Bengaluru

ಖ್ಯಾತ ಪತ್ರಕರ್ತ ರವಿ ಬೆಳಗೆರೆ ನಿಧನ

ಬೆಂಗಳೂರು, ನ 13- ಖ್ಯಾತ ಪತ್ರಕರ್ತ, ಅಂಕಣಕಾರ, ಬರಹಗಾರ ರವಿ ಬೆಳಗೆರೆ ನಿಧನರಾಗಿದ್ದಾರೆ. ಅವರಿಗೆ 62 ವರ್ಷ ವಯಸ್ಸಾಗಿತ್ತು.

ಪದ್ಮನಾಭ ನಗರದ ಕಚೇರಿಯಲ್ಲಿ ರಾತ್ರಿ 12.15 ರ ಸುಮಾರಿಗೆ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ನಾಲ್ವರು ಮಕ್ಕಳು ಹಾಗೂ ಇಬ್ಬರು ಪತ್ನಿಯರನ್ನು ಅವರು ಅಗಲಿದ್ದಾರೆ.

ನಿರ್ಭೆಡೆಯ ಬರಹದಿಂದ 1995ರಲ್ಲಿ ಹಾಯ್ ಬೆಂಗಳೂರು ಸಂಪಾದಕರಾಗಿ ಹೆಸರುಗಳಿಸಿದ್ದ ರವಿ ಬೆಳಗರೆ, ನಿರೂಪಕರಾಗಿ, ನಟರಾಗಿಯೂ ಗುರುತಿಸಿಕೊಂಡಿದ್ದರು. ಅಲ್ಲದೆ ಪ್ರಾರ್ಥನಾ ಹೆಸರಿನ ಶಾಲೆಯನ್ನೂ ಸ್ಥಾಪಿಸಿದ್ದರು. ಆರಂಭಿಕ ಹಂತದಲ್ಲಿ ಪ್ರಾಧ್ಯಾಪಕರಾಗಿ ಕೆಲಸ ಮಾಡಿದ್ದರು.

ಪ್ರಾರ್ಥನಾ ಶಾಲೆಯಲ್ಲಿಯೇ ಅವರ ಪಾರ್ಥಿವ ಶರೀರದ ದರ್ಶನಕ್ಕಾಗಿ ಸಾರ್ವಜನಿಕರಿಗೆ ಅವಕಾಶ ಮಾಡಿಕೊಡಲಾಗಿದೆ.

ಉತ್ತಮ ಕಥೆಗಾರರಾಗಿ ಹಲವು ಕಥೆಗಳನ್ನು ಬರೆದಿದ್ದರು. ದಿ ಕಂಪೆನಿ ಆಪ್ ವುಮೆನ್, ಮಾಂಡೋವಿ, ಹೇಳಿ ಹೋಗು ಕಾರಣ, ಪಾ.ವೆಂ.ಹೇಳಿದ ಕಥೆ, ಇಂದಿರಿಯ ಮಗ ಸಂಜಯ ಹೀಗೆ ಹಲವು ಕೃತಿಗಳನ್ನು ರಚಿಸಿದ್ದರು.

ಮಾಧ್ಯಮ ಅಕಾಡೆಮಿ, ರಾಜ್ಯೋತ್ಸವ ಸೇರಿ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದರು.

ಮಧ್ಯರಾತ್ರಿ 12 ಗಂಟೆಗೆ ಸುಮಾರಿಗೆ ಕಚೇರಿಯಲ್ಲೇ ಹೃದಯಾಘಾತಕ್ಕೊಳಗಾಗಿದ್ದ ಅವರನ್ನು ಅಪೋಲೋ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಬದುಕುಳಿಯಲಿಲ್ಲ.

ಕನ್ನಡ ಪತ್ರಿಕೋದ್ಯಮಕ್ಕೆ ಹಾಯ್ ಬೆಂಗಳೂರು ವಾರಪತ್ರಿಕೆ ಮೂಲಕ ನವ್ಯ ಭಾಷ್ಯ ತೋರಿಸಿಕೊಟ್ಟು ಭಾರಿ ಖ್ಯಾತಿ ಗಳಿಸಿದ್ದ ರವಿ ಬೆಳಗೆರೆ, ಕನ್ನಡದ ಪ್ರಮುಖ ಬರಹಗಾರರ ಪೈಕಿ ಮೊದಲ ಸಾಲಿನಲ್ಲಿ ನಿಲ್ಲುವಂತವರಾಗಿದ್ದರು. ಪ್ರಾರ್ಥನಾ ಶಾಲೆ ಅವರ ಅದ್ಭುತ ಕೊಡುಗೆ.

“ಪಾಪಿಗಳ ಲೋಕದಲ್ಲಿ” ಬರಹ ಭೂಗತ ಲೋಕದಲ್ಲಿ ಅವರ ಭಾರಿ ಪ್ರಸಿದ್ಧವಾಗಿತ್ತು. ಪ್ರತಿ ವಿಷಯದ ಕುರಿತು ಸಹ ತಮ್ಮದೇ ನಿಲುವನ್ನು ಪ್ರತಿಪಾದಿಸುತ್ತಿದ್ದರು.

15 ಮಾರ್ಚ್ 1958 ಬಳ್ಳಾರಿಯಲ್ಲಿ ಜನಿಸಿದ್ದ ಅವರು, ಬಳ್ಳಾರಿಯಲ್ಲಿ ಶಿಕ್ಷಣ ಮುಗಿಸಿದರು. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಇತಿಹಾಸ ಮತ್ತು ಪ್ರಾಚ್ಯಶಾಸ್ತ್ರದಲ್ಲಿ ಎಂ.ಎ. ಪದವಿ ಪಡೆದರು. ಅಲ್ಪಕಾಲ ಉಪನ್ಯಾಸಕರಾಗಿ ವೃತ್ತಿ ಮಾಡಿದರು.

ಕನ್ನಡ ಸಾಹಿತಿ, ಚಿತ್ರಕಥೆ ಬರಹಗಾರ, ಈ ಟಿವಿ ವಾಹಿನಿಯ ಜನಪ್ರಿಯ “ಕ್ರೈಂ ಡೈರಿ” ಕಾರ್ಯಕ್ರಮದ ನಿರೂಪಕರಾಗಿ ಹಾಗೂ ಜನಶ್ರೀ ವಾಹಿನಿಯ ಮುಖ್ಯಸ್ಥರಾಗಿ, ಕಾರ್ಯಕ್ರಮಗಳ ನಿರೂಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ.

ಕನ್ನಡದಲ್ಲಿ ಹಲವಾರು ಪುಸ್ತಕಗಳನ್ನು ಬರೆದಿರುವ ಮತ್ತು ಭಾಷಾಂತರಿಸಿರುವ ರವಿ ಬೆಳಗೆರೆ, ಭಾವನಾ ಪ್ರಕಾಶನ, ಭಾವನಾ ಆಡಿಯೋ ರೀಚ್ ಮತ್ತು ಪ್ರಾರ್ಥನಾ ಶಾಲೆಯ ಸಂಸ್ಥಾಪಕರಾಗಿದ್ದರು. ಸಂಯುಕ್ತ ಕರ್ನಾಟಕ, ಕರ್ಮವೀರ ಪತ್ರಿಕೆಗಳಲ್ಲಿ ಸಹ ಕೆಲಸ ಮಾಡಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!