leave a Reply

Your email address will not be published. Required fields are marked *

Back to top button
error: Content is protected !!