Mangalore

ಮರುಬಳಕೆ ಪ್ಲಾಸ್ಟಿಕ್‌ನಿಂದ ಮನೆ ನಿರ್ಮಾಣ: ತ್ಯಾಜ್ಯ ಸಂಗ್ರಹ ವ್ಯಕ್ತಿಯ ಮಹತ್ ಸಾಧನೆ!

ಮಂಗಳೂರು, ನ 11- ದಕ್ಷಿಣ ಕನ್ನಡ ಜಿಲ್ಲೆಯ ಪಚ್ಚಾಂಡಿಯಲ್ಲಿನ ತ್ಯಾಜ್ಯ ವಸ್ತು ಸಂಗ್ರಹಕಾರರೊಬ್ಬರು’ ಪ್ಲಾಸ್ಟಿಕ್‍ ಫಾರ್ ಚೇಂಜ್‍ ಇಂಡಿಯಾ’ ಪ್ರತಿಷ್ಠಾನದ ಸಹಯೋಗದಲ್ಲಿ ಮರುಬಳಕೆ ಪ್ಲಾಸ್ಟಿಕ್‍ ನಿಂದಲೇ ಮನೆ ನಿರ್ಮಿಸಿ ಸ್ವಚ್ಛ ಪರಿಸರಕ್ಕೆ ತಮ್ಮದೇ ಕೊಡುಗೆ ನೀಡಿದ್ದಾರೆ.

ಕರ್ನಾಟಕದ ಕರಾವಳಿ ತೀರದಲ್ಲಿ ಅನೌಪಚಾರಿಕ ತ್ಯಾಜ್ಯ ಸಂಗ್ರಹಕಾರರ ಜೀವನ ಮಟ್ಟ ಸುಧಾರಿಸಲು ಶ್ರಮಿಸುತ್ತಿರುವ ಪ್ಲಾಸ್ಟಿಕ್ ಫಾರ್ ಚೇಂಜ್ ಇಂಡಿಯಾ ಪ್ರತಿಷ್ಠಾನವು ಪಚ್ಚನಾಡಿಯಲ್ಲಿ ಮರುಬಳಕೆ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಕಾರರೊಬ್ಬರಿಗೆ 4.50 ಲಕ್ಷ ರೂ ವೆಚ್ಚದಲ್ಲಿ ಮನೆ ನಿರ್ಮಿಸಿದೆ.

ಪ್ರತಿಷ್ಠಾನದ ಅಧಿಕಾರಿ ಶಿಫ್ರಾ ಜೇಕಬ್ಸ್ ಸುದ್ದಿಗಾರರೊಂದಿಗೆ ಮಾತನಾಡಿ, ಫಲಾನುಭವಿಗಳಲ್ಲಿ ಒಬ್ಬರಾದ ಕಮಲಾ ಅವರ ಮನೆಯ ನಿರ್ಮಾಣಕ್ಕೆ 1,500 ಕೆಜಿ ಮರುಬಳಕೆ ಪ್ಲಾಸ್ಟಿಕ್ ಅನ್ನು ಬಳಸಲಾಗಿದೆ. ಇದು ನವೀನ ಮತ್ತು ಪರಿಸರ ಸ್ನೇಹಿ ಯೋಜನೆಯಾಗಿದೆ. ಪ್ಲಾಸ್ಟಿಕ್ ತ್ಯಾಜ್ಯವನ್ನು ಕಟ್ಟಡ ಸಾಮಗ್ರಿಗಳಾಗಿ ಬಳಸಿ, ಕಡಿಮೆ ವೆಚ್ಚದಲ್ಲಿ ಮನೆ ನಿರ್ಮಿಸುವುದಕ್ಕೆ ಇದು ನಿದರ್ಶನವಾಗಿದೆ ಎಂದು ಹೇಳಿದ್ದಾರೆ.

ಹೈದರಾಬಾದ್‌ನ ಕಟ್ಟಡ ನಿರ್ಮಾಣ ಪಾಲುದಾರರ ಸಂಸ್ಥೆಯ ನೆರವಿನೊಂದಿಗೆ ಈ ಮನೆಯನ್ನು ನಿರ್ಮಿಸಲಾಗಿದೆ. ಒಂದೇ ಸಮಯದಲ್ಲಿ ಹೆಚ್ಚಿನ ಮನೆಗಳನ್ನು ನಿರ್ಮಿಸಿದರೆ ನಿರ್ಮಾಣ ವೆಚ್ಚ ಕಡಿಮೆಯಾಗುತ್ತದೆ ಎಂದು ಅವರು ಹೇಳಿದ್ದಾರೆ.

‘ಎರಡನೇ ಹಂತದಲ್ಲಿ, ನಾವು ಇಂತಹ 20 ಮನೆಗಳನ್ನು ನಿರ್ಮಿಸಲು ಯೋಜಿಸುತ್ತಿದ್ದೇವೆ. ಇದಕ್ಕಾಗಿ 20 ಟನ್‍ ಗಿಂತ ಅಧಿಕ ಪ್ಲಾಸ್ಟಿಕ್ ಅನ್ನು ಬಳಸಲಾಗುವುದು. ಶೌಚಾಲಯಗಳ ನಿರ್ಮಾಣ ಸೇರಿದಂತೆ ಅನೇಕ ಕಟ್ಟಡ ನಿರ್ಮಾಣಗಳಿಗೆ ಇದನ್ನು ಬಳಸಬಹುದು.’ ಎಂದು ಶಿಫ್ರಾ ಹೇಳಿದ್ದಾರೆ.

ಪ್ರತಿಷ್ಠಾನವು ಮಂಗಳೂರಿನ ಪಚ್ಚನಾಡಿ ಮತ್ತು ಕುರಿಕಟ್ಟದಲ್ಲಿರುವ ಸಮುದಾಯಗಳೊಂದಿಗೆ ಕೆಲಸ ಮಾಡುತ್ತಿದೆ ಎಂದು ಅವರು ಹೇಳಿದ್ದಾರೆ.

 

Leave a Reply

Your email address will not be published. Required fields are marked *

Back to top button
error: Content is protected !!